ಕುಶಾಲನಗರ: ನವೆಂಬರ್ 19ರಂದು ಮಹಾಗಣಪತಿ ದೇವಾಲಯ ರಥೋತ್ಸವ

| Published : Nov 13 2024, 12:01 AM IST

ಕುಶಾಲನಗರ: ನವೆಂಬರ್ 19ರಂದು ಮಹಾಗಣಪತಿ ದೇವಾಲಯ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದ ಐತಿಹಾಸಿಕ ಶ್ರೀ ಮಹಾಗಣಪತಿ ದೇವಾಲಯ ರಥೋತ್ಸವ 19ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ರಥೋತ್ಸವದ ಅಂಗವಾಗಿ ಡಿ.7,8 ಮತ್ತು 9 ರಂದು ರಾಸುಗಳ ಜಾತ್ರೆ ಮತ್ತು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಡೆಯುವ ಗೋಜಾತ್ರೆಯಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಯಿಂದ ರೈತರು ಪಾಲ್ಗೊಳ್ಳಲಿದ್ದು ತಳಿಯ ರಾಸುಗಳ ಪ್ರದರ್ಶನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದ ಐತಿಹಾಸಿಕ ಶ್ರೀ ಮಹಾಗಣಪತಿ ದೇವಾಲಯ ರಥೋತ್ಸವ 19ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ ಎಂದು ಮಹಾಗಣಪತಿ ದೇವಸ್ಥಾನ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವದ ಅಂಗವಾಗಿ ಉತ್ಸವಾದಿಗಳು ನ.15 ರಿಂದ 25 ರವರೆಗೆ ನಡೆಯಲಿದೆ ಎಂದರು.

ಸೇವಾಕರ್ತರ ಸಹಕಾರದೊಂದಿಗೆ ಬೆಳಗ್ಗೆ ಹಾಗೂ ಸಂಜೆ ವಿವಿಧ ಪೂಜಾ ವಿಧಿಗಳು, ಸಂತರ್ಪಣೆಗಳು ನೆರವೇರಲಿವೆ. ರಥೋತ್ಸವದ ಅಂಗವಾಗಿ ಡಿ.7,8 ಮತ್ತು 9 ರಂದು ರಾಸುಗಳ ಜಾತ್ರೆ ಮತ್ತು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಡೆಯುವ ಗೋಜಾತ್ರೆಯಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಯಿಂದ ರೈತರು ಪಾಲ್ಗೊಳ್ಳಲಿದ್ದು ತಳಿಯ ರಾಸುಗಳ ಪ್ರದರ್ಶನ ನಡೆಯಲಿದೆ. ರೈತರಿಗೆ ಹಾಗೂ ರಾಸುಗಳಿಗೆ ಬೇಕಾದ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.

ದೇವಾಲಯದ ಪ್ರಧಾನ ಅರ್ಚಕ‌ ಆರ್.ಕೆ.ನಾಗೇಂದ್ರ ಮಾತನಾಡಿ, ನ.16 ರಿಂದ 25 ರವರೆಗೆ ನಡೆಯುವ ಉತ್ಸವಾದಿಗಳ ಬಗ್ಗೆ ಮಾಹಿತಿ ಒದಗಿಸಿದರು. ದಕ್ಷಿಣ ಕನ್ನಡದಲ್ಲಿ ಆಚರಿಸುವ ಮಾದರಿಯಲ್ಲಿ ದಟ್ಟೋತ್ಸವದಂದು ವಿಶೇಷ ರಂಗಪೂಜೆ ನೆರವೇರಿಸಲಾಗುವುದು, ಚಂದ್ರಬಿಂಬೋತ್ಸವ ಮತ್ತಿತರ ಉತ್ಸವಾದಿಗಳಿಗೆ ವಿಶೇಷ ಹೂವಿನ ಅಲಂಕಾರಕ್ಕೆ ಪ್ರತ್ಯೇಕ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.

ಪ್ರತಿ ವರ್ಷದ ರೂಢಿಯಂತೆ ಈ ಬಾರಿ ಸೇವಾರ್ಥದಾರರ ಬದಲಿಗೆ ಆಡಳಿತ ಮಂಡಳಿ ವತಿಯಿಂದಲೇ ಬಾಣಸಿಗರನ್ನು ಏರ್ಪಡಿಸಿ ಅವರಿಂದಲೇ ನೈವೇದ್ಯ, ಪ್ರಸಾದ ತಯಾರಿಕೆಗೆ ಒತ್ತು ನೀಡಲಾಗಿದೆ. ಉತ್ಸವಾದಿ ಸಂದರ್ಭ ಬೆಳಗ್ಗೆ ಹಾಗೂ ರಾತ್ರಿ ಎರಡೂ ವೇಳೆ ಕೂಡ ಪ್ರಸಾದ ವಿತರಣೆ ನಡೆಸಲಾಗುತ್ತದೆ ಎಂದರು.

ಪದ್ಧತಿಯಂತೆ ಈ ಬಾರಿ 7 ದಿನಗಳ‌ ಪೈಕಿ ಮೂರು ದಿನಗಳ‌ ಕಾಲ ಮಾತ್ರ ಪಲ್ಲಕ್ಕಿ ಹೊರುವವರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ತಾಂತ್ರಿಕತೆ ಬಳಸಿಕೊಂಡು‌ ಆಯಾ ಉತ್ಸವಗಳ ರೂಪಕ್ಕೆ ಒತ್ತು ನೀಡಿ ‘ಛಾಯಾ ವಾಹನೋತ್ಸವ’ ಎಂಬ ಕಲ್ಪನೆಗೆ ಚಾಲನೆ‌‌ ನೀಡಲಿದ್ದೇವೆ ಎಂದು ತಿಳಿಸಿದರು.

ಉತ್ಸವಗಳು ಬರುವ ಹಾದಿಯಲ್ಲಿ ನಿವಾಸಿಗಳು, ವರ್ತಕರು, ವ್ಯಾಪಾರಿಗಳು ದೀಪಾಲಂಕಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅವರು ಆಗ್ರಹಿಸಿದರು.

ಸಾಂಸ್ಕೃತಿಕ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ಮಾತನಾಡಿ, ಜಾತ್ರೋತ್ಸವ ಅಂಗವಾಗಿ ಪ್ರತಿದಿನ ಸಂಜೆ 7 ರಿಂದ 10 ಗಂಟೆ ತನಕ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ‌ನಡೆಯಲಿವೆ. ಈ ಬಾರಿ 13 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಪ್ರತಿಭೆಗಳು ಒಳಗೊಂಡಂತೆ ಪ್ರಸಿದ್ದ ಕಲಾವಿದರು‌ ಭಾಗಿಯಾಗಲಿದ್ದಾರೆ ಎಂದರು.

ರಾಜ್ಯಮಟ್ಟದ ನೃತ್ಯಸ್ಪರ್ಧೆ, ರಸಮಂಜರಿ, ಹಾಡುಗಾರಿಕೆ, ಜನಪದ, ಶಾಸ್ತ್ರೀಯ ಪ್ರಕಾರಗಳಿಗೆ ಒತ್ತು‌ ನೀಡಲಾಗಿದೆ. ಸರಿಗಮಪ ರಿಯಾಲಿಟಿ ಶೋ ವಿಜೇತರಿಂದ ಕಾರ್ಯಕ್ರಮ, ಸುರೇಶ್ ಗೋಪಿ ಅವರಿಂದ ಮಿಮಿಕ್ರಿ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಆರ್.ಬಾಬು,‌ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ನಿರ್ದೇಶಕರಾದ ಕೆ.ಎನ್.ದೇವರಾಜ್, ಎಚ್.ಎಂ.ಚಂದ್ರು, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್ ರಾವ್ ಇದ್ದರು.