ಕುರುಗೋಡು ಪುರಸಭೆ: ಅಧ್ಯಕ್ಷ ಗಾದಿಗೆ ಕಾಂಗ್ರೆಸ್ಸಿನಲ್ಲಿ ಭಾರೀ ಪೈಪೋಟಿ

| Published : Aug 11 2024, 01:40 AM IST

ಸಾರಾಂಶ

ಕುರುಗೋಡು ಗ್ರಾಪಂನಿಂದ ಪುರಸಭೆಯಾಗಿ 2016 ರಲ್ಲಿ ಮೇಲ್ದರ್ಜೆಗೇರಿತು.

ಕುರುಗೋಡು: ರಾಜ್ಯ ಸರ್ಕಾರ ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿದ್ದು, ರಾಜಕೀಯ ಚಟುವಟಿಕೆ ಜೋರಾಗಿದೆ.

ಕಳೆದ 32 ತಿಂಗಳ ಕಾಲ ಅಧಿಕಾರಿಗಳು ಆಡಳಿತ ನಡೆಸಿದ್ದರು. ಈಗ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಬಲು ಸಕ್ರಿಯಗೊಂಡಿದ್ದಾರೆ.

ಕುರುಗೋಡು ಗ್ರಾಪಂನಿಂದ ಪುರಸಭೆಯಾಗಿ 2016 ರಲ್ಲಿ ಮೇಲ್ದರ್ಜೆಗೇರಿತು. ಮೊದಲ ಪುರಸಭೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಮೀಸಲಾತಿ ದೊರೆತಿತ್ತು. ಎರಡನೇ ಅವಧಿಯ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನವು ಎಸ್ಟಿ ಮಹಿಳೆಯ ಪಾಲಾಗಿತ್ತು.

ಕಳೆದ ಎರಡು ಅವಧಿಯಲ್ಲಿ ಪ.ಜಾ ಹಾಗೂ ಪ.ಪಂಗಡದ ಪಾಲಾಗಿದ್ದ ಅಧ್ಯಕ್ಷ ಪಟ್ಟ ಈ ಬಾರಿ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲು ಬರಬಹುದು ಎನ್ನುವುದು ಹಲವರ ನಿರೀಕ್ಷೆಯಾಗಿತ್ತು. ಆದರೆ ಆ ನಿರೀಕ್ಷೆ ಈಗ ಹುಸಿಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲು ಪ್ರಕಟಗೊಂಡಿದೆ. ಆಕಾಂಕ್ಷಿಗಳು ಗುಂಪು ಚರ್ಚೆಯಲ್ಲಿ ತೊಡಗಿದ್ದಾರೆ.

ಕಳೆದ ಮೂರೂವರೆ ವರ್ಷಗಳ ಹಿಂದೆ ಪುರಸಭೆಯ 23 ವಾರ್ಡ್ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಪೈಕಿ 15ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು, 7ರಲ್ಲಿ ಬಿಜೆಪಿ ಅಭ್ಯರ್ಥಿಗಳು ಹಾಗೂ 1ರಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದರು.

ಬಹುಮತ ಹೊಂದಿರುವ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಕಾಂಗ್ರೆಸ್ಸಿನ 1ವಾರ್ಡ್ ನ ಸದಸ್ಯ ಜೆ.ಮಂಜುನಾಥ್, 2ನೇ ವಾರ್ಡ್ ನ ಶಾಂತಮ್ಮ, 11ನೇ ವಾರ್ಡ್ ನ ಎಚ್.ಮಾಂಚಾಲಮ್ಮ, 13ನೇ ವಾರ್ಡ್ ನ ವಿ.ನಟರಾಜ್, 14ನೇ ವಾರ್ಡ್ ನ ನಾಗಭೂಷಣ, 17ನೇ ವಾರ್ಡ್ ನ ಹಂಡಿ ಜೋಗಿ ಸಂಗೀತ, 23ನೇ ವಾರ್ಡ್ ನ ಶೇಖಣ್ಣ ಅವರಲ್ಲಿ ಯಾರಾಗಬಹುದು ಎಂಬುದು ಕುತೂಹಲ ಕೆರಳಿಸಿದೆ.

ಕಳೆದ ಬಾರಿ ಮಹಿಳಾ ಅಧ್ಯಕ್ಷರಾಗಿದ್ದು, ಈ ಬಾರಿ ಪುರುಷರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸದಸ್ಯರು ಇದ್ದಾರೆ. ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ 7 ಸದಸ್ಯರಲ್ಲಿ ಯಾರ ಬಲಗೈ ಮೇಲೆ ಎತ್ತುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.

ಉಪಾಧ್ಯಕ್ಷ ಸ್ಥಾನಕ್ಕೆ 8 ಮಂದಿಯ ಕಣ್ಣು:

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್ ನಲ್ಲಿ 8 ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. 23 ಸದಸ್ಯ ಸ್ಥಾನದ ಪೈಕಿ 15 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ. 7 ಸದಸ್ಯರನ್ನು ಹೊಂದಿರುವ ಬಿಜೆಪಿ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಕಾದು ನೋಡುವ ತಂತ್ರದಲ್ಲಿದೆ.

ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ನೀಡಿರುವುದು ಖಂಡನೀಯ. ಕಳೆದ ಬಾರಿ ಎಸ್ಸಿ-ಎಸ್ಟಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದು, ಈ ಬಾರಿ ಪರಿಶಿಷ್ಟ ಜಾತಿಗೆ ಕೊಟ್ಟಿರುವುದು ಸಲ್ಲದು. ಒಬಿಸಿ, ಸಾಮಾನ್ಯ ವರ್ಗದವರಿಗೆ ಅಧ್ಯಕ್ಷ ಸ್ಥಾನ ಕೊಡಬೇಕಾಗಿತ್ತು ಎನ್ನುತ್ತಾರೆ 10ನೇ ವಾರ್ಡ್ ಬಿಜೆಪಿ ಸದಸ್ಯ ಗೊಲ್ಲರ ನರಸಪ್ಪ.

ಕಳೆದ ಬಾರಿ ಮಹಿಳಾ ಅಧ್ಯಕ್ಷರಾಗಿದ್ದು, ಈ ಬಾರಿ ಪುರುಷ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು. ಈ ಬಾರಿ ಸಿದ್ದರಾಮಯ್ಯ ಸರ್ಕಾರಿ ಇದೆ. ಶಾಸಕರು ಕುರುಗೋಡು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪುರಸಭೆಯ 23 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಾರೆ ಎನ್ನುತ್ತಾರೆ 23ನೇ ವಾರ್ಡ್ ಸದಸ್ಯ ಟಿ.ಶೇಖಣ್ಣ.