ಕುಶಾಲನಗರ: ಬಿಜೆಪಿ ಯುವ ಮೋರ್ಚಾ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕುಶಾಲನಗರದಲ್ಲಿ ಬೃಹತ್ ವಾಹನ ಜಾಥಾ ಮೂಲಕ ಆಚರಿಸಲಾಯಿತು. ಗುಡ್ಡೆ ಹೊಸೂರು ಬಳಿಯಿಂದ ನೂರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಆಟೋ ರಿಕ್ಷಾ ಮತ್ತು ಕಾರುಗಳು, ಜೀಪುಗಳ ಮೂಲಕ ತಮ್ಮ ವಾಹನಗಳಲ್ಲಿ ರಾಷ್ಟ್ರ ಧ್ವಜ ಅಳವಡಿಸಿ ನೂರಾರು ವಾಹನಗಳು ಮುಖ್ಯ ರಸ್ತೆಯಲ್ಲಿ ಕುಶಾಲನಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.
ವಾಹನ ಜಾಥಾಕ್ಕೆ ಗುಡ್ಡೆ ಹೊಸೂರು ಬಳಿ ಬಿಜೆಪಿ ಕೊಡಗು ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಕೇವಲ ಸರಕಾರಿ ಕಾರ್ಯಕ್ರಮಗಳಿಗೆ ಸೀಮಿತವಾಗಿ ಆಚರಿಸುತ್ತಿದ್ದು,ಸಾಮಾನ್ಯ ನಾಗರಿಕರು ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿಲ್ಲ ಎಂದು ಹೇಳಿದರು.ಈ ಬೃಹತ್ ವಾಹನ ಜಾಥಾದಲ್ಲಿ ನೂರಾರು ಸಂಖ್ಯೆಯ ಜನರು ಪಾಲ್ಗೊಂಡಿದ್ದು, ಈ ಮೂಲಕ ಸಾವಿರಾರು ಜನರಿಗೆ ದೇಶಭಕ್ತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.ಜಾಥಾದಲ್ಲಿ ಜಿಪಂ ಮಾಜಿ ಸದಸ್ಯ ಬಿ.ಬಿ. ಭಾರತೀಶ್ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಕುಶಾಲನಗರ ತಾಲೂಕು ಅಧ್ಯಕ್ಷ ಗೌತಮ್ ಗೌಡ, ಹಿರಿಯ ಮುಖಂಡರಾದ ಬಲ್ಲಾರಂಡ ಮಣಿ ಉತ್ತಪ್ಪ, ಎಂ.ವಿ. ನಾರಾಯಣ್, ಕವಿತಾ ವಿರೂಪಾಕ್ಷ ಮೋಹಿತ್, ತಮ್ಮಯ್ಯ, ಕಂಠಿ ಕಾರ್ಯಪ್ಪ ನವನೀತ್ ಪೊನ್ನೇಟಿ, ಮಾವಾಜಿ ರಕ್ಷಿತ್, ಸುಮನ್ ಉಮೇಶ್ ಸುಬ್ರಮಣಿ, ಬಿ.ಕೆ. ಜಗದೀಶ್, ಎಂ.ಡಿ. ಕೃಷ್ಣಪ್ಪ, ಭಾಸ್ಕರ ನಾಯಕ್, ಸುಮನ್ ಮತ್ತಿತರರು ಇದ್ದರು.