ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ/ಮಂಗಳೂರುಕರಾವಳಿಯಲ್ಲಿ ಭಾನುವಾರ ಆರೆಂಜ್ ಅಲರ್ಟ್ ಇದ್ದರೂ ನಿರೀಕ್ಷಿತ ಭಾರಿ ಮಳೆಯಾಗಿಲ್ಲ. ಮಧ್ಯಾಹ್ನ ವರೆಗೆ ಮೋಡ ಇದ್ದು, ಅಪರಾಹ್ನ ಮೋಡ ಹಾಗೂ ಅಲ್ಲಲ್ಲಿ ಮಳೆ ಕಾಣಿಸಿದೆ. ಭಾರತೀಯ ಹವಾಮಾನ ಇಲಾಖೆ ಜು.22ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ಕ್ಷೀಣಗೊಂಡಿದೆ. ಆದರೆ ಈ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಮುಖ್ಯವಾಗಿ ಕುಂದಾಪುರ ಭಾಗದಲ್ಲಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಇಲ್ಲಿನ 13 ಮಂದಿ ರೈತರಿಗೆ 10.65 ಲಕ್ಷ ರು.ಗೂ ಅಧಿಕ ಬೆಳೆ ಹಾನಿಯಾಗಿದೆ.
ದ.ಕ.ಜಿಲ್ಲೆಯಲ್ಲಿ ಭಾನುವಾರ ನಸುಕಿನ ಜಾವದಿಂದ ಬೆಳಗ್ಗಿನ ವರೆಗೆ ಮಳೆ ಸುರಿದಿದೆ. ಬಳಿಕ ಮೋಡದ ವಾತಾವರಣ ಇದ್ದು, ಆಗಾಗ ತುಂತುರು ಮಳೆಯಾಗಿದೆ. ಅಪರಾಹ್ನ ಜಿಲ್ಲೆಯಾದ್ಯಂತ ಹಗುರ ಮಳೆಯಾಗಿದೆ. ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 49.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ದಿನದ ಸರಾಸರಿ ಮಳೆ 36.6 ಮಿ.ಮೀ. ಆಗಿದೆ.ಬಂಟ್ವಾಳ 39.7 ಮಿ.ಮೀ, ಮಂಗಳೂರು 36.8 ಮಿ.ಮೀ, ಪುತ್ತೂರು 27.9 ಮಿ.ಮೀ, ಸುಳ್ಯ 11.7 ಮಿ.ಮೀ, ಮೂಡುಬಿದಿರೆ 36.9 ಮಿ.ಮೀ, ಕಡಬ 41.4 ಮಿ.ಮೀ, ಮೂಲ್ಕಿ 33.9 ಮಿ.ಮೀ. ಹಾಗೂ ಉಳ್ಳಾಲದಲ್ಲಿ 29.2 ಮಿ.ಮೀ. ಮಳೆಯಾಗಿದೆ.
ಕುಂದಾಪುರ ತಾಲೂಕಿನಲ್ಲಿ ಹಾನಿ: ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ಶನಿವಾರ ರಾತ್ರಿ ಗಾಳಿಮಳೆಗೆ 10ಕ್ಕೂ ಹೆಚ್ಚು ಮಂದಿ ರೈತರ ಕಂಗು, ತೆಂಗು ಮರಗಳು ಧರಾಶಾಹಿಯಾಗಿವೆ. ಇಲ್ಲಿನ ಜಯಕರ ಶೆಟ್ಟಿ ಅವರಿಗೆ 2 ಲಕ್ಷ ರು., ಆಶಾಲತಾ ಶೆಟ್ಟಿ ಅವರಿಗೆ 1.50 ಲಕ್ಷ ರು., ಗಿರಿಜಮ್ಮ ಶೆಟ್ಟಿ ಅವರಿಗೆ 1 ಲಕ್ಷ ರು., ದೇವಿ ಪೂಜಾರಿ ಅವರಿಗೆ 1 ಲಕ್ಷ ರು., ನಾಗರತ್ನ ಕುಲಾಲ ಅವರಿಗೆ 1 ಲಕ್ಷ ರು.ಗೂ ಹೆಚ್ಚು ನಷ್ಟವಾಗಿದೆ.ಕಾರ್ಕಳ ತಾಲೂಕಿನ ಮೂಡಾರು ಗ್ರಾಮದ ರುಕ್ಕಯ್ಯ ಆಚಾರಿ ಅವರ ಜಾನುವಾರು ಕೊಟ್ಟಿಗೆಗೆ 30,000 ರು. ಮತ್ತು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಗಿರಿಜಾ ಪೂಜಾರಿ ಅವರ ಜಾನುವಾರು ಕೊಟ್ಟಿಗೆ 20,000 ರು. ನಷ್ಟ ಉಂಟಾಗಿದೆ.ಕಾಪು ತಾಲೂಕಿನ ಉಳಿಯಾರಗೋಳಿಯ ರೋಸಿ ಕೈರಾನ್ಹ ಅವರ ವಾಸ್ತವ್ಯದ ಮನೆ ಸಂಪೂರ್ಣ ಕುಸಿದಿದ್ದು, 1.120 ಲಕ್ಷ ರು. ಹಾನಿಯಾಗಿದ್ದರೆ, ಕುಂದಾಪುರದಲ್ಲಿ 2 ಮತ್ತು ಕಾರ್ಕಳದಲ್ಲಿ 1 ಮನೆಗಳಿಗೆ ಭಾಗಶಃ ಹಾನಿಯಾಗಿ 45 ಸಾವಿರ ರು.ಗಳಷ್ಟು ನಷ್ಟವಾಗಿದೆ.
ಭಾನುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 36.40 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 40.60, ಕುಂದಾಪುರ 34.40, ಉಡುಪಿ 29, ಬೈಂದೂರು 52.70, ಬ್ರಹ್ಮಾವರ 24.90, ಕಾಪು 32.50, ಹೆಬ್ರಿ 29.30 ಮಿ.ಮೀ. ಮಳೆಯಾಗಿದೆ.