ಕೂರ್ಮಗಡ ದ್ವೀಪ: ಸಂಭ್ರಮದಿಂದ ನಡೆದ ನರಸಿಂಹ ದೇವರ ಜಾತ್ರೆ

| Published : Jan 26 2024, 01:46 AM IST

ಸಾರಾಂಶ

ಅರಬ್ಬಿ ಸಮುದ್ರ ಮಧ್ಯದಲ್ಲಿ ಇರುವ ಕೂರ್ಮಗಡ ದ್ವೀಪದಲ್ಲಿ ಮೀನುಗಾರರ ಆರಾಧ್ಯದೈವವಾದ ನರಸಿಂಹ ದೇವರ ಜಾತ್ರೆ ಗುರುವಾರ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.

ಕಾರವಾರ:

ಅರಬ್ಬಿ ಸಮುದ್ರ ಮಧ್ಯದಲ್ಲಿ ಇರುವ ಕೂರ್ಮಗಡ ದ್ವೀಪದಲ್ಲಿ ಮೀನುಗಾರರ ಆರಾಧ್ಯದೈವವಾದ ನರಸಿಂಹ ದೇವರ ಜಾತ್ರೆ ಗುರುವಾರ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು. ಪ್ರಸಕ್ತ ವರ್ಷ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.ಶ್ರೀ ದೇವರನ್ನು ಕಡವಾಡದಿಂದ ದೋಣಿ ಮೂಲಕ ಗುರುವಾರ ಬೆಳಗ್ಗೆ ತೆಗೆದುಕೊಂಡು ಹೋಗಿ ದ್ವೀಪದ ಮೇಲಿರುವ ಗುಡಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದ್ವೀಪದಲ್ಲಿ ನಡೆಯುವ ಜಾತ್ರೆಗೆ ತೆರಳಲು ಭಕ್ತರಿಗೆ ನಗರದ ಬೈತಖೋಲ್ ಮೀನುಗಾರಿಕೆ ಬಂದರಿನಿಂದ ಕರೆದೊಯ್ಯಲು ಮೀನುಗಾರಿಕಾ ಬೋಟ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ನರಸಿಂಹ ದೇವರಿಗೆ ಬಾಳೆಗೊನೆ ಪ್ರಮುಖ ಹರಕೆಯಾಗಿದ್ದು, ಹೆಚ್ಚಿನ ಭಕ್ತರು ನಗರದಿಂದ ತೆರಳುವಾಗಲೇ ಬಾಳೆಗೊನೆ ಕೊಂಡು ಬೋಟಿನ ಮೇಲೆ ಸಾಗಿ ಕೊನೆ ಹೊತ್ತೇ ಗುಡ್ಡ ಏರುತ್ತಾರೆ. ಇದರೊಂದಿಗೆ ತೆಂಗಿನಕಾಯಿಯ ಪಂಚಕಜ್ಜಾಯ ವಿವಿಧ ರೀತಿಯ ನೈವೇದ್ಯವನ್ನು ಭಕ್ತರು ಅರ್ಪಿಸಿದರು.ಪೊಲೀಸ್ ಭದ್ರತೆ:

೨೦೧೯ ಜನವರಿಯಲ್ಲಿ ನಡೆದ ಜಾತ್ರೆ ವೇಳೆ ದೋಣಿ ದುರಂತ ಸಂಭವಿಸಿ ೧೬ ಜನರು ಮೃತಪಟ್ಟಿದ್ದರು. ಹೀಗಾಗಿ ಜಾತ್ರೆಗೆ ತೆರಳುವವರ ಮೇಲೆ ನಿಗಾ ಈಡಲಾಗುತ್ತದೆ. ಬೈತಖೋಲ ಬಂದರಿನಲ್ಲಿ ಪ್ರತಿಯೊಬ್ಬರ ಹೆಸರು ಪಡೆದು ಬೋಟ್ ಏರಲು ಈ ಬಾರಿ ಅವಕಾಶ ನೀಡಲಾಗಿತ್ತು. ೧೦ ವರ್ಷದೊಳಗಿನ ಮಕ್ಕಳಿಗೆ ತೆರಳಲು ಅವಕಾಶ ನೀಡಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ಜಿಲ್ಲೆಯಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಒಳಗೊಂಡು ವಿವಿಧ ಕಡೆಯಿಂದ ಅಂದಾಜು ೩೫೦೦ ಭಕ್ತರು ಶ್ರೀದೇವರ ದರ್ಶನ ನಡೆದರು. ತಲೆತಲಾಂತರದಿಂದ ನಡೆದುಕೊಂಡು ಬರುತ್ತಿರುವ ಕೂರ್ಮಗಡ ಜಾತ್ರೆಗೆ ಕಳೆದ ಬಾರಿ ಕೋವಿಡ್ ಕಾರಣ ಕೆಲವು ನಿರ್ಬಂಧ ಹೇರಲಾಗಿತ್ತು. ಆದರೆ ಬಾರಿ ಕೋವಿಡ್ ಆತಂಕವಿಲ್ಲದಿರುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

ಕೂರ್ಮಗಡ ಜಾತ್ರೆಗೆ ಇದೇ ಮೊದಲ ಬಾರಿಗೆ ಬಂದಿದ್ದೇವೆ. ಇತಿಹಾಸವಿದ್ದರೂ ಯಾವುದೇ ಸೌಕರ್ಯ ಇಲ್ಲದಿರುವುದು ಬೇಸರವಾಗಿದೆ. ಮುಂದಿನ ದಿನದಲ್ಲಿ ಸ್ಥಳೀಯರೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯವಿರುವ ಸೌಲಭ್ಯ ಕಲ್ಪಿಸುತ್ತೇವೆ. ನೂರಾರು ಬೋಟ್‌ಗಳು ಭಕ್ತರನ್ನು ಹೊತ್ತು ತರುತ್ತವೆ. ದ್ವೀಪವನ್ನು ಹೊತ್ತು ಶ್ರೀದೇವರ ದರ್ಶನ ಪಡೆಯುವುದೇ ಸುಂದರ ಕ್ಷಣವಾಗಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.