ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್‌ ಘಟಕ ನಿರ್ಮಾಣ ಸಿದ್ಧತೆ

| Published : Mar 07 2024, 01:51 AM IST

ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್‌ ಘಟಕ ನಿರ್ಮಾಣ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ -ಮಡಿಕೇರಿ ರಸ್ತೆಯ ಬಸವನಹಳ್ಳಿ ಬಳಿ ನಿರ್ಮಾಣಗೊಳ್ಳುತ್ತಿರುವ ಸುಮಾರು 7.5 ಕೋಟಿ ರು. ವೆಚ್ಚದ ಕಾಮಗಾರಿಗೆ ಇತ್ತೀಚೆಗೆ ಮಡಿಕೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಕಾಮಗಾರಿಗೆ ಪೂರ್ವಭಾವಿ ಸಿದ್ಧತೆ ನಡೆದಿದೆ.

ಕೀರ್ತನಾ

ಕನ್ನಡಪ್ರಭ ವಾರ್ತೆ ಕುಶಾಲನಗರ

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರದ ಕೆಎಸ್ಆರ್‌ಟಿಸಿ ಬಸ್‌ ಘಟಕ ನಿರ್ಮಾಣ ಪೂರ್ವಸಿದ್ಧತಾ ಕಾಮಗಾರಿ ಆರಂಭಗೊಂಡಿದೆ.

ಕುಶಾಲನಗರ -ಮಡಿಕೇರಿ ರಸ್ತೆಯ ಬಸವನಹಳ್ಳಿ ಬಳಿ ನಿರ್ಮಾಣಗೊಳ್ಳುತ್ತಿರುವ ಸುಮಾರು 7.5 ಕೋಟಿ ರು. ವೆಚ್ಚದ ಕಾಮಗಾರಿಗೆ ಇತ್ತೀಚೆಗೆ ಮಡಿಕೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.

ಕುಶಾಲನಗರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಬಸವನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಾಣ ಆಗಲಿದೆ. ಈ ಹಿನ್ನಲೆಯಲ್ಲಿ ಸಂಪೂರ್ಣ ಕಾಡು ಮತ್ತು ಪೊದೆಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

ಮರ ತೆರವು ಸಿದ್ಧತೆ:

ಈ ಪ್ರದೇಶದಲ್ಲಿ ಬೆಳೆದು ನಿಂತಿರುವ ಮರಗಳನ್ನು ತೆರವುಗೊಳಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳ ಮನವಿ ಮೇರೆಗೆ ಈಗಾಗಲೇ ಅರಣ್ಯ ಇಲಾಖೆ ಎಲ್ಲಾ ಸಿದ್ಧತೆ ನಡೆಸಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.

ನಾಲ್ಕು ಎಕರೆ ವ್ಯಾಪ್ತಿ ಪ್ರದೇಶದ ಸುತ್ತಲು ಆವರಣ ಗೋಡೆ ನಿರ್ಮಾಣಕ್ಕೆ ಅವಶ್ಯವಿರುವ ಸಾಮಗ್ರಿಗಳು ಮತ್ತು ಕಟ್ಟಡ ತಳಪಾಯಕ್ಕೆ ಅಗತ್ಯವಿರುವ ಕಬ್ಬಿಣದ ಸರಳು ಮತ್ತಿತರ ವಸ್ತುಗಳು ಈಗಾಗಲೇ ಸರಬರಾಜು ಆಗಿವೆ.

ಘಟಕ ನಿರ್ಮಾಣ ಆಗಬೇಕಿರುವ ಇಡೀ ಪ್ರದೇಶವನ್ನು ಸಮತಟ್ಟುಗೊಳಿಸಲಾಗುತ್ತಿದೆ.

ಸದ್ಯದಲ್ಲಿ ಕಾಮಗಾರಿಗೆ ಚಾಲನೆ ದೊರಕಲಿದೆ ಎಂದು ಗುತ್ತಿಗೆದಾರ ಸಂಸ್ಥೆಯ ಸೈಟ್ ಎಂಜಿನಿಯರ್ ಪವನ್ ಅವರು ಸ್ಥಳಕ್ಕೆ ತೆರಳಿದ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅಂದಾಜು ರು. 7.5 ಕೋಟಿ ವೆಚ್ಚದ ಕಾಮಗಾರಿ ಮೈಸೂರು ಗುತ್ತಿಗೆದಾರರಿಗೆ ಟೆಂಡರ್ ಆಗಿದ್ದು, ನಿರ್ದಿಷ್ಟ ಅವಧಿ ಒಳಗೆ ಆಧುನಿಕ ವಿನ್ಯಾಸದೊಂದಿಗೆ ಕಾಮಗಾರಿ ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಬಸ್ ಡಿಪೋ ಕಾಮಗಾರಿ ಪ್ರಾರಂಭಗೊಳ್ಳುವಲ್ಲಿ ವಿಳಂಬವಾಗಿದ್ದು ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ತಿಳಿಸಿದ್ದಾರೆ.

ವಿಶೇಷವಾಗಿ ಬಸ್ ಡಿಪೋದಲ್ಲಿ ವಿದ್ಯುತ್ ಚಾಲಿತ ಬಸ್ ಗಳಿಗೆ ಅಗತ್ಯವಿರುವ ಪವರ್ ಬ್ಯಾಂಕ್ ಕೂಡ ಸ್ಥಾಪನೆಗೊಳಲಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಮೈಸೂರು ಕುಶಾಲನಗರ ನಾಲ್ಕು ಪಥಗಳ ಹೈವೇ ಕಾಮಗಾರಿ ಪ್ರಾರಂಭಗೊಂಡಿದ್ದು ಇದು ಪ್ರಸಕ್ತ ಬಸ್ ಡಿಪೋ ನಿರ್ಮಾಣಗೊಳ್ಳುತ್ತಿರುವ ಜಾಗದ ಬಳಿ ಕುಶಾಲನಗರ- ಮಡಿಕೇರಿ ಹೆದ್ದಾರಿಯಲ್ಲಿ ಸಂಪರ್ಕ ಪಡೆಯಲಿದೆ.

-------ಕಳೆದ ಹಲವು ವರ್ಷಗಳಿಂದ ಬಸ್ ಡಿಪೋ ಕಾಮಗಾರಿ ಪ್ರಾರಂಭಗೊಳ್ಳುವಲ್ಲಿ ವಿಳಂಬವಾಗಿದ್ದು ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.

-ಡಾ.ಮಂತರ್ ಗೌಡ, ಮಡಿಕೇರಿ ಶಾಸಕ.