2025-26ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ ಸೆ. 20 ರಂದು ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ
ಕುಶಾಲನಗರ: ಶತಮಾನೋತ್ಸವ ಆಚರಿಸಿಕೊಂಡಿರುವ ಕುಶಾಲನಗರದ ನಂ. 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನಲ್ಲಿ 1, 11, 87, 000 ರು. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು.ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 105 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸಂಘ ಸತತವಾಗಿ 9 ವರ್ಷಗಳಿಂದ ಕೋಟಿಗೂ ಮೀರಿ ಲಾಭಗಳಿಸುತ್ತಾ ಬಂದಿದೆ. 2025-26ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ ಸೆ. 20 ರಂದು ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಸಂಘವು ಕಳೆದ 35 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರಿಗೆ ಕಳೆದ 15 ವರ್ಷಗಳಿಂದ ಶೇ.16 ರಿಂದ ಶೇ.25 ಡಿವಿಡೆಂಡ್ ನೀಡುತ್ತಿದ್ದು, ಸಂಘದ ‘ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ 25 ರೀತಿಯ ವಿವಿಧ ಸಾಲಗಳನ್ನು ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಾಲಿನಲ್ಲಿ ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ. ಸದಸ್ಯರು ಸಾಲಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕಾಗಿಯೂ ಹಾಗೂ ಪಡೆದುಕೊಂಡಂತಹ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕಾಗಿ ವಿನಂತಿಸಿದರು. ಸಂಘವು ಶತಮಾನೋತ್ಸವ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರಿನಲ್ಲಿ 2 ಎಕರೆ ನಿವೇಶನದಲ್ಲಿ ಕೈಗೊಂಡಿರುವ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಮುಂದಿನ 2027ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.ಸಂಘದ ಉಪಾಧ್ಯಕ್ಷೆ ಕೆ.ವಿ.ನೇತ್ರಾವತಿ, ನಿರ್ದೇಶಕರಾದ ವಿ.ಎಸ್.ಆನಂದಕುಮಾರ್, ಕೆ.ಎನ್.ದೇವರಾಜ್, ಎಂ ಎಂ.ಚರಣ್, ಪಿ.ಬಿ.ಯತೀಶ್, ಪಿ.ಎಂ.ಕವಿತಾ, ಎಂ.ಎಸ್.ರಾಜೇಶ್, ಹೆಚ್.ಎಂ.ಮಧುಸೂದನ್, ಕೆ.ಜಿ.ಮನು, ಪ್ರಸನ್ನ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಇದ್ದರು.