ಕುವೆಂಪು ವಾಕ್ಯ ಬದಲಾವಣೆ ಎಬಿವಿಪಿ ಆಕ್ರೋಶ

| Published : Feb 21 2024, 02:02 AM IST

ಸಾರಾಂಶ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎನ್ನುವ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎನ್ನುವ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದ ಸರಸ್ವತಿ, ಗಣಪತಿ ಮೊದಲಾದ ರೀತಿಯ ಧಾರ್ಮಿಕ ಪೂಜೆಗಳನ್ನು ಮಾಡುವುದನ್ನು ನಿಷೇಧ ಮಾಡಿ ಗೊಂದಲ ಮಾಡಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆ ಆದೇಶವನ್ನು ಹಿಂತೆಗೆದುಕೊಂಡಿದ್ದ ಸರ್ಕಾರ ಈಗ ಮತ್ತೆ ವಸತಿ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕರುನಾಡಿನ ಅಗ್ರಮಾನ್ಯ ಕವಿ ಕುವೆಂಪು ಅವರ ವಾಕ್ಯ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ, ಎನ್ನುವ ಘೋಷಣೆಯನ್ನು ಬದಲಾವಣೆ ಮಾಡಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ, ಎನ್ನುವ ವಾಕ್ಯವನ್ನು ಬರೆಯಿಸಲು ಮುಂದಾಗಿದೆ. ಕನ್ನಡದ ಮಹಾನ್ ದಾರ್ಶನಿಕ ಕವಿಯೊಬ್ಬರ ಆಶಯವನ್ನು ಮೀರಿ ನಿಲ್ಲುವ ನಡೆಯನ್ನು ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.

ಈ ರೀತಿಯಾದ ತರ್ಕ ಶೂನ್ಯ ನಡೆಗಳಿಂದ ರಾಜ್ಯ ಸರ್ಕಾರ ಸಾಹಿತ್ಯ ಸಂಸ್ಕೃತಿ ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವಂತೆ ಭಾಸವಾಗುತ್ತಿದೆ. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದರೆ ಜ್ಞಾನ ದೇಗುಲವನ್ನೇ ಪ್ರಶ್ನಿಸಬೇಕೇ? ಜ್ಞಾನವನ್ನು ಪ್ರಶ್ನಿಸಬೇಕೇ? ಅಥವಾ ಜ್ಞಾನ ದೇಗುಲದಂಗಳದಲ್ಲಿ ಶ್ರದ್ಧೆಯೊಂದಿಗೆ ವಿನಯ ಪೂರ್ವಕವಾಗಿ ಜ್ಞಾನ ಸಂಪಾದಿಸಿ ಮೌಲ್ಯಯುತವಾಗಿ ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕೇ? ಎಂದು ಪ್ರಶ್ನಿಸಿದರು.

ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವ, ವಿನಯತೆ, ವಿನಮ್ರತೆ ವಿದ್ವತ್ ಪೂರ್ಣತೆಯಿಂದ ಕೂಡಿರಬೇಕೇ ವಿನಹ ಗೂಂಡಾ ಪ್ರವೃತ್ತಿಯಿಂದಲ್ಲ. ಹಾಗೊಂದು ವೇಳೆ ಧೈರ್ಯವಾಗಿ ಪ್ರಶ್ನಿಸು ಎನ್ನುವ ಸಾಲೇ ಬೇಕಿದ್ದರೆ ಭ್ರಷ್ಟ ಸಚಿವರ, ಅಧಿಕಾರಿ ವರ್ಗದವರ ಸರ್ಕಾರಿ ಕಚೇರಿಗಳಲ್ಲಿ ಹಾಕಿಸಿಕೊಳ್ಳಲಿ.

ಒಬ್ಬ ಸದೃಢ ಸೃಜನಶೀಲ ವಿದ್ಯಾರ್ಥಿ ರೂಪುಗೊಳ್ಳಲು ಜ್ಞಾನಜ್ಯೋತಿಯ ಪ್ರಭೆ ಅತ್ಯವಶ್ಯಕ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಶಯದಂತೆ ಸರ್ಕಾರ ತನ್ನ ನಡೆಯನ್ನು ತಿದ್ದಿಕೊಳ್ಳಬೇಕೆಂದು ಹಾಗೂ ವಿಶ್ವಮಾನವ ಕುವೆಂಪುರವರ ಸಾಲುಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಬಿವಿಪಿ ನಗರ ಕಾರ್ಯದರ್ಶಿ ಗೋಪಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕನಕರಾಜ. ಆರ್.ಸುದರ್ಶನ್‍ ನಾಯ್ಕ, ಮಹಿಳಾ ಪ್ರಮುಖ್ ಚೈತ್ರ, ಮಹಿಳಾ ಸಹ ಪ್ರಮುಖ್ ಚಂದನ, ಸಾಮಾಜಿಕ ಜಾಲತಾಣ ಚಿತ್ರಸ್ವಾಮಿ, ಕಾರ್ಯಕರ್ತರಾದ-ಯುವರಾಜ್ ಹೆಗಡೆ, ದಾನೇಶ್, ಸುದೀಪ್, ಮಧು, ತಿಪ್ಪೇಸ್ವಾಮಿ ಈ ವೇಳೆ ಉಪಸ್ಥಿತರಿದ್ದರು.