ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳೊಂದಿಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು

ಕನ್ನಡಪ್ರಭ ವಾರ್ತೆ ಕುಶಾಲನಗರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅರಿವು ಮೂಡಿಸುವ ಹಿನ್ನಲೆಯಲ್ಲಿ ಕೊಪ್ಪ ಸಮುದಾಯ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳೊಂದಿಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು.ಡಿ. 21ರಂದು 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಶಿಬಿರಗಳು ಅಂಗನವಾಡಿ ಕೇಂದ್ರಗಳು, ಸರಕಾರಿ ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಸ್ಥಳಗಳಲ್ಲಿ 21ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆ ತನಕ ಕಾರ್ಯನಿರ್ವಹಿಸಲಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ದೀಪಕ್ ಪಿ ಎಸ್ ಕೋರಿದ್ದಾರೆ.ಕೊಪ್ಪ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಿಂದ ಹೊರಟ ಜಾಥಾ ಮುಖ್ಯರಸ್ತೆಯಲ್ಲಿ ತೆರಳಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸುವ ಕೆಲಸ ನಡೆಯಿತು.ಜಾಥಾ ಸಂದರ್ಭ ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಮತ್ತು ಭಾರತ್ ಮಾತಾ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಫಾ. ಎಬಿನ್, ಎನ್ಎಸ್ಎಸ್ ಅಧಿಕಾರಿ ಹೆಚ್ ಆರ್ ದಿನೇಶ್ ಮತ್ತು ಶಿಬಿರಾರ್ಥಿಗಳು ಇದ್ದರು.