ಸಾರಾಂಶ
ಅವಹೇಳನಕಾರಿ ಸಂದೇಶ ರವಾನಿಸಿ ಜಿಲ್ಲೆಯ ಜನತೆ ಹಾಗೂ ದೇಶಕ್ಕೆ ಅಪಮಾನ ಎಸಗಿರುವ ವಕೀಲ ವಿದ್ಯಾಧರ್ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ನಡೆದ ಬಂದ್ ಕುಶಾಲನಗರದಲ್ಲಿ ಬಹುತೇಕ ಸಂಪೂರ್ಣವಾಗಿತ್ತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಅವಹೇಳನಕಾರಿ ಸಂದೇಶ ರವಾನಿಸಿ ಜಿಲ್ಲೆಯ ಜನತೆ ಹಾಗೂ ದೇಶಕ್ಕೆ ಅಪಮಾನ ಎಸಗಿರುವ ವಕೀಲ ವಿದ್ಯಾಧರ್ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ನಡೆದ ಬಂದ್ ಕುಶಾಲನಗರದಲ್ಲಿ ಬಹುತೇಕ ಸಂಪೂರ್ಣವಾಗಿತ್ತು.ಬೆಳಗ್ಗೆ 6 ಗಂಟೆಯಿಂದ 10 ಗಂಟೆ ತನಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತಗೊಂಡಿದ್ದು ನಂತರ ಕುಶಾಲನಗರ ಕೊಡವ ಸಮಾಜ ಅಧ್ಯಕ್ಷರು ಪದಾಧಿಕಾರಿಗಳು ಮಾಡಿದ ಮನವಿ ಮೇರೆಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು ಕಂಡು ಬಂತು.
ಮಡಿಕೇರಿ-ಮೈಸೂರು ರಸ್ತೆ ಮತ್ತು ರಥಬೀದಿಯ ಬಹುತೇಕ ವ್ಯಾಪಾರಸ್ಥರು 12 ಗಂಟೆ ತನಕ ವ್ಯಾಪಾರ ಸ್ಥಗಿತಗೊಳಿಸಿದರು.ಕುಶಾಲನಗರ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಎಂ ಎಚ್ ಮಹಮ್ಮದ್ ನೇತೃತ್ವದಲ್ಲಿ ಎಲ್ಲಾ ಮರದ ಮಿಲ್ಲುಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ವಹಿವಾಟು ಸ್ಥಗಿತಗೊಳಿಸಿದ್ದರು.
ಖಾಸಗಿ ಬಸ್ ಸಂಚಾರ ಬೆಳಗ್ಗಿನಿಂದಲೇ ಸ್ಥಗಿತಗೊಂಡಿತ್ತು.ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು ನಿರ್ದೇಶಕರು ಸದಸ್ಯರು ಕುಶಾಲನಗರ ಗಣಪತಿ ದೇವಾಲಯದ ಬಳಿ ಸೇರಿ ಸೇನಾನಿಗಲ ಅವಹೇಳನ ಆರೋಪಿ ವಿರುದ್ಧ ಘೋಷಣೆ ಕೂಗಿ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದರು.