ಮೊದಲ ಪಟ್ಟಿಯಲ್ಲಿ ಕುಷ್ಟಗಿ ತಾಲೂಕು ಇಲ್ಲವಾದಾಗ ಎರಡನೇ ಪಟ್ಟಿಯಲ್ಲಾದರೂ ಬರಪೀಡಿತ ತಾಲೂಕಾಗಿ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿತ್ತು. ಶಾಸಕ ದೊಡ್ಡನಗೌಡ ಪಾಟೀಲ ಘೋಷಣೆಯ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಲ್ಲ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ:

ಬಿತ್ತನೆ ಬಳಿಕ ಮಳೆ ಕೈಕೊಟ್ಟಿದೆ. ಬೆಳೆಗಳು ಒಣಗುತ್ತಿವೆ. ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಇಷ್ಟೆಲ್ಲ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎರಡನೇ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲೂ ಕುಷ್ಟಗಿಗೆ ಸ್ಥಾನ ಸಿಕ್ಕಿಲ್ಲ. ಇದರಿಂದ ತಾಲೂಕಿನ ರೈತರಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಮೊದಲ ಪಟ್ಟಿಯಲ್ಲಿ ಕುಷ್ಟಗಿ ತಾಲೂಕು ಇಲ್ಲವಾದಾಗ ಎರಡನೇ ಪಟ್ಟಿಯಲ್ಲಾದರೂ ಬರಪೀಡಿತ ತಾಲೂಕಾಗಿ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿತ್ತು. ಶಾಸಕ ದೊಡ್ಡನಗೌಡ ಪಾಟೀಲ ಘೋಷಣೆಯ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಲ್ಲ. ತಾಲೂಕಿನಲ್ಲಿ ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ರೈತರು, ವಿವಿಧ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಸ್ಥಳೀಯವಾಗಿ ಮಳೆ ಕೊರತೆ ಹಾಗೂ ಬೆಳೆ ಹಾನಿಯ ಪರಿಸ್ಥಿತಿ ಇದ್ದರೂ ತಾಲೂಕನ್ನು ಬರ ಪಟ್ಟಿಯಿಂದ ಹೊರಗಿಟ್ಟಿರುವುದು ಏಕೆ ಎಂಬ ಪ್ರಶ್ನೆ ಇದೀಗ ತೀವ್ರವಾಗಿದೆ.

ಬರದ ಪರಿಸ್ಥಿತಿ ಪರಿಶೀಲಿಸಿ ವೈಜ್ಞಾನಿಕ ಮಾನದಂಡದಲ್ಲಿ ಕುಷ್ಟಗಿಯನ್ನು ಬರಪೀಡಿತ ತಾಲೂಕಾಗಿ ಘೋಷಿಸಿ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಒತ್ತಾಯ ರೈತರಿಂದ ಕೇಳಿಬರುತ್ತಿದೆ.ಕೋಟ್...

ಕುಷ್ಟಗಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಾಲೂಕಿನ ರೈತರ ಪರಿಸ್ಥಿತಿಯನ್ನು ಗಮನಿಸಬೇಕು. ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದೆ ರೈತರನ್ನು ನಿರ್ಲಕ್ಷಿಸಿದರೆ ರೈತರ ಹಕ್ಕಿಗಾಗಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ.

ದೊಡ್ಡನಗೌಡ ಪಾಟೀಲ, ಶಾಸಕ ಹಳೆಯ ಮಾನದಂಡ ಆಧರಿಸಿ ಬರ ಘೋಷಿಸದೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಕಷ್ಟ-ನಷ್ಟ ಪರಿಶೀಲಿಸಬೇಕು. ಬಿತ್ತನೆ ಬಳಿಕ ಬರ ಎದುರಾಗಿದ್ದು, ಎಕರೆಗೆ ಸುಮಾರು ₹25 ಸಾವಿರ ನಷ್ಟವಾಗಿದೆ. ಆದರೂ ಕುಷ್ಟಗಿಯನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಸರ್ಕಾರದ ಮಲತಾಯಿ ಧೋರಣೆ. ರೈತರ ಸಮಸ್ಯೆ ನಿರ್ಲಕ್ಷಿಸಿದರೆ ಶೀಘ್ರವೇ ಬೀದಿಗಿಳಿದು ದೊಡ್ಡ ಹೋರಾಟ ನಡೆಸಲಾಗುವುದು.

ನಜೀರಸಾಬ ಮೂಲಿಮನಿ, ರೈತ ಮುಖಂಡ ಕುಷ್ಟಗಿ.