ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಕುಶಾಲ್ ಚೌಕ್ಸೆ ಅಧಿಕಾರ

| Published : Jul 05 2024, 12:53 AM IST

ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಕುಶಾಲ್ ಚೌಕ್ಸೆ ಅಧಿಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲ್ ಚೌಕ್ಸೆ ರವರು 2018ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿ, ಚಿಂತಾಮಣಿಯಲ್ಲಿ 2021 ಅಕ್ಟೋಬರ್ ನಲ್ಲಿ ಎಎಸ್ಪಿಯಾಗಿ ಅಧಿಕಾರ ಸ್ವೀಕರಿಸಿ, ಕರ್ತವ್ಯ ನಿರ್ವಹಿಸಿ ಉತ್ತಮ ಹೆಸರನ್ನು ಪಡೆದುಕೊಂಡಿದ್ದು, 2023ರಲ್ಲಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಜಂಟಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನೂತನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಕುಶಾಲ್ ಚೌಕ್ಸೆ ಅವರು ನಗರದ ಹೊರವಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು.

ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕುಶಾಲ್ ಚೌಕ್ಸೆ ಯವರನ್ನು ವರ್ಗಾಯಿಸಿ ಸರ್ಕಾರ ಆದೇಶ ಮಾಡಿತ್ತು. ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕುಶಾಲ್ ಚೌಕ್ಸೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಅಪರಾಧ ಚಟುವಟಿಕೆಗಳು ಮತ್ತು ಸಮಾಜ ವಿರೋಧಿ ಶಕ್ತಿಗಳನ್ನು ತಡೆಯುವ ಎಲ್ಲಾ ಶಕ್ತಿ ಪೊಲೀಸರಿಗೆ ಇದೆ. ಆದ್ದರಿಂದ ಪಾತಕಿಗಳು, ಒಮ್ಮೆ ತಪ್ಪು ಮಾಡಿದವರು ಮತ್ತೆ ಅದೇ ತಪ್ಪು ಮಾಡಬಾರದು. ಯಾರಾದರೂ ಕ್ರಿಮಿನಲ್ ಕೃತ್ಯವನ್ನು ಪುನರಾವರ್ತಿಸಿದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಹಿಂದೆ ಚಿಂತಾಮಣಿ ವಿಭಾಗದಲ್ಲಿ ಎಎಸ್ ಪಿಯಾಗಿ ಕೆಲಸ ಮಾಡಿದ್ದು, ಕಾನೂನಿನ ಮುಂದೆ ಯಾರು ದೊಡ್ಡವರಲ್ಲಾ. ಕಾನೂನು ಎಲ್ಲರಿಗೂ ಒಂದೇ, ಯಾರೇ ತಪ್ಪಿತಸ್ಥರಿರಲಿ ಅವರ ಮೇಲೆ ಕ್ರಮಕೈಗೊಳ್ಳುವ ಎಲ್ಲ ಅಧಿಕಾರ ಮತ್ತು ಸ್ವಾತಂತ್ರ್ಯ ಪೊಲೀಸ್ ಇಲಾಖೆಗಿದೆ. ಸಮಾಜದಲ್ಲಿ ಶಾಂತಿ- ಸೌಹಾರ್ದತೆ ಬೇಕು. ಸಮಾಜ ವಿರೋಧಿ ಕೃತ್ಯಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಕುಶಾಲ್ ಚೌಕ್ಸೆ ರವರು 2018ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿ, ಚಿಂತಾಮಣಿಯಲ್ಲಿ 2021 ಅಕ್ಟೋಬರ್ ನಲ್ಲಿ ಎಎಸ್ಪಿಯಾಗಿ ಅಧಿಕಾರ ಸ್ವೀಕರಿಸಿ, ಕರ್ತವ್ಯ ನಿರ್ವಹಿಸಿ ಉತ್ತಮ ಹೆಸರನ್ನು ಪಡೆದುಕೊಂಡಿದ್ದು, 2023ರಲ್ಲಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಜಂಟಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು.

ನಂತರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿಸಿಪಿಯಾಗಿ ಹುಬ್ಬಳ್ಳಿ-ಧಾರವಾಡಕ್ಕೆ ನೇಮಕ ಮಾಡಲಾಗಿತ್ತು. ಇನ್ನೂ ಹುಬ್ಬಳ್ಳಿ- ಧಾರವಾಡದಲ್ಲಿ ನಡೆದ ಅಂಜಲಿ ಕೊಲೆ ಪ್ರಕರಣದಲ್ಲಿ ಕರ್ತವ್ಯಲೋಪದಡಿ ಡಿಸಿಪಿ ಎಂ.ರಾಜೀವ್ ಅವರ ಅಮಾನತು ನಂತರ ಕುಶಾಲ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಪ್ರಕರಣಗಳಲ್ಲಿ ಕುಶಾಲ್ ಚೌಕ್ಸೆ ಅವರು ಸಾಕಷ್ಟು ಸಾಕ್ಷಗಳನ್ನು ಕಲೆಹಾಕಿದ್ದರು.

ಚಿಂತಾಮಣಿಯಲ್ಲಿ ಕರ್ತವ್ಯ ನಿರ್ವಹಣಾ ವೇಳೆ ಮಟ್ಕಾ ,ಜೂಜಾಟ, ಗ್ಯಾಸ್ ರಿಫೀಲಿಂಗ್,ನಕಲಿ ನೋಟುಗಳ ವರ್ಗಾವಣೆ,ಬೈಕ್ ವೀಲ್ಹೀಂಗ್, ವಾಹನ ಸವಾರರಿಗೆ ಅರಿವು ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಕಾನೂನು ಅರಿವು ಜೊತೆಗೆ ತಾಲೂಕಿನಲ್ಲಿ ಯಾವುದೇ ಅಪರಾಧ ವಿಚಾರಗಳು ನಡೆದರೂ ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರಲ್ಲದೇ, ಪೊಲೀಸ್ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

ಚಿಂತಾಮಣಿ ಎಎಸ್ಪಿ ಕಚೇರಿಯಲ್ಲಿ ತಿಂಗಳಿಗೊಮ್ಮೆ ಸಾರ್ವಜನಿಕರ ಸಭೆ ನಡೆಸಿ, ಕುಂದು ಕೊರತೆಗಳ ಬಗ್ಗೆ ವಿಚಾರಿಸಿ, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಇದರಿಂದಲೇ ಸಾರ್ವಜನಿಕರಿಗೆ ಸಾಕಷ್ಟು ಮೆಚ್ಚುಗೆಯ ಅಧಿಕಾರಿಯಾಗಿ ಹೆಸರು ಪಡೆದುಕೊಂಡಿದ್ದರು.

ಮೊದಲ ಬಾರಿ ಕುಶಾಲ್ ಚೌಕ್ಸೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದಿರುವುದು ಎಲ್ಲರನ್ನು ಆಕರ್ಷಿಸಿದೆ.