ಸರಳ ನಿಖಾ, ವರದಕ್ಷಿಣೆ ರಹಿತ ವಿವಾಹ ಹಾಗೂ ಅನಗತ್ಯ ಆಚರಣೆಗಳಿಗೆ ವಿದಾಯ ಹೇಳುವ ಮೂಲಕ ಸಮಾಜದಲ್ಲಿ ಹೊಸ ಬದಲಾವಣೆಗೆ ಕುಷ್ಟಗಿ ಮುಸ್ಲಿಂ ಸಮಾಜ ಮುನ್ನುಡಿ ಬರೆಯಲು ಮುಂದಾಗಿದೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಮದುವೆ ಎಂದರೆ ಲಕ್ಷಾಂತರ ರುಪಾಯಿ ಖರ್ಚು, ಅದ್ಧೂರಿ ಔತಣಕೂಟ, ದುಬಾರಿ ಉಡುಗೊರೆ, ನೂರಾರು ಅತಿಥಿಗಳ ಆತಿಥ್ಯ ಎಂಬ ಆಡಂಬರದ ಸಂಪ್ರದಾಯಕ್ಕೆ ಕಡಿವಾಣ ಹಾಕಲು ಕುಷ್ಟಗಿ ಮುಸ್ಲಿಂ ಸಮಾಜ ಒಕ್ಕೊರಲ ನಿರ್ಧಾರ ಕೈಗೊಂಡಿದೆ.

ಸರಳ ನಿಖಾ, ವರದಕ್ಷಿಣೆ ರಹಿತ ವಿವಾಹ ಹಾಗೂ ಅನಗತ್ಯ ಆಚರಣೆಗಳಿಗೆ ವಿದಾಯ ಹೇಳುವ ಮೂಲಕ ಸಮಾಜದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯಲು ಮುಂದಾಗಿದೆ.

ಪಟ್ಟಣದ ಶಾದಿ ಮಹಲ್‌ನಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮಾಜದ ವಿಶೇಷ ಸಭೆಯಲ್ಲಿ ಮುಖಂಡರು, ಧರ್ಮಗುರುಗಳು, ಹಾಫಿಜ್‌ಗಳು, ಹಿರಿಯರು ಹಾಗೂ ಯುವಕರು ಭಾಗವಹಿಸಿ ಸರಳ ವಿವಾಹ ಪದ್ಧತಿಗೆ ಸಂಪೂರ್ಣ ಬೆಂಬಲ ಸೂಚಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ್ ಮಾತನಾಡಿ, ಮದುವೆಯ ಹೆಸರಿನಲ್ಲಿ ನಡೆಯುತ್ತಿರುವ ದುಂದುವೆಚ್ಚದಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಾಲದ ಸುಳಿಗೆ ಸಿಲುಕುವಂತಾಗಿದೆ. ಇಸ್ಲಾಂ ಧರ್ಮ ಸರಳತೆ ಮತ್ತು ಮಾನವೀಯತೆಯನ್ನು ಬೋಧಿಸುತ್ತದೆ. ಹೀಗಿರುವಾಗ ಮದುವೆಗಳನ್ನು ಆಡಂಬರದ ಪ್ರದರ್ಶನವನ್ನಾಗಿ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ಸರಳ ನಿಖಾಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ನಿಶ್ಚಿತಾರ್ಥದ ಹೆಸರಿನಲ್ಲಿ ನಡೆಯುವ ಮಂಗನಿ ರಸಮ್ ಸೇರಿದಂತೆ ಅನಗತ್ಯ ಸಂಪ್ರದಾಯಗಳನ್ನು ಕೈಬಿಡಬೇಕು. ಹೆಣ್ಣು ಮಕ್ಕಳ ಪೋಷಕರ ಮೇಲೆ ಯಾವುದೇ ರೀತಿಯ ಆರ್ಥಿಕ ಹೊರೆ ಹೇರಬಾರದು. ವರದಕ್ಷಿಣೆ, ದುಬಾರಿ ಉಡುಗೊರೆ ಹಾಗೂ ಅದ್ಧೂರಿ ಔತಣಕೂಟಗಳ ನಿರೀಕ್ಷೆ ತೊರೆಯಬೇಕು. ಮದುವೆಗಾಗಿ ಖರ್ಚು ಮಾಡುವ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ನವದಂಪತಿಗಳ ಭವಿಷ್ಯಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಮುಸ್ತಫಾ ಕಮಲ್, ಅಹ್ಮದ್ ಹುಸೇನ್ ಆದ್ವಾನಿ, ಮೈನುದ್ದೀನ್‌ ಮುಲ್ಲಾ ಹಾಗೂ ಸಮಾಜದ ಮುಖಂಡರು, ಧರ್ಮಗುರುಗಳು, ಹಾಫಿಜ್‌ಗಳು ಉಪಸ್ಥಿತರಿದ್ದರು.ಆಡಂಬರವಲ್ಲ, ಆದರ್ಶವಾಗಲಿ ವಿವಾಹ: ಮದುವೆ ಎಂಬುದು ಎರಡು ಕುಟುಂಬಗಳ ಬೆಸುಗೆ ಮತ್ತು ಹೊಸ ಬದುಕಿನ ಆರಂಭವೇ ಹೊರತು, ಆರ್ಥಿಕ ಸಾಮರ್ಥ್ಯ ಪ್ರದರ್ಶಿಸುವ ವೇದಿಕೆಯಾಗಬಾರದು. ಸರಳ ವಿವಾಹ ಪದ್ಧತಿ ಜಾರಿಯಾದರೆ ಬಡ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುವ ಜತೆಗೆ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಬೆಳೆಯಲು ಸಾಧ್ಯ ಎಂಬ ಆಶಯ ಸಭೆಯಲ್ಲಿ ವ್ಯಕ್ತವಾಯಿತು.

ಕಡಿವಾಣ ಹಾಕಬೇಕು:‌ ಸರಳ ನಿಖಾ ಪದ್ಧತಿ ಜಾರಿಗೆ ತರುವ ಕುರಿತು ಕುಷ್ಟಗಿ ಮುಸ್ಲಿಂ ಸಮಾಜದ ಮುಖಂಡರು, ಧರ್ಮಗುರುಗಳು ಹಾಗೂ ಯುವಕರು ಒಕ್ಕೊರಲ ಒಪ್ಪಿಗೆ ಸೂಚಿಸಿರುವುದು ಸಂತಸದ ಸಂಗತಿ. ಎಲ್ಲರೂ ಈ ನಿರ್ಧಾರವನ್ನು ಪಾಲಿಸುವ ಮೂಲಕ ದುಂದುವೆಚ್ಚ ಮತ್ತು ಅನಗತ್ಯ ಆಚರಣೆಗಳಿಗೆ ಕಡಿವಾಣ ಹಾಕಬೇಕು ಎಂದು ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಹೇಳಿದರು.