ಗಣೇಶನ ಸ್ವಾಗತಕ್ಕೆ ಕುಂದಾನಗರಿ ಸಜ್ಜು

| Published : Sep 06 2024, 01:04 AM IST

ಸಾರಾಂಶ

ವಿಘ್ನನಿವಾರಕ ಗಣೇಶನ ಸ್ವಾಗತಕ್ಕೆ ಕುಂದಾನಗರಿ ಸಜ್ಜುಗೊಂಡಿದ್ದು, ಗಣೇಶನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಸಾರ್ವಜನಿಕ ಗಣೇಶ ಮಂಟಪಗಳು ಸಿದ್ಧಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಘ್ನನಿವಾರಕ ಗಣೇಶನ ಸ್ವಾಗತಕ್ಕೆ ಕುಂದಾನಗರಿ ಸಜ್ಜುಗೊಂಡಿದ್ದು, ಗಣೇಶನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಸಾರ್ವಜನಿಕ ಗಣೇಶ ಮಂಟಪಗಳು ಸಿದ್ಧಗೊಂಡಿವೆ. ಈಗಾಗಲೇ ಬೃಹತ್‌ ಗಣೇಶ ಮೂರ್ತಿಗಳನ್ನು ಅದ್ಧೂರಿಯಿಂದ ಸ್ವಾಗತಿಸಲಾಗಿದೆ. ಮಹಾರಾಷ್ಟ್ರದ ಪುಣೆ ಹೊರತುಪಡಿಸಿದರೆ ಬೆಳಗಾವಿ ಗಣೇಶ ಉತ್ಸವಕ್ಕೆ ಖ್ಯಾತಿ ಪಡೆದಿದ್ದು, ಈ ಬಾರಿ ನಗರದ ವಿವಿಧೆಡೆ ಸುಮಾರು 370 ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಬೃಹತ್‌ ಪೆಂಡಾಲ್‌ಗಳು ತಲೆಎತ್ತಿದ್ದು ಶೃಂಗಾರ ಕಾರ್ಯ ಭರದಿಂದ ಸಾಗಿದೆ. ಪೂಜಾ ಸಾಮಗ್ರಿ ಖರೀದಿ ಜೋರು: ಗಣೇಶೋತ್ಸವ ಖರೀದಿ ಹಿನ್ನೆಲೆ ನಗರದಲ್ಲಿ ಜನದಟ್ಟಣೆ ಹೆಚ್ಚಿದ್ದು, ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಗುರುವಾರ ಬೆಳಗ್ಗೆಯಿಂದಲೇ ನಗರದ ಪ್ರಮುಖ ಮಾರುಕಟ್ಟೆ ರಸ್ತೆಗಳು ಜನರಿಂದ ಕಿಕ್ಕಿರಿದು ತುಂಬಿವೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಖಡೇಬಜಾರ್ ರಸ್ತೆ, ಗಣಪತಿ ಗಲ್ಲಿ, ಮಾರುತಿ ಗಲ್ಲಿ ಸೇರಿ ಮತ್ತಿತರ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಪೂಜೆಗೆ ಬೇಕಾದ ಸಾಮಗ್ರಿ, ಹಣ್ಣು ಹಂಪಲು, ತೈಲ, ಖಾದ್ಯ ವಸ್ತುಗಳು, ವೈವಿಧ್ಯಮಯ ಅಲಂಕಾರಿಕ ಸಾಮಗ್ರಿಗಳು, ವಿವಿಧ ಬಣ್ಣಗಳ ದೀಪಗಳ ಸರ ಹಾಗೂ ಪಟಾಕಿಗಳು ಅಂಗಡಿಗಳಲ್ಲಿ ಜನದಟ್ಟನೆ ಕಂಡುಬಂತು.

ಬೆಳಗಾವಿ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸ ಇದೆ. ಕರ್ನಾಟಕದಲ್ಲೇ ಪ್ರಪಥಮವಾಗಿ ಸಾರ್ವಜನಿಕ ಗಣೇಶ ಸ್ಥಾಪನೆ ಮಾಡಿದ್ದು ನಗರದ ಝೇಂಡಾಚೌಕ್‌ನಲ್ಲಿ. ಸ್ವಾತಂತ್ರ್ಯಹೋರಾಟದ ಸಮಯದಲ್ಲಿ ಗಣೇಶೋತ್ಸವ ಮೂಲಕ ಸ್ವಾತಂತ್ರ್ಯ ಹಾಗೂ ಹಿಂದುತ್ವದ ಕಿಚ್ಚು ಹೊತ್ತಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವತಃ ಬೆಳಗಾವಿಗೆ ಬಂದು ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದು ಇತಿಹಾಸ. 1890 ದಶಕದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಚಾಲನೆ ನೀಡಿ ಅಲ್ಲಿ ಯಶಸ್ವಿ ಕಂಡು ನಂತರ ಬೆಳಗಾವಿಗರ ಮಹಾದಾಸೆಗೆ ಸಮ್ಮತಿ ವ್ಯಕ್ತಪಡಿಸಿದ ಬಾಲಗಂಗಾಧರ ತಿಲಕರು 1905ರಲ್ಲಿ ಬೆಳಗಾವಿಗೆ ಬಂದು ಗಣೇಶೋತ್ಸವಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದ್ದರು. ಸ್ವಾತಂತ್ರ್ಯಯೋಧರಾಗಿದ್ದ ಗೋವಿಂದರಾವ್ ಯಾಳಗಿ ಮುಂತಾದವರು ಗಣೇಶೋತ್ಸವ ಮಂಡಳ ಅಸ್ತಿತ್ವಕ್ಕೆ ತಂದ ರೂವಾರಿಗಳು. ಅಂದು ಝೇಂಡಾ ಚೌಕ್‌ದಲ್ಲಿ ಆರಂಭವಾದ ಗಣೇಶೋತ್ಸವ ಪೂಜೆ 120 ವರ್ಷಗಳ ನಡೆದುಕೊಂಡು ಬಂದಿದೆ.

ವಿವಿಧ ವಿನ್ಯಾಸ, ವಿಶೇಷ ವೈಭವ ನಗರದಲ್ಲಿ ಈಗಾಗಲೇ ಕಲಾವಿದರು ತಿಂಗಳುಗಟ್ಟಲೆ ಶ್ರಮ ವಹಿಸಿ ವಿವಿಧ ಆಕರ್ಷಕ ವಿನ್ಯಾಸಗಳ ಗಣೇಶ ಮೂರ್ತಿ ತಯಾರಿಸಿದ್ದಾರೆ. ಒಂದೆರಡು ದಿನ ಮುಂಚಿತವಾಗಿಯೇ ಹಲವು ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳು ಗಣೇಶ ಮೂರ್ತಿಗಳನ್ನು ತಂದಿದ್ದು, ಸೆ.7ರಂದು ಪ್ರತಿಷ್ಠಾಪನೆಗೊಳ್ಳಲಿವೆ. ಮನೆ ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿಗಳನ್ನು ಜನರು ಮಾರಾಟಗಾರ ಬಳಿ ಬುಕ್‌ ಮಾಡಿದ್ದಾರೆ.

ಜೇಡಿ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದಾಗ್ಯೂ ಅವುಗಳಿಗೆ ಬಣ್ಣ, ಅಲಂಕಾರದಲ್ಲಿ ಆದಷ್ಟೂ ಪರಿಸರ ಕಾಳಜಿಯನ್ನು ಅನೇಕ ಕಲಾವಿದರು ವಹಿಸಿದ್ದಾರೆ.

ಲಂಬೋಧರನ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಹದಗೆಟ್ಟುಹೋಗಿರುವ ರಸ್ತೆಗಳಿಗೆ ತಾತ್ಕಾಲಿಕವಾಗಿ ತೇಪೆ ಹಚ್ಚಲಾಗುತ್ತಿದೆ. ಅಲ್ಲಲ್ಲಿ ಹೊಂಡ ಮುಚ್ಚುವ ಕಾರ್ಯವನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಗಿದೆ.

ಮೂರ್ತಿಗಳ ವಿಸರ್ಜನೆ ಹೊಂಡಕ್ಕೂ ಸಿದ್ಧತೆ:

ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ನಗರ ಕಪಿಲೇಶ್ವರ ಹೊಂಡ, ಜಕ್ಕಿನ ಹೊಂಡಗಳಲ್ಲಿ ಸಿದ್ಧತೆಗಳನ್ನು ಮಹಾನಗರ ಪಾಲಿಕೆ ಕೈಗೊಂಡಿದೆ. ಈಗಾಗಲೇ ಹೊಂಡಗಳನ್ನು ಸ್ವಚ್ಛಗೊಳಿಸಿ ಹೊಸದಾಗಿ ನೀರು ತುಂಬಿಸಲಾಗುತ್ತಿದೆ. ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಚಾರಿ ಹೊಂಡದ ವ್ಯವಸ್ಥೆ ಮಾಡಿದೆ. ಮನೆ ಮನೆಗಳಿಗೆ ತೆರಳಿ ವಾಹನದಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸೌಲಭ್ಯ ಕಲ್ಪಿಸಲಾಗಿದೆ.ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಒಂದೇ ಕಡೆ ಅನುಮತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ. ಗಣೇಶ ಮೂರ್ತಿಗಳ ಆಗಮನ ಹಾಗೂ ವಿಸರ್ಜನೆ ಸಂದರ್ಭದಲ್ಲಿ ರಸ್ತೆಯಲ್ಲಿನ ವಿದ್ಯುತ್ ಹಾಗೂ ವಿವಿಧ ದೂರ ಸಂಪರ್ಕ ಕೇಬಲ್‌ ಗಳನ್ನು ಮೇಲಸ್ಥರಕ್ಕೆ ಎತ್ತರಿಸಲು ಕ್ರಮ ಕೈಗೊಳ್ಳಲಾಗಿದೆ.

-ಅಶೋಕ ದುಡಗುಂಟಿ, ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ