ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಕುವೆಂಪು ಅವರು ಬರಹದ ಮೂಲಕ ಸಾಮಾಜಿಕ ಬದಲಾವಣೆ, ಕನ್ನಡದ ಅಭಿವೃದ್ಧಿಗೆ ಪ್ರಯತ್ನಿಸಿದ್ದರು ಎಂದು ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ನಗರದ ಕರ್ನಾಟಕ ಸಂಘದ ಕವಿಎಸ್ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕುವೆಂಪು ವೈಚಾರಿಕತೆಯ ಅಭಿಯಾನ ಮತ್ತು ಕೈಪಿಡಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕುವೆಂಪು ಅವರ ಕ್ರಾಂತಿಕಾರಿ ಬರವಣಿಗೆಯನ್ನು ಕಂಡು ರಾಮ್‌ಮನೋಹರ್ ಲೋಹಿಯಾ ಅವರು ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಜೊತೆಗೆ ಬಿ.ಎಂ.ಶ್ರೀಕಂಠಯ್ಯನವರು ಕನ್ನಡ ಜಾಗೃತಿ ಹೋರಾಟಕ್ಕೆ ಕರೆದಾಗಲೂ ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು. ಬರಹದ ಮೂಲಕವೇ ಶೂದ್ರನನ್ನ ತಪಸ್ವಿ, ರೈತನನ್ನು ನೇಗಿಲಯೋಗಿ ಹಾಗೂ ಜನಸಾಮಾನ್ಯರಿಗೆ ಶ್ರೀಸಾಮಾನ್ಯ ಎಂಬ ಗೌರವವನ್ನ ನೀಡುವುದರ ಮೂಲಕ ಸಮಾನತೆಯನ್ನು ಪ್ರತಿಪಾದಿಸಿದರು. ಮೇಲ್ವರ್ಗದ ಅಸಮಾನತೆಯ ಧೋರಣೆಯ ವಿರುದ್ಧ ಕ್ರಾಂತಿಕಾರಕ ಬರವಣಿಗೆ ಮೂಲಕ ಉತ್ತರ ನೀಡಿದರು ಎಂದು ನುಡಿದರು.
೨೦ನೇ ಶತಮಾನದಲ್ಲಿ ಭಿನ್ನವಾದ ಅನೇಕ ಪ್ರತಿಭೆಗಳನ್ನು ಕಂಡರೂ ಈ ಕಾಲಘಟ್ಟದಲ್ಲಿ ಕುವೆಂಪು ಸಾಂಸ್ಕೃತಿಕವಾಗಿ ಹೆಚ್ಚು ಮುಖ್ಯರು ಎನ್ನುವುದು ಅಧ್ಯಯನದಿಂದ ತಿಳಿಯುತ್ತದೆ. ಸ್ವಾರ್ಥ, ವ್ಯಕ್ತಿ ಕೇಂದ್ರಿತ ಸಮಾಜದಲ್ಲಿ ಪರಸ್ಪರ ದ್ವೇಷವನ್ನು ಹುಟ್ಟು ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಪ್ರತಿಪಾದಿಸಬೇಕಿರುವ ಮೌಲ್ಯವೆಂದರೆ ಎಲ್ಲರೂ ಒಟ್ಟಾಗಿ ಬದುಕಲು ಸಾಧ್ಯ ಎಂಬ ಸಹಬಾಳ್ವೆಯ ವಿವೇಕ, ಇದುವೇ ಮಂತ್ರವಾಗಬೇಕಿದೆ, ಹಾಗೆಯೇ ಪ್ರಬುದ್ಧತೆಯನ್ನು ಧಿಕ್ಕರಿಸುವ, ಪ್ರತಿಭಟಿಸುವ, ನಿರಾಕರಿಸುವ ಧೈರ್ಯ ಕೂಡ ಮಾಡಬೇಕಿದೆ. ಕುವೆಂಪು ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಬೆಳಕು ಮತ್ತು ಹಾದಿಯನ್ನಾಗಿ ಮಾಡಿಕೊಳ್ಳುವ ಅಗತ್ಯವೂ ಇದೆ ಎಂದು ಪ್ರತಿಪಾದಿಸಿದರು.ಕನ್ನಡ ಪರಂಪರೆ ನೋಡಿದರೆ ಬಹುಶಃ ೨೦ನೇ ಶತಮಾನ ಅತ್ಯಂತ ವಿಶಿಷ್ಟವಾದುದು, ಈ ಶತಮಾನದಲ್ಲಿ ಬಂದಷ್ಟು ವೈವಿಧ್ಯಮಯ ಪ್ರತಿಭೆಗಳು ಬಹುಶಃ ಯಾವ ಶತಮಾನದಲ್ಲಿಯೂ ಕಾಣಿಸಲಿಲ್ಲ, ಒಂದು ಶತಮಾನದಲ್ಲಿ ನಾಲ್ಕೈದು ಜನ ಪ್ರತಿಭಾವಂತರನ್ನು ನಾವು ನೋಡಬಹುದು. ಆದರೆ, ಅಷ್ಟೆಲ್ಲಾ ಪ್ರತಿಭೆಗಳಲ್ಲಿಯೂ ಅತ್ಯಂತ ವಿಶಿಷ್ಟವಾದವರು ಕುವೆಂಪು. ಏಕೆಂದರೆ, ಕುವೆಂಪು ಅವರು ಬರೆಯಲು ಶುರುಮಾಡಿದಾಗ ರಾಜಪ್ರಭುತ್ವ ಅಧಿಕಾರದಲ್ಲಿತ್ತು, ಹಾಗೆಯೇ ಸಾಂಸ್ಕೃತಿಕ ಪ್ರಭುತ್ವ ಮೇಲ್ವರ್ಗದ ಹಿಡಿತದಲ್ಲಿತ್ತು, ಇಂತಹ ಹೊತ್ತಿನಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿ ಸಾಮಾಜಿಕ ವ್ಯವಸ್ಥೆಯ ಜನಾಂಗಕ್ಕೆ ಆತ್ಮವಿಶ್ವಾಸ ಹಾಗೂ ಆತ್ಮಗೌರವ ದೊರಕಿಸಿಕೊಟ್ಟ ೨೦ನೇ ಶತಮಾನದ ಬೇರೆಯಾವ ಲೇಖಕನಿಗೂ ಸಾಧ್ಯವಾಗಲಿಲ್ಲ ಎಂದು ವ್ಯಾಖ್ಯಾನಿಸಿದರು.
ಕುವೆಂಪು ಅವರಿಗೆ ಎರಡು ಕಾರಣಕ್ಕಾಗಿ ಮಂಡ್ಯ ಇಷ್ಟ ಆಗುತ್ತಿತ್ತಂತೆ, ಒಂದು ರೈತರಿಗೆ ದನಿ ಕೊಟ್ಟ ಜಿಲ್ಲೆ, ಮತ್ತೊಂದು ಕುವೆಂಪು ಪ್ರತಿಪಾದಿಸಿದ ಮಂತ್ರ ಮಾಂಗಲ್ಯ, ಈ ಮಂತ್ರಮಾಂಗಲ್ಯವನ್ನು ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಮಾಡಿದಂತಹ ಜಿಲ್ಲೆ ಎನ್ನುವದನ್ನು ಆಗಾಗ್ಗೆ ಕುವೆಂಪು ಅವರು ಹೇಳುತ್ತಿದ್ದರಂತೆ ಎಂದು ಸ್ಮರಿಸಿದರು.ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಛಾಯಾಗ್ರಾಹಕ ಕೃಪಾಕರ ಸೇನಾನಿ ಮಾತನಾಡಿ, ದೇವಸ್ಥಾನಕ್ಕೆ ಹಣ ಸಂಗ್ರಹ ಮಾಡುವಂತೆ ಶಿಕ್ಷಣಕ್ಕೆ ಒತ್ತು ನೀಡುವುದಿಲ್ಲ. ಇದನ್ನು ನೋಡಿದರೆ ಶೂದ್ರರೆಲ್ಲ ಒಂದು ರೀತಿಯ ಅಕ್ಷರ ದ್ವೇಷಿಯಾಗಿದ್ದಾರೆ ಎನ್ನಿಸುತ್ತದೆ. ಕುವೆಂಪು ಅವರು ಹೇಳಿದ್ದ ಚರ್ಚ್, ಮಸೀದಿ, ಮಂದಿರಗಳಿಂದ ಹೊರ ಬನ್ನಿ ಎನ್ನುವುದನ್ನೇ ಸರಿಯಾಗಿ ಓದಿಕೊಂಡಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಅಂಕಣಕಾರ ಬಿ.ಚಂದ್ರೇಗೌಡ, ವನ್ಯಜೀವಿ ಪತ್ರಕರ್ತ ಜಗದೀಶ್ ಕೊಪ್ಪ, ಮುಖಂಡರಾದ ಗುರುಪ್ರಸಾದ್ ಕೆರಗೋಡು, ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ ಭಾಗವಹಿಸಿದ್ದರು.