ಕುಶಾಲನಗರ: ಪೊಲೀಸ್‌ ಅಧಿಕಾರಿಗಳ ಗಡಿ ಅಪರಾಧ ಸಭೆ

| Published : Mar 30 2024, 12:46 AM IST

ಕುಶಾಲನಗರ: ಪೊಲೀಸ್‌ ಅಧಿಕಾರಿಗಳ ಗಡಿ ಅಪರಾಧ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಡಿ ಭಾಗದ ಅಪರಾಧಗಳ ಬಗ್ಗೆ ಜಂಟಿ ಕಾರ್ಯಾಚರಣೆ ಪರಸ್ಪರ ಮಾಹಿತಿ ವಿನಿಮಯ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ಗಡಿ ಜಿಲ್ಲೆಗಳ ಪೊಲೀಸ್ ಉಪ ವಿಭಾಗದ ಅಧಿಕಾರಿ, ಸಿಬ್ಬಂದಿಯ ಗಡಿ ಅಪರಾಧ ಸಭೆ ಕುಶಾಲನಗರದಲ್ಲಿ ನಡೆಯಿತು.

ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಡಿ ಭಾಗದ ಅಪರಾಧಗಳ ಬಗ್ಗೆ ಜಂಟಿ ಕಾರ್ಯಾಚರಣೆ ಪರಸ್ಪರ ಮಾಹಿತಿ ವಿನಿಮಯ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.ಕುಶಾಲನಗರ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟೆಚ್ಚರ ವಹಿಸುವುದು. ದಾಖಲಾತಿ ರಹಿತವಾಗಿ ಯಾವುದೇ ನಗದು ಅಥವಾ ಚುನಾವಣಾ ಸಾಮಗ್ರಿಗಳು ರವಾನೆ ಆಗದಂತೆ ಎಚ್ಚರ ವಹಿಸುವುದು, ಈ ನಿಟ್ಟಿನಲ್ಲಿ ಗಡಿ ಭಾಗಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದು, ಸಹಕಾರ ಸಮನ್ವಯ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಅವರು ಹೇಳಿದರು.

ಅಪರಾಧಿಗಳು ಜಿಲ್ಲೆಯ ಗಡಿಭಾಗದಲ್ಲಿ ತಲೆಮರೆಸಿಕೊಂಡ ಸಂದರ್ಭ ಜಂಟಿ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚುವುದು, ವಾರೆಂಟ್ ರಹಿತ ಆರೋಪಿಗಳ ಪತ್ತೆಗೆ ಪರಸ್ಪರ ಸಹಕಾರ, ರೌಡಿ ಶೀಟರ್ ಆರೋಪಿಗಳು ತಲೆಮರೆಸಿಕೊಂಡಿದ್ದಲ್ಲಿ ಅವರ ಪತ್ತೆ ಕಾರ್ಯ ನಡೆಸಬೇಕು. ಕೊಲೆ ಆರೋಪಿಗಳು ಪತ್ತೆಯಾಗದಿದ್ದಲ್ಲಿ ಸುಳಿವು ಪತ್ತೆ ಹಚ್ಚುವ ನಿಟ್ಟಿನಲ್ಲಿ ಗಡಿ ಭಾಗಗಳ ಅಧಿಕಾರಿ, ಸಿಬ್ಬಂದಿ ಸಹಕಾರ ನೀಡುವಂತಾಗಬೇಕು. ಮಕ್ಕಳು ಮಹಿಳೆಯರು ಕಾಣೆಯಾಗುವ ಪ್ರಕರಣಗಳ ಬಗ್ಗೆ, ಅಸ್ವಾಭಾವಿಕ ಸಾವು, ಗುರುತು ಪತ್ತೆಯಾಗದ ಪ್ರಕರಣಗಳು, ಸೈಬರ್ ಕ್ರೈಂ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ, ವಿಶೇಷವಾಗಿ ಜಿಲ್ಲೆ ಮತ್ತು ಗಡಿ ಭಾಗದ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಜಿಲ್ಲಾ ಗಡಿಭಾಗದ ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಪರಸ್ಪರ ಮಾಹಿತಿ ವಿನಿಮಯ ಮಾಡಲಾಯಿತು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ನಿರ್ದೇಶನದಂತೆ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ಆಯೋಜನೆಯಾದ ಸಭೆಯಲ್ಲಿ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳ ಗಡಿ ವ್ಯಾಪ್ತಿಯ ಉಪ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಮತ್ತು ಗಡಿ ಭಾಗದ ಪೊಲೀಸ್ ಠಾಣೆಗಳಾದ ಬೈಲುಕೊಪ್ಪ, ಕೊಣನೂರು, ಸುಳ್ಯ, ಸುಬ್ರಹ್ಮಣ್ಯ ವ್ಯಾಪ್ತಿಯ ವಿವಿಧ ವಿಭಾಗಗಳ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಸುದೀರ್ಘ ಚರ್ಚೆ ನಡೆಯಿತು.