ಗಂಡಿಬಾಗಿಲು ಸಿಯೋನ್‌ ಆಶ್ರಮಕ್ಕೆ ಕುಣಿತ ಭಜನಾ ಮಂಡಳಿ ತಂಡ ಭೇಟಿ

| Published : Feb 13 2025, 12:49 AM IST

ಸಾರಾಂಶ

ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಿಯೊನ್ ಅಶ್ರಮಕ್ಕೆ ಭೇಟಿ ನೀಡಿ ಮಂಡಳಿಯ ವತಿಯಿಂದ ಅಲ್ಲಿನ ಆಶ್ರಮವಾಸಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಹಲವು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯದಲ್ಲೂ ಕುಣಿತ ಭಜನೆಯನ್ನು ನೀಡಿ ಹೆಸರನ್ನು ಪಡೆದಿರುವ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಿಯೊನ್ ಅಶ್ರಮಕ್ಕೆ ಭೇಟಿ ನೀಡಿ ಮಂಡಳಿಯ ವತಿಯಿಂದ ಅಲ್ಲಿನ ಆಶ್ರಮವಾಸಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಎರಡನೇ ವರ್ಷದ ದಾನ ಕಾರ್ಯಕ್ರಮವನ್ನು ಆಶ್ರಮದಲ್ಲಿ ಸಿಯೊನ್ ಆಶ್ರಮ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಯು. ಸಿ.ಪೌಲೋಸ್ ಹಾಗೂ ಮೇರಿ ಪೌಲೋಸ್ ದಂಪತಿ ಗೌರವ ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಯು.ಸಿ.ಪೌಲೋಸ್, ನಿರ್ಗತಿಕರು, ಅನಾಥರು ಹಾಗೂ ನೊಂದವರ ಸೇವೆಯನ್ನು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡಿದಾಗ ಅದು ದೇವರಿಗೆ ಸಲ್ಲಿಸುವ ದೊಡ್ಡ ಕಾಣಿಕೆಯಾಗಿದ್ದು ಇದರಿಂದ ದೇವರು ಸಂತೃಪ್ತರಾಗಿ ನಮ್ಮನ್ನು ರಕ್ಷಿಸುತ್ತಾರೆ ಎಂದರು.

ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಮಾತನಾಡಿ, ಸಿಯೊನ್ ಆಶ್ರಮದವರ ಸೇವೆ ನೋಡುವಾಗ ಕಣ್ಣಲ್ಲಿ ನೀರು ಬರುತ್ತಿದ್ದು ಇಲ್ಲಿನ ಆಶ್ರಮವಾಸಿಗಳ ಸೇವೆ ಮಾಡುತ್ತಿರುವ ಸಿಬ್ಬಂದಿ ಅರ್ಪಣಾಭಾವದ ಮನಸ್ಸು ದೇವರಿಗೆ ಪ್ರಿಯವಾಗಿದೆ ಎಂದರು.

ಬಳಂಜ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಬಳಂಜ ಮಾತನಾಡಿ, ಯು. ಸಿ.ಪೌಲೋಸ್ ಯೇಸು ಕ್ರಿಸ್ತರು ಸಾರಿದ ಅನಾಥರ, ನಿರ್ಗತಿಕರ ಸೇವೆ ಮಾಡುತ್ತಿರುವ ದೊಡ್ಡ ಮಾನವತಾವಾದಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಆಶ್ರಮದ ಸಮನ್ವಯ ಅಧಿಕಾರಿ ರಿತೇಶ್ ಆಶ್ರಮದ ವ್ಯವಸ್ಥೆ ಮತ್ತು ಇಲ್ಲಿನ ಖರ್ಚು ವೆಚ್ಚ, ದಾನಿಗಳ ನೆರವಿನ ಕುರಿತು ಮಾಹಿತಿ ನೀಡಿದರು.

ಅಕ್ಷತಾ ಮತ್ತು ಇತರ ಸಿಬ್ಬಂದಿ ಎಲ್ಲಾ ವಾರ್ಡ್ ಗಳಿಗೆ ಮಂಡಳಿಯ ಸದಸ್ಯರನ್ನು ಕರೆದುಕೊಂಡು ಹೋಗಿ ಅಶ್ರಮವಾಸಿಗಳ ಪರಿಚಯ ಮತ್ತು ಅವರ ನೈಜ ಪರಿಸ್ಥಿತಿಗಳನ್ನು ವಿವರಿಸಿದರು. ಸಿಯೊನ್ ಅಶ್ರಮದಲ್ಲಿರುವ 400ಕ್ಕೂ ಹೆಚ್ಚು ಆಶ್ರಮವಾಸಿಗಳನ್ನು ಹಾಗೂ ಅಲ್ಲಿನ ಅಡಳಿತ ಮಂಡಳಿಯ ಸೇವೆಯನ್ನು ಗುರುತಿಸಿ ಅಶ್ರಮಕ್ಕೆ 10 ಸಾವಿರ ರು. ಮೌಲ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಯು.ಸಿ.ಪೌಲೋಸ್ ಮತ್ತು ಮೇರಿ ದಂಪತಿಯನ್ನು ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಮಂಡಳಿಯ ಸದಸ್ಯರಿಂದ ಒಂದು ಗಂಟೆಯ ಕುಣಿತ ಭಜನೆ, ಮಿಮಿಕ್ರಿ, ಯಕ್ಷಗಾನದ ಹಾಡು, ನೃತ್ಯ ವೈಭವ ವನ್ನು ಸಹ ಆಶ್ರಮವಾಸಿಗಳ ಮುಂದೆ ನಡೆಸಿ ಅವರ ಮನಸ್ಸನ್ನು ಖುಷಿ ಪಡಿಸಲಾಯಿತು.

ಮಂಡಳಿಯ ಅಧ್ಯಕ್ಷ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ತರಬೇತುದಾರರಾದ ಮಾನ್ಯ, ಮಂಡಳಿಯ ಪೋಷಕರು ಉಪಸ್ಥಿತರಿದ್ದರು.