ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಬಿಸಿಲಿನ ಪ್ರತಾಪದೊಂದಿಗೆ ಜೀವನದಿ ಕಾವೇರಿ ತನ್ನ ಹರಿವು ನಿಲ್ಲಿಸಿ ಎರಡು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯ ಸಾವಿರಾರು ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಸ್ಥಳೀಯ ಪುರಸಭಾ ಅಧಿಕಾರಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗೊಂದಿ ಬಸವನಹಳ್ಳಿ ಮತ್ತು ಮಾದಾಪಟ್ಟಣ ಗ್ರಾಮದ ವ್ಯಾಪ್ತಿಯ ಸುಮಾರು 30 ಸಾವಿರ ನಾಗರಿಕರಿಗೆ ನಿತ್ಯ ಟ್ಯಾಂಕರ್ ಬಳಸಿ ನೀರು ಸರಬರಾಜು ಮಾಡಲಾಗುತ್ತಿದೆ.
ಕುಶಾಲನಗರ ಪುರಸಭೆಯ ವ್ಯಾಪ್ತಿಯ ಜನರಿಗೆ ತಲಾ ಕನಿಷ್ಠ 100 ಲೀಟರ್ ನಿತ್ಯ ಅವಶ್ಯಕತೆ ಇದೆ. ಇದನ್ನು ಪೂರೈಸುವಲ್ಲಿ ಕುಶಾಲನಗರದ ಪುರಸಭೆಯ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ಅಧಿಕಾರಿ ಎಂ ಸಿ ಉದಯಕುಮಾರ್ ಪುರಸಭೆಯ ಇಂಜಿನಿಯರ್ ರಂಗರಾಮ್ ಉಸ್ತುವಾರಿ ಹೊತ್ತಿದ್ದಾರೆ.ಪುರಸಭೆ ಸಿಬ್ಬಂದಿ, ನಾಗರಿಕ ಪ್ರಮುಖರು ನಿತ್ಯ ಐದು ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿದರೆ, ಕರ್ನಾಟಕ ರಾಜ್ಯ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿ ಆನಂದ್ ನೇತೃತ್ವದಲ್ಲಿ ಸಿಬ್ಬಂದಿ ಪುರಸಭೆ ಸಹಕಾರದೊಂದಿಗೆ 9 ಟ್ಯಾಂಕರ್ ಗಳನ್ನು ಬಳಸಿ ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸಿ ಸರಬರಾಜು ಮಾಡುತ್ತಿದ್ದಾರೆ.ಕುಶಾಲನಗರ ಪಟ್ಟಣ ವ್ಯಾಪ್ತಿಯ ಸುಮಾರು 63 ಕೊಳವೆ ಬಾವಿಗಳಿಂದ ನಿರಂತರವಾಗಿ ನೀರು ಎತ್ತಲಾಗುತ್ತಿದೆ.
ಹೆಬ್ಬಾಲೆಯಿಂದ ನೀರು ಸರಬರಾಜು:ಹೆಬ್ಬಾಲೆಯಿಂದ ಕಾವೇರಿ ನದಿಯಿಂದ ನೀರು ಎತ್ತುವ ಯೋಜನೆ ಮೂಲಕ ಕುಶಾಲನಗರದ ಕೆಲವು ಗ್ರಾಮಾಂತರ ಪ್ರದೇಶದ ಬಡಾವಣೆಗಳಿಗೆ ಮತ್ತು ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು ಅಲ್ಲಿನ ಜನರಿಗೆ ಯಾವುದೇ ಸಮಸ್ಯೆ ಉಂಟಾಗಿದೆ ನೋಡಿಕೊಳ್ಳಲಾಯಿತು ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.
ಬಹುತೇಕ ಮನೆಗಳಲ್ಲಿ ನೀರನ್ನು ಸಂಗ್ರಹಿಸಲು ಟ್ಯಾಂಕ್ ಗಳು ಇಲ್ಲದೆ ಇರುವ ಕಾರಣ ಮನೆಯಲ್ಲಿ ಇರುವ ಪಾತ್ರೆ ಪಗಡೆಗಳಲ್ಲಿ ಸಂಗ್ರಹಿಸಿ ಇಡಬೇಕಾದ ಪರಿಸ್ಥಿತಿ ಉಂಟಾಗಿತ್ತು ಎಂದು ಪುರಸಭೆ ಆರೋಗ್ಯ ಅಧಿಕಾರಿ ಎಂ ಸಿ ಉದಯಕುಮಾರ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ಕೊಡಗು ಜಿಲ್ಲಾಧಿಕಾರಿ ಸಲಹೆ ಸೂಚನೆಯಂತೆ ಫೆಬ್ರವರಿ ತಿಂಗಳ ಅಂತ್ಯದೊಳಗೆ ನೀರಿನ ಅಭಾವ ತಲೆದೋರದಂತೆ ಸಂಪೂರ್ಣ ವರದಿ ತಯಾರಿಸಿ ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಲಾಗಿತ್ತು ಎಂದು ಎಂಜಿನಿಯರ್ ರಂಗರಾಮ್ ಹೇಳಿದ್ದಾರೆ.
ನೀರು ಸರಬರಾಜಿಗೆ ಸಿದ್ಧತೆ:ಕುಶಾಲನಗರ ಪಟ್ಟಣದಲ್ಲಿ 63 ಕೊಳವೆಬಾವಿಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ. 56 ಹ್ಯಾಂಡ್ ಪಂಪುಗಳು, ಎರಡು ಮಿನಿ ಟ್ಯಾಂಕ್‌ಗಳು, ನಾಲ್ಕು ಓವರ್ ಹೆಡ್ ಟ್ಯಾಂಕ್‌ಗಳು, ಮೂರು ಸಂಪ್ ಹಾಗೂ 10 ಸಣ್ಣ ಟ್ಯಾಂಕ್ ಗಳನ್ನು ಬಳಸಿ ದಿನನಿತ್ಯ ಲಕ್ಷಾಂತರ ಲೀಟರ್ ಪ್ರಮಾಣದ ಕುಡಿಯುವ ನೀರನ್ನು ಸರಬರಾಜು ಮಾಡಲಾಯಿತು ಎಂದು ಆರೋಗ್ಯ ಅಧಿಕಾರಿ ಉದಯಕುಮಾರ್ ಮಾಹಿತಿ ಒದಗಿಸಿದ್ದಾರೆ.
ಮುಂದಿನ ಮಳೆಗಾಲ ತನಕ ಈ ಕಾರ್ಯ ಯೋಜನೆ ನಿರಂತರವಾಗಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ..............
ಲೋಕಸಭಾ ಚುನಾವಣೆ ಸಂದರ್ಭ ಸಿಬ್ಬಂದಿ ಮತ್ತು ಮತಗಟ್ಟೆಗಳ ಅಧಿಕಾರಿಗಳಿಗೆ, ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಚುನಾವಣಾ ಅಧಿಕಾರಿ ಸಿಬ್ಬಂದಿಗಳಿಗೆ ಅಗತ್ಯವಾಗಿ ಬೇಕಾಗಿದ್ದ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರನ್ನು ಕೂಡ ಒದಗಿಸುವಲ್ಲಿ ಪುರಸಭೆ ಯಶಸ್ವಿಯಾಗಿದೆ.-ಕೃಷ್ಣಪ್ರಸಾದ್, ಪುರಸಭೆ ಮುಖ್ಯ ಅಧಿಕಾರಿ.