ಸಾರಾಂಶ
ಭಜನಾ ಸ್ಪರ್ಧೆಯನ್ನು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು.೧೨ತಂಡಗಳ ಇನ್ನೂರೈವತ್ತು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ನಡೆದ ಭಕ್ತಿಸಿಂಚನ ರಾಗತಾಳಗಳ ಸಮ್ಮಿಲನ ಭ್ರಾಮರೀ ಕುಣಿತ ಭಜನಾ ಸ್ಪರ್ಧೆಯಲ್ಲಿ ಬೈಕಂಪಾಡಿ ಶೇಷಶಯನ ಕುಣಿತ ಭಜನಾ ತಂಡ ಪ್ರಥಮ ಬಹುಮಾನ ಗಳಿಸಿದೆ. ೧೫ ಸಾವಿರ ನಗದು ಬಹುಮಾನ ಪಡೆಯಿತು.ಶ್ರೀ ರಾಮ ಭಜನಾ ಮಂಡಳಿ ಮುಚ್ಚೂರು ಕಾನ ೧೦ ಸಾವಿರದೊಂದಿಗೆ ದ್ವಿತೀಯ ಬಹುಮಾನ, ದೈಲಬೆಟ್ಟು ಕಲ್ಲಮುಂಡ್ಕೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ೫ ಸಾವಿರದೊಂದಿಗೆ ತೃತೀಯ ಬಹುಮಾನ ಹಾಗೂ ಕಡಂದಲೆ ಪಾಲಡ್ಕದ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ, ಸಚ್ಚೇರಿಪೇಟೆ ಸೇವಾಭಾರತಿ ಭಜನಾ ಮಂಡಳಿ ಸಮಾಧಾನಕರ ಬಹುಮಾನ ಪಡೆದುಕೊಂಡಿದೆ.
ಭಜನಾ ಸಂಘಟಕರಾದ ಮೂರುಕಾವೇರಿ ರಾಧಾಕೃಷ್ಣ ನಾಯಕ್ ಮಾತನಾಡಿ, ಹಿಂದೆ ಮನೆಮನೆಗಳಲ್ಲಿ ಭಜನೆಗಳು ನಡೆಯುತ್ತಿದ್ದು, ಮಕ್ಕಳಲ್ಲಿ ಭಜನೆಯ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನ ಅಭಿನಂದನಾರ್ಹ. ಎಲ್ಲ ಮನೆಗಳಲ್ಲೂ ಪ್ರತಿದಿನ ಭಜನೆಯನ್ನು ಮಾಡುವ ಮೂಲಕ ಶಾಂತಿ ನೆಮ್ಮದಿ ನೆಲೆಯಾಗಲಿ. ಆಧ್ಯಾತ್ಮ ಚಿಂತನೆ ಹೆಚ್ಚಲಿ ಎಂದರು. ಕಟೀಲು ದೇವಳದ ಅರ್ಚಕ ಶ್ರೀನಿವಾಸ ಆಸ್ರಣ್ಣ, ಮೂಲ್ಕಿ ತಾಲೂಕು ಕಸಾಪದ ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ., ಉಪನ್ಯಾಸಕಿ ಪೂಜಾ ಕಾಂಚನ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ದೀಪಕ್, ಕಾರ್ಯದರ್ಶಿ ಬಿ. ನಿಶಾ, ಪುಷ್ಪರಾಜ ಜೆ. ಶೆಟ್ಟಿ, ಎಲ್. ಕೃಷ್ಣರಾಜ್ ಐತಾಳ್ ಮತ್ತಿತರರಿದ್ದರು. ತೀರ್ಪುಗಾರರಾದ ಗಣೇಶ್ ನೀರ್ಕರೆ, ಸಂತೋಷ್ ಸಾಲ್ಯಾನ್, ಸಚಿನ್ ಸುವರ್ಣ ಸಸಿಹಿತ್ಲು ಇವರನ್ನು ಗೌರವಿಸಲಾಯಿತು. ದೀಪಕ್ ಅಡ್ಯಾರು ನಿರೂಪಿಸಿದರು.ಭಜನಾ ಸ್ಪರ್ಧೆಯನ್ನು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು. ಭಜನಾ ಸಂಘಟಕಿ ಜ್ಯೋತಿ ಉಡುಪ ಮಾತನಾಡಿ ಭಜನೆಯಿಂದ ದೇವರನ್ನು ಒಲಿಸಿಕೊಳ್ಳುವ ಜೊತೆಗೆ ಭಜನಾ ಸಾಹಿತ್ಯದ ಮನನದಿಂದ ಮಾನಸಿಕ ನೆಮ್ಮದಿಯನ್ನೂ ಪಡೆಯಬಹುದು ಎಂದರು. ಪ್ರಾಂಶುಪಾಲ ಡಾ. ವಿಜಯ್, ಉಪನ್ಯಾಸಕಿ ಪೂಜಾ ಕಾಂಚನ್, ವಿದ್ಯಾರ್ತಿ ಮುಖಂಡರು ಉಪಸ್ಥಿತರಿದ್ದರು. ೧೨ತಂಡಗಳ ಇನ್ನೂರೈವತ್ತು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.