ಸಾರಾಂಶ
ಧಾರವಾಡ:
ರಾಷ್ಟ್ರಕವಿ ಕುವೆಂಪು ಹಾಗೂ ವರಕವಿ ದ.ರಾ. ಬೇಂದ್ರೆ ಅವರನ್ನು ಕೆಲವರು ಸಾಂಸ್ಕೃತಿಕ ಬಂಡವಾಳವನ್ನಾಗಿ ಹಾಗೂ ಅಸ್ಮಿತೆಗಾಗಿ ಬಳಸಿಕೊಂಡರು. ವೈಯಕ್ತಿಕ ನೆಲೆಯಲ್ಲಿ ಇಬ್ಬರು ಕವಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಇರಲಿಲ್ಲ. ಪರಸ್ಪರ ಗೌರವ ಹಾಗೂ ವಿಶ್ವಾಸವಿತ್ತು ಎಂದು ಹಿರಿಯ ಸಾಹಿತಿ ರಾಜೇಂದ್ರ ಚೆನ್ನಿ ಹೇಳಿದರು.ಸಂಗಾತ ಪುಸ್ತಕ ಪ್ರಕಟಿಸಿದ, ಸರ್ಕಾರಿ ಶಾಲೆಯ ಶಿಕ್ಷಕ ರಾಜೇಂದ್ರ ಬಡಿಗೇರ ಬರೆದ ಯುಗದ ಕವಿ (ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ) ಕೃತಿಯನ್ನು ಭಾನುವಾರ ಇಲ್ಲಿಯ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದ ಅವರು, ಕುವೆಂಪು ಜತೆಗಿದ್ದು ಅವರ ಕೃತಿಗಳ ಬಗ್ಗೆ ಬರೆದವರು ಅವರ ಸಮಾಜದವರಾಗಿದ್ದರು. ಬೇಂದ್ರೆ ಜತೆಗಿದ್ದು ಅವರ ಕೃತಿಗಳ ಬಗ್ಗೆ ಬರೆದವರು ಅವರ ಸಮಾಜದವರಾಗಿದ್ದರು. ಕುವೆಂಪು ವಿರೋಧಿಗಳು ಬ್ರಾಹ್ಮಣರು, ಬೇಂದ್ರೆ ವಿರೋಧಿಗಳು ಲಿಂಗಾಯತರು ಎನ್ನುವಂತಾಗಿತ್ತು. ಆದರೆ, ಇಬ್ಬರೂ ವೈಯಕ್ತಿಕವಾಗಿ ವೈಮನಸ್ಸು ಉಂಟಾಗಿರಲಿಲ್ಲ. ಕುವೆಂಪು ಪರವಾಗಿ ಬೇಂದ್ರೆ ಯುಗದ ಕವಿ ಕೃತಿ ಬರೆದಿರುವುದು ನಮ್ಮ ಎದುರಿಗಿದೆ ಎಂದರು.
ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಬೇಂದ್ರೆ-ಕುವೆಂಪು ಕುರಿತಾಗಿ ಲೇಖಕರ 441 ವಾಗ್ವಾದದ ಹೇಳಿಕೆಗಳನ್ನು ಹೆಕ್ಕಿ ತೆಗೆದು ಕವಿಗಳಿಬ್ಬರ ಸಂಬಂಧವನ್ನು ಕನ್ನಡ ಸಂಸ್ಕೃತಿ ಲೋಕದ ನೆಲೆಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಕನ್ನಡ ಸಂಸ್ಕೃತಿ ಬಗ್ಗೆ ಆಳವಾದ ಕಳಕಳಿಯಿಂದ ಬರೆದಿದ್ದಾರೆ ಎಂದರು.ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಕೃತಿ ಕುರಿತು ಮಾತನಾಡಿ, ಸಮಾಜದ ಪರಿವರ್ತನೆ, ಬದಲಾವಣೆಗೆ ಸಾಹಿತ್ಯ ಅಗತ್ಯವಾಗಿ ಬೇಕು. ಅಂತಹ ಸಮಾಜದ ಪರಿವರ್ತನೆಯ ಕೃತಿ ಇದಾಗಿದ್ದು, ಜಾತಿ -ವರ್ಣ ಅಪಾಯಕಾರಿ. ಇಂತಹ ಸಂದರ್ಭದಲ್ಲಿ ಕುವೆಂಪು-ಬೇಂದ್ರೆ ಕುರಿತಾದ ವಾಗ್ವಾದಗಳನ್ನು ಬಡಿಗೇರ ಅವರು ಎಲ್ಲೂ ಜೋಲು ತಪ್ಪದೇ ಮೂಲ ಕೃತಿಕಾರರು ಮಂಕಾಗದಂತೆ ವಿಷಯವನ್ನು ನಿರೂಪಿಸಿದ್ದಾರೆ. ಆದರೆ, ಕೃತಿಯಲ್ಲಿ ಬಳಸಿರುವ ಹೇಳಿಕೆಗಳು ಯಾವ ಸಂದರ್ಭ ಮತ್ತು ಕಾಲದಲ್ಲಿ ಹೇಳಲಾಗಿತ್ತು ಎಂಬುದನ್ನು ದಾಖಲು ಮಾಡಿದ್ದರೆ ಕೃತಿಗೆ ಇನ್ನಷ್ಟು ತೂಕ ಬರುತ್ತಿತ್ತು. ಇಷ್ಟಾಗಿಯೂ ಕೃತಿ ಚರ್ಚೆಗೆ ಬರಲಿ ಎಂದು ಹಾರೈಸಿದರು.
ಪ್ರಕಾಶಕ ಟಿ.ಎಸ್. ಗೊರವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಯ ಮೊದಲ ಪ್ರತಿಯನ್ನು ಬ್ಯಾಹಟ್ಟಿಯ ಮಹಾದೇವ ಮಾರ್ತಾಂಡಪ್ಪ ಪತ್ತಾರ ಅವರಿಗೆ ನೀಡಲಾಯಿತು. ಕೃತಿಕಾರ ರಾಜೇಂದ್ರ ಬಡಿಗೇರ ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಶಶಿಧರ ತೋಡಕರ, ಶಿವಶಂಕರ ಹಿರೇಮಠ, ಅನಸೂಯಾ ಕಾಂಬಳೆ, ಸಿ.ಬಿ. ಐನಳ್ಳಿ ಇದ್ದರು. ರಂಗನಾಥ ಕಂಟನಕುಂಠೆ ಸಮನ್ವಯ ಮಾಡಿದರು.