ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಗೋಡೆ ಛಾವಣಿ ಸಮೇತ ಧರೆಗುರುಳಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ಫಾತಿಮತ್ ಸುಹಾನ, ರಶ್ಮಿ, ದೀಕ್ಷಿತ, ಯಶ್ಮಿತಾ ಎಂದು ಗುರುತಿಸಲಾಗಿದೆ. ಗಾಯಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ:ಸುಮಾರು ೫೦ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಕಟ್ಟಡ ಗೋಡೆ ಬಿರುಕು ಬಿಟ್ಟು ಶಿಥಿಲಾವಸ್ಥೆ ತಲುಪಿತ್ತು. ಈ ಬಗ್ಗೆ ಶಾಲಾಭಿವೃದ್ದಿ, ಸ್ಥಳಿಯಾಡಳಿತದಿಂದ ದುರಸ್ತಿ ಅಥವಾ ಕೆಡವಲು ಅನುಮತಿಗಾಗಿ ಸಂಬಂಧಿಸಿದ ಇಲಾಖೆಗೆ ಮನವಿ ನೀಡಲಾಗಿತ್ತು. ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಎಂಜಿನಿಯರ್ ಸಂಗಪ್ಪ ಹುಕ್ಕೇರಿ ಕಟ್ಟಡ ಗುಣಮಟ್ಟ ಪರಿಶೀಲಿಸಿ ಯಾವುದೆ ಅಪಾಯವಿಲ್ಲ ಎಂದು ದಾಖಲಿಸಿದ್ದರು. ದುರಸ್ತಿಗಾಗಿ ಮಳೆಹಾನಿ ಯೋಜನೆಯಡಿಯಲ್ಲಿ ೧.೫೦ ಲಕ್ಷ ರು. ಮಂಜೂರಾಗಿತ್ತು. ಈ ಮೊತ್ತದಲ್ಲಿ ಗೊಡೆ ಬಿರುಕು ಬಿಟ್ಟ ಕಟ್ಟಡದ ಅಡಿಪಾಯ ಗಟ್ಟಿಗೊಳಿಸುವ ಕಾಮಗಾರಿ ನಡೆಸುವ ಸಲುವಾಗಿ ಮಂಗಳವಾರ ಹಿಟಾಚಿ ಮೂಲಕ ಗೋಡೆ ಅಡಿಪಾಯಕ್ಕೆ ತಾಗಿಕೊಂಡಂತೆ ಕಲ್ಲು ಕಟ್ಟಿ ಅಡಿಪಾಯ ಗಟ್ಟಿಗೊಳಿಸುವ ಸಲುವಾಗಿ ಹೊಂಡ ತೆಗೆಯಲಾಗುತ್ತಿತ್ತು. ೫ ಮತ್ತು ೭ ನೇ ತರಗತಿ ನಡೆಯುವ ಕೊಠಡಿಯ ಸುಮಾರು ೨೫ ಮೀಟರ್ ಕಾಮಗಾರಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು.
ಹಳೆ ಕಟ್ಟಡವಾದ್ದರಿಂದ ಅಡಿಪಾಯವೂ ಗುಣಮಟ್ಟದಿರಲಿಲ್ಲ. ಅಲ್ಲದೆ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದರಿಂದ ಕಾಮಗಾರಿ ನಡೆಸುವುದು ಅಪಾಯವಾಗಿದ್ದರೂ ಕಾಮಗಾರಿ ನಡೆಸಲಾಗಿತ್ತು. ಸುಮಾರು ೧೫ ಮೀಟರ್ ನಷ್ಟು ಅಗೆಯುವಷ್ಟರಲ್ಲಿ ಕಾಮಗಾರಿ ನಡೆಸುತ್ತಿದ್ದ ಭಾಗದಲ್ಲಿರುವ ಗೋಡೆ , ಛಾವಣಿ ಸಮೇತ ಕುಸಿದಿದೆ. ಈ ವೇಳೆ ಒಳಗಡೆಯಿದ್ದ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಶಿಕ್ಷಕರು, ಸ್ಥಳಿಯರು, ಎಸ್ ಡಿ ಎಂ ಸಿ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದೇ ಕಟ್ಟಡದ ಮುಂದಿನ ಕೊಠಡಿಯಲ್ಲಿಯೂ ಇತರ ತಗರತಿಗಳಲ್ಲಿ ಪಾಠಗಳು ನಡೆಯುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ವಿದ್ಯಾರ್ಥಿಗಳು ಶಿಕ್ಷಕರು ಹೊರಗಡೆ ಓಡಿ ಹೋಗಿದ್ದಾರೆ.
ಶಾಲೆಯಲ್ಲಿ ೧-೮ನೇ ತರಗತಿವರೆಗೆ ತರಗತಿಗಳಿದ್ದು, ಒಟ್ಟು ೧೭೭ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಘಟನೆ ನಡೆದ ಕಟ್ಟಡದೊಳಗಡೆ ೭ ಮತ್ತು ೫ ನೇ ತರಗತಿ ನಡೆಯುತ್ತಿತ್ತು. ಶಾಲೆಯಲ್ಲಿ ಮುಂದಿನ ತಿಂಗಳು ನಡೆಯಲಿದ್ದ ಖೋ ಖೋ ಪಂದ್ಯಾಟದ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಮೈದಾನದಲ್ಲಿದ್ದರು. ಇದರಿಂದಾಗಿ ಕಟ್ಟಡ ಏಕಾಏಕಿ ಕುಸಿದು ಬಿದ್ದಾಗ ಮಕ್ಕಳು ಕಟ್ಟಡದೊಳಗೆ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಹಾನಿ ತಪ್ಪಿದಂತಾಗಿದೆ.
ಆಕ್ರೋಶ:ಘಟನೆ ಮಾಹಿತಿ ತಿಳಿದು ಸಾರ್ವಜನಿಕರು ಜಮಾಯಿಸಿದರು. ಈ ವೇಳೆ ಸ್ಥಳದಲ್ಲಿದ್ದ ಕಡಬ ತಹಸೀಲ್ದಾರ ಪ್ರಭಾಕರ ಖಜೂರೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ , ಜಿಲ್ಲಾ ಪಂಚಾಯಿತಿ ಇಂಜಿನಿಯಾರ್ ಸಂಗಪ್ಪ ಹುಕ್ಕೇರಿ ಅವರನ್ನು ತರಾಟೆಗೆತ್ತಿಕೊಂಡರು. ಅವರಲ್ಲಿ ಘಟನೆ ಬಗ್ಗೆ ಸಾರ್ವಜನಿಕರು ಅಸಮಾದನ ವ್ಯಕ್ತಪಡಿಸಿ ಇದೊಂದು ಇಂಜಿನಿಯಾರ್ ಬೇಜವ್ದಾರಿ ಕೆಲಸ ಅವರ ವಿರುದ್ದ ಶಿಸ್ತು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಡಬ ತಾಲೂಕು ಪಂಚಾಯಿತಿ ಸಾಹಯಕ ನಿರ್ದೇಶಕ ಚೆನ್ನಪ್ಪ ಗೌಡ, ಕೊಯ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಪೆರಾಬೆ ಗ್ರಾ.ಪಂ ಅಧ್ಯಕ್ಷೆ ಸಂದ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಮೊದಲಾದವರು ಇದ್ದರು. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ ಎಸ್, ಕಡಬ ಠಾಣಾಧಿಕಾರಿ ಅಭಿನಂದನ್ ಹಾಗು ಪೊಲೀಸರು ಬಂದೋಬಸ್ತು ಒದಗಿಸಿದರು...........................
ಮುಖ್ಯ ಶಿಕ್ಷಕ, ಎಂಜಿನಿಯರ್ ಅಮಾನತುಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಶಿಕ್ಷಕ ರಮೇಶ್ ಹಾಗೂ ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಇಂಜಿನಿಯಾರ್ ಸಂಗಪ್ಪ ಹುಕ್ಕೇರಿ ಅವರನ್ನು ಘಟನೆಗೆ ಮುಖ್ಯ ಹೊಣೆಗಾರರನ್ನಾಗಿ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಮಾನತು ಮಾಡಿದ್ದಾರೆ. ಸಂಜೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪುತ್ತೂರು ಸಹಾಯ ಆಯುಕ್ತ ಜುಬಿನ್ ಮೊಹಪಾತ್ರ ಅಮಾನತು ಆದೇಶ ದೃಢೀಕರಿಸಿದರು.