ಕುಷ್ಟಗಿ ರಸ್ತೆಯ ರೈಲ್ವೆ ಸೇತುವೆ ನವೆಂಬರ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ

| Published : Oct 28 2024, 01:09 AM IST

ಕುಷ್ಟಗಿ ರಸ್ತೆಯ ರೈಲ್ವೆ ಸೇತುವೆ ನವೆಂಬರ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕುಷ್ಟಗಿ ರಸ್ತೆ ರೈಲ್ವೆ ಸೇತುವೆ ಕಾಮಗಾರಿ ಕೊನೆಗೂ ಸಂಚಾರಕ್ಕೆ ಮುಕ್ತವಾಗುವ ಕಾಲ ಹತ್ತಿರವಾಗುತ್ತಿದೆ.

ಕೊನೆಗೂ ವೇಗ ಪಡೆದುಕೊಂಡ ಕಾಮಗಾರಿ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಳೆದ ಮೂರು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕುಷ್ಟಗಿ ರಸ್ತೆ ರೈಲ್ವೆ ಸೇತುವೆ ಕಾಮಗಾರಿ ಕೊನೆಗೂ ಸಂಚಾರಕ್ಕೆ ಮುಕ್ತವಾಗುವ ಕಾಲ ಹತ್ತಿರವಾಗುತ್ತಿದೆ.

ನಾನಾ ಕಾರಣದಿಂದ ನಿಧಾನಗತಿಯಲ್ಲಿ ನಡೆಯುತ್ತಿದ್ದ ಈ ಕಾಮಗಾರಿಗೆ ಕಳೆದೊಂದು ತಿಂಗಳಿಂದ ವೇಗ ನೀಡಲಾಗಿದ್ದು, ಈಗ ನಡೆಯುತ್ತಿರುವ ಕಾಮಗಾರಿಯ ವೇಗ ಲೆಕ್ಕ ಹಾಕಿದರೆ ನವೆಂಬರ್ ತಿಂಗಳ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗುವುದರಲ್ಲಿ ಅನುಮಾನ ಇಲ್ಲ ಎನ್ನಲಾಗುತ್ತಿದೆ.ತೆವಳುತ್ತಿದ್ದ ಕಾಮಗಾರಿ:

ಕುಷ್ಟಗಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಬರೋಬ್ಬರಿ ಮೂರು ವರ್ಷಗಳಾಗಿವೆ. ಒಂದು ವರ್ಷದಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಮೂರು ವರ್ಷದಿಂದ ತೆವಳುತ್ತಾ ಸಾಗುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಸೇತುವೆ ಕಾಮಗಾರಿ ವರ್ಷದ ಹಿಂದೆಯ ಮುಗಿಯಬೇಕಾಗಿತ್ತು. ಆದರೆ, ಸ್ಥಳೀಯರು ಅದರ ವಿನ್ಯಾಸ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅದರ ಉದ್ದವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಬೇಡಿಕೆ ಬಂದಿದ್ದರಿಂದ ಕಾಮಗಾರಿ ಸ್ಥಗಿತ ಮಾಡಿ, ಸ್ಥಳೀಯರ ಬೇಡಿಕೆಯಂತೆ ಉದ್ದ ಹೆಚ್ಚಳ ಮಾಡುವುದಕ್ಕೆ ಮರು ಪ್ರಸ್ತಾವನೆ ಕಳುಹಿಸಿ, ಅನುಮೋದನೆ ಪಡೆಯಲಾಯಿತು. ಹೀಗಾಗಿ, ಕಾಮಗಾರಿ ಮತ್ತಷ್ಟು ಕಾಲವಕಾಶ ತೆಗೆದುಕೊಳ್ಳುವಂತೆ ಆಯಿತು. ಆದರೂ ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಯಿತು. ವಿನ್ಯಾಸ ಮರು ಪ್ರಸ್ತಾವನೆ ಅನುಮೋದನೆಯಾದ ಮೇಲೆಯೂ ಕಾಮಗಾರಿ ಆಮೆಗತಿಯಲ್ಲಿ ನಡೆಯಿತು. ಸ್ಥಳೀಯ ರಾಜಕೀಯ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಆಡಳಿತದ ನಿಧಾನದ್ರೋಹಕ್ಕೆ ಸಾರ್ವಜನಿಕರು ಕಳೆದ ಮೂರು ವರ್ಷಗಳಿಂದ ಸುತ್ತಾಕಿ ಬರುವ ತಾಪತ್ರಯ ಎದುರಿಸಬೇಕಾಯಿತು. ಇದಲ್ಲದೆ ಕಾಮಗಾರಿ ನಡೆಯುತ್ತಿರುವ ರಸ್ತೆಯ ಎರಡು ಬದಿಯಲ್ಲಿ ವ್ಯಾಪಾರಸ್ಥರು ಭಾರಿ ನಷ್ಟ ಅನುಭವಿಸಿದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.ವೇಗ ಪಡೆದುಕೊಂಡ ಕಾಮಗಾರಿ:

ಈಗ ಕಾಮಗಾರಿ ವೇಗ ಪಡೆದುಕೊಂಡಿದೆ. ಅದನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸುವಂತೆಯೂ ಜಿಲ್ಲಾಧಿಕಾರಿ ನಲಿನ್ ಅತುಲ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.

ಸಂಸದ ರಾಜಶೇಖರ ಹಿಟ್ನಾಳ ಸಹ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ರೈಲ್ವೆ ಮೇಲಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಿ, ಕೂಡಲೇ ಪೂರ್ಣಗೊಳಿಸಿ ಎಂದು ಸೂಚಿಸಿದ್ದರಿಂದ ಈಗ ಕಾಮಗಾರಿ ವೇಗ ಪಡೆದುಕೊಂಡಿದೆ.

ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಶತಾಯ-ಗತಾಯ ಶ್ರಮಿಸುತ್ತಿದ್ದಾರೆ.₹6.5 ಕೋಟಿ ಮರು ಪ್ರಸ್ತಾವನೆ:

ಸ್ವಾಮಿ ವಿವೇಕಾನಂದ ರಸ್ತೆಯ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಸಂಚಾರಕ್ಕೆ ಇನ್ನು ಮುಕ್ತವಾಗಿಲ್ಲ. ಎರಡು ಬದಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಬಾಕಿ ಇರುವುದರಿಂದ ಸೇತುವೆ ಕಾಮಗಾರಿ ಮುಗಿದಿದ್ದರೂ ಪ್ರಯೋಜನವಿಲ್ಲದಂತೆ ಆಗಿದೆ. ಹೀಗಾಗಿ, ಈಗ ರಸ್ತೆ ಅಗಲೀಕರಣಕ್ಕಾಗಿ ಬೇಕಾಗಿರುವ ₹6.5 ಕೋಟಿ ಅನುದಾನಕ್ಕಾಗಿ ರೈಲ್ವೆ ಇಲಾಖೆಗೆ ಮರು ಪ್ರಸ್ತಾವನೆ ಕಳುಹಿಸಲಾಗಿದೆ. ಅದನ್ನು ಶೀಘ್ರದಲ್ಲಿಯೇ ಅನುಮೋದನೆ ನೀಡಿ, ಪೂರ್ಣಗೊಳಿಸಲಾಗುತ್ತದೆ ಎನ್ನಲಾಗುತ್ತಿದೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಅನುದಾನ ಕೊಡುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ರೈಲ್ವೆ ಸೇತುವೆಯ ಎರಡು ಬದಿಯ ರಸ್ತೆಯ ಕಾಮಗಾರಿಗೆ ರಾಜ್ಯ ಸರ್ಕಾರವೇ ಹಣ ನೀಡಬೇಕು. ಆದರೆ, ರಾಜ್ಯ ಸರ್ಕಾರ ಇದಕ್ಕೆ ಅನುದಾನ ನೀಡಲು ನಿರಾಕರಣೆ ಮಾಡಿರುವುದರಿಂದ ರೈಲ್ವೆ ಇಲಾಖೆಗೆ ಮರು ಪ್ರಸ್ತಾವನೆ ಕಳುಹಿಸಲಾಗಿದೆ.