ಸಾರಾಂಶ
ಕನ್ನಡಪ್ರಭವಾರ್ತೆ ಕುಣಿಗಲ್ ಕುಣಿಗಲ್ ಕೋಟೆ ಪ್ರದೇಶದಲ್ಲಿರುವ ಹಿರೇಮಠಕ್ಕೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಲಿಂಗೈಕ್ಯ ನಂತರ ಅವರ ತಮ್ಮನ ಮಗನಾದ ವೀರೇಶ್ (32) ರವರನ್ನು ಹೊಸ ಪೀಠಾಧಿಕಾರಿಯಾಗಿ ಆಯ್ಕೆಯಾಗಿದ್ದು, ಸಿದ್ದಗಂಗಾ ಮಠದಲ್ಲಿ ಮುಂದಿನ ಹಂತದ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಿರೇಮಠದ ಮುಂದಿನ ಪೀಠ ಅಧ್ಯಕ್ಷರ ಆಯ್ಕೆ, ಸಂಪುಟ ರಚನೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕುಣಿಗಲ್ ಕೋಟೆ ಪ್ರದೇಶದ ವಾಸಿಗಳಾದ ಕೆ ಸಿ ಬಸವರಾಜು ಮತ್ತು ಬಿ ವಿ ಸವಿತಾ ಅವರ ಮೊದಲನೆಯ ಮಗ ವೀರೇಶ್ ಹಿರೇಮಠ ಉತ್ತರಾಧಿಕಾರಿ ದೀಕ್ಷೆ ಸ್ವೀಕರಿಸಲಿದ್ದಾರೆ. ಈ ದಂಪತಿಗೆ ಮೂವರು ಗಂಡು ಮಕ್ಕಳಿದ್ದು ಮೊದಲನೆಯ ಮಗನನ್ನು ಮಠಕ್ಕೆ ಸ್ವಾಮೀಜಿ ಆಗಿ ಮಾಡಲು ಒಪ್ಪಿದ್ದು ಎರಡನೆಯ ಮಗ ಗುರುಪ್ರಸಾದ್ ಹಾಗೂ ಮೂರನೆಯ ಮನೋಜ್ ರವರ ಜೊತೆಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು 600 ವರ್ಷಗಳ ಇತಿಹಾಸ ಇರುವ ಕುಣಿಗಲ್ ಹಿರೇಮಠಕ್ಕೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವರ್ಷ ಅನಾರೋಗ್ಯದಿಂದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದ ಹಿನ್ನೆಲೆಯಲ್ಲಿ ಮಠದ ನಿರ್ವಹಣೆ ಹಾಗೂ ಜವಾಬ್ದಾರಿಯನ್ನು ನಿರ್ವಹಿಸಲು ವೀರೇಶ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎಡೆಯೂರು ಸಿದ್ದಲಿಂಗೇಶ್ವರರ ಕಾಲಾವಧಿ ಸಂದರ್ಭದಲ್ಲಿ ನಿರ್ಮಿತಗೊಂಡ ಈ ಮಠಕ್ಕೆ ಬೆಂಗಳೂರು ತುಮಕೂರು ಮಂಡ್ಯ ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ತನ್ನದೇ ಆದ ಭಕ್ತರನ್ನು ಹೊಂದಿದೆ .ಕನ್ನಡಪ್ರಭದೊಂದಿಗೆ ಮಾತನಾಡಿದ ಉತ್ತರಾಧಿಕಾರಿ ವೀರೇಶ್, ನನ್ನ ಚಿಕ್ಕಪ್ಪ ಸ್ವಾಮೀಜಿಗಳಾಗಿದ್ದು ಅವರ ಒಡನಾಟದಿಂದ ನನಗೂ ಕೂಡ ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ನಾನು ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದು, ಮುಂದಿನ ದಿನಗಳಲ್ಲಿ ಮಠದ ಅಭಿವೃದ್ಧಿ, ಧಾರ್ಮಿಕ ಕೆಲಸ ಹಾಗೂ ಭಕ್ತರ ಅಭಿಲಾಷೆಗೆ ತಕ್ಕಂತೆ ಮಠದ ಸಂಪ್ರದಾಯದಂತೆ ನಡೆದುಕೊಳ್ಳುತ್ತೇವೆ ಎಂದರು.
ಮೊದಲ ಮಗ ಮಠಕ್ಕೆ ಸ್ವಾಮೀಜಿ ಆಗುತ್ತಿರುವ ಕುರಿತು ಮಾತನಾಡಿದ ತಂದೆ ಕೆ ಸಿ ಬಸವರಾಜು ಮಠದ ಪರಂಪರೆಯಲ್ಲಿ ಬದುಕಿ ಬಾಳಿದ ನಮಗೆ ಮಠದ ಅಭಿವೃದ್ಧಿ ಬಹು ಮುಖ್ಯವಾಗಿದೆ ಅದಕ್ಕಾಗಿ ನನ್ನ ಮಗನನ್ನು ಮಠದ ಸ್ವಾಮೀಜಿಯಾಗಿ ಕೊಡುಗೆ ನೀಡುತ್ತಿದ್ದೇವೆ ಎಂದು ಭಾವುಕರಾದರು.