ಕುಶಾಲನಗರ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

| Published : Aug 09 2025, 12:04 AM IST / Updated: Aug 09 2025, 12:05 AM IST

ಸಾರಾಂಶ

ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ತಾಲೂಕು ಆರೋಗ್ಯ ಅಧಿಕಾರಿ ಡಾ. ಇಂದುಧರ್ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.ತಾಲೂಕು ಆರೋಗ್ಯ ಅಧಿಕಾರಿ ಡಾ. ಇಂದುಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಿ ತಾಯಂದಿರನ್ನು ಹಾಲುಣಿಸಲು ಪ್ರೇರೇಪಿಸಲು ಹಾಗೂ ತಾಯಿ ಮತ್ತು ಮಗುವಿಗೆ ಆಗುವ ಪ್ರಯೋಜನವನ್ನು ಉತ್ತೇಜಿಸಲು ಆ.1ರಿಂದ ಆ.7ರ ವರೆಗೆ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಆದರೆ ಇದು ವರ್ಷಪೂರ್ತಿ ಆಚರಣೆಯಲ್ಲಿ ಇರಬೇಕು. ಮಗುವಿಗೆ ಬೇಕಾಗುವ ಪೌಷ್ಟಿಕಾಂಶ ಮತ್ತು ಕಾರ್ಬೋಹೈಡ್ರೇಟ್‌ಗಳು ಎದೆ ಹಾಲಿನಲ್ಲಿ ಹೇರಳವಾಗಿರುತ್ತದೆ ಎಂದು ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಕ ಮತ್ತು ಆಡಳಿತ ಅಧಿಕಾರಿ ಡಾ. ಮಧುಸೂದನ್ ಮಾತನಾಡಿ, ಸ್ತನ್ಯ ಪಾನವು ಮಗುವನ್ನು ಸೋಂಕಿನಿಂದ ರಕ್ಷಿಸುತ್ತದೆ. ಅತಿಸಾರ, ಉಸಿರಾಟದ ಸೋಂಕುಗಳು ಮತ್ತು ಇತರೆ ಕಾಯಿಲೆಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ. ತಾಯಂದಿರಲ್ಲಿ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ನಂತಹ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.

ಮಕ್ಕಳ ತಜ್ಞ ಡಾ. ಶಿವಕುಮಾರ್ ಮಾತನಾಡಿ, ಸ್ತನ್ಯಪಾನವು ಆಳವಾದ ಮಾನವ ಕ್ರಿಯೆ ಆಗಿದೆ. ಇದಕ್ಕೆ ತಾಯಂದಿರಿಗೆ ವಿಶ್ರಾಂತಿ ಬೆಂಬಲ, ಮಾನಸಿಕ ಆರೋಗ್ಯ ಮತ್ತು ಸುರಕ್ಷಿತ ಭಾವನೆ ಮುಖ್ಯ. ಎದೆ ಹಾಲು ಜೀರ್ಣವಾಗುವ ಉತ್ಪನ್ನವಾಗಿದೆ. ತಾಯಿ ತಿಂದ ಆಹಾರ ಜೀರ್ಣವಾಗಿ ಅದು ಎದೆ ಹಾಲಿನ ಗುಣಮಟ್ಟ ಮತ್ತು ಪ್ರಮಾಣವನ್ನು ನಿರ್ಧರಿಸುತ್ತದೆ. ಎರಡು ಸ್ತನಗಳಿಂದ ದಿನದಲ್ಲಿ 360 ಮಿ.ಲೀ. ಎದೆ ಹಾಲು ಉತ್ಪನ್ನವಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಾರ್ಮೋನುಗಳ ಬದಲಾವಣೆಗಳ ಆಧಾರದ ಮೇಲೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ತಾಯಂದಿರು ಬೆಳಗ್ಗೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಮತ್ತು ಒತ್ತಡದಲ್ಲಿದ್ದಾಗ ನೋವಿನಿಂದ ಹಾಲುಣಿಸುವುದು, ಕಡಿಮೆ ಹಾಲುಣಿಸುವುದು, ನಿದ್ದೆಯಲ್ಲಿ ಮಲಗಿ ಹಾಲುಣಿಸುವುದು ಮಾಡಬಾರದು. ಔಷಧಿ ರೂಪದಲ್ಲಿ ಯಾವುದೇ ತರಹದ ಸೊಪ್ಪಿನ ರಸಗಳನ್ನು ಮಕ್ಕಳಿಗೆ ಕುಡಿಸಬಾರದು. ಯಾವುದೇ ಅನಾರೋಗ್ಯಕರ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರಲ್ಲಿ ತೋರಿಸಬೇಕು. ಶಿಶು ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಸ್ತನ್ಯಪಾನವು ಮಹತ್ತರವಾದದ್ದು. ಸ್ತನ್ಯಪಾನ ಮಾಡಿಸಿದ ನಂತರ ಮಕ್ಕಳಿಗೆ ಹೊಟ್ಟೆಯಲ್ಲಿ ಗಾಳಿ ನಿಲ್ಲದಂತೆ ತೇಗಿಸುವುದು ಮುಖ್ಯ ಎಂದು ತಿಳಿಸಿ ಪೋಷಕರಿಗೆ ಸ್ತನ್ಯಪಾನವನ್ನು ಉತ್ತೇಜಿಸುವ ಸಲುವಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಈ ಸಂದರ್ಭ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಇಂದಿರಾ, ಆಶಾ ಕಾರ್ಯಕರ್ತರು, ಗರ್ಭಿಣಿಯರು, ಬಾಣಂತಿಯರು ಕಾರ್ಯಕ್ರಮದಲ್ಲಿ ಇದ್ದರು.