ಪಡುಬಿದ್ರಿ ಟೋಲ್ ಶಂಕುಸ್ಥಾಪನೆ: ಗುತ್ತಿಗೆದಾರರನ್ನು ಹಿಮ್ಮೆಟ್ಟಿಸಿದ ಹೋರಾಟಗಾರರು

| Published : Aug 11 2024, 01:39 AM IST / Updated: Aug 11 2024, 01:40 AM IST

ಪಡುಬಿದ್ರಿ ಟೋಲ್ ಶಂಕುಸ್ಥಾಪನೆ: ಗುತ್ತಿಗೆದಾರರನ್ನು ಹಿಮ್ಮೆಟ್ಟಿಸಿದ ಹೋರಾಟಗಾರರು
Share this Article
  • FB
  • TW
  • Linkdin
  • Email

ಸಾರಾಂಶ

ಶಂಕಸ್ಥಾಪನೆಯ ಸುದ್ದಿ ಕೇಳಿ ಕೆಲವೇ ನಿಮಿಷದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮಂದಿ ಸಾರ್ವಜನಿಕರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಪಡುಬಿದ್ರಿ ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದರು.

ಕನ್ನಡಪ್ರಭ ವಾರ್ತೆ ಪಡುಬಿದ್ರಿ

ಸ್ಥಳೀಯ ಜನರ ವಿರೋಧಕ್ಕೆ ಸೊಪ್ಪು ಹಾಕದೆ ಪಡುಬಿದ್ರಿ- ಕಾರ್ಕಳ ರಸ್ತೆ ಟೋಲ್‌ ಗುದ್ದಲಿ ಪೂಜೆ ನಡೆಸಲು ಬಂದ ತಂಡವನ್ನು ಸಾರ್ವಜನಿಕರು ಸೇರಿ ಹಿಂದೆ ಕಳುಹಿಸಿದ ಘಟನೆ ಪಡುಬಿದ್ರಿಯ ಸುಜ್ಲಾನ್ ಕಂಪನಿಯ ಸಮೀಪ ಶನಿವಾರ ನಡೆದಿದೆ.ಜನರ ಹೋರಾಟದ ನೇತೃತ್ವ ವಹಿಸಿರುವ ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಶಂಕುಸ್ಥಾಪನೆಗೆ ಆಗಮಿಸಿದ್ದ ಗುತ್ತಿಗೆದಾರರ ಕಡೆಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ನಂತರ ಮಾತನಾಡಿದ ಅವರು, ಖಾಸಗಿ ಸಂಸ್ಥೆಯೊಂದು ಟೋಲ್ ಗೇಟ್ ನಿರ್ಮಾಣದ ಗುತ್ತಿಗೆ ಪಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್‌ನಿಂದ ಈಗಾಗಲೇ ಜನರು ತೊಂದರೆಗೀಡಾಗಿದ್ದಾರೆ. ಅದಕ್ಕೆ ಕೆಲವೇ ಕಿ.ಮೀ. ದೂರದಲ್ಲಿ ರಾಜ್ಯ ಹೆದ್ದಾರಿಯಲ್ಲಿಯೂ ಟೋಲ್ ಗೇಟ್ ಹಾಕಲು ಸರ್ಕಾರ ಅನುಮತಿ ನೀಡಿರುವುದು ಕಾನೂನುಬಾಹಿರ. ಗುತ್ತಿಗೆದಾರರು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕಲ್ಲುಗಳನ್ನಿಟ್ಟು ಅದಕ್ಕೆ ಅರಸಿನ ಹುಡಿ, ಕುಂಕುಮ ಹಾಕಿ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಜನರನ್ನು ವಂಚಿಸುವ ನಾಟಕವಾಡಿದ್ದಾರೆ ಎಂದಿ ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆ ಇಲ್ಲಿಯೇ ಸಮೀಪದ ಬೆಳ್ಮಣ್ ಪ್ರದೇಶದ ರಾಜ್ಯ ಹೆದ್ದಾರಿಯಲ್ಲಿ ಬೇರೊಂದು ಗುತ್ತಿಗೆ ಕಂಪನಿ ಟೋಲ್ ಗೇಟ್ ಸ್ಥಾಪನೆಗೆ ಯತ್ನಿಸಿ ಜನರ ವಿರೋಧದಿಂದ ಕೈ ಸುಟ್ಟುಕೊಂಡಿತ್ತು. ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ರಸ್ತೆಗೆ ಈಗ ಟೋಲ್ ಗೇಟ್ ಸ್ಥಾಪಿಸಿ ಜನರನ್ನು ಸುಲಿಯಲು ಮುಂದಾದರೆ ಪಡುಬಿದ್ರಿ - ಕಾರ್ಕಳದುದ್ದಕ್ಕೂ ಜನ ಇದನ್ನು ಹಿಮ್ಮೆಟ್ಟಿಸಿಲು ಸಮರ್ಥರಾಗಿದ್ದಾರೆ. ಬೆಳ್ಮಣ್ ಟೋಲ್ ಹೋರಾಟ ಸಮಿತಿಯೂ ಈ ಹೋರಾಟದಲ್ಲಿ ಸಕ್ರಿಯವಾಗಲಿದೆ ಎಂದವರು ಎಚ್ಚರಿಸಿದ್ದಾರೆ.ಶಂಕಸ್ಥಾಪನೆಯ ಸುದ್ದಿ ಕೇಳಿ ಕೆಲವೇ ನಿಮಿಷದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮಂದಿ ಸಾರ್ವಜನಿಕರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಪಡುಬಿದ್ರಿ ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದರು.