ದ.ಕ.ದಲ್ಲಿ ಚುನಾವಣೆಗೆ ಸಿದ್ಧತೆ: 17.96 ಲಕ್ಷ ಮತದಾರರು

| Published : Mar 18 2024, 01:47 AM IST

ಸಾರಾಂಶ

ಮಾ.15ರವರೆಗೆ ಅನ್ವಯಿಸಿ ಜಿಲ್ಲೆಯಲ್ಲಿ ಒಟ್ಟು 17,96,826 ಮತದಾರರಿದ್ದಾರೆ. ಇದರಲ್ಲಿ 8,77,438 ಮಂದಿ ಪುರುಷರು, 9,19,321 ಮಹಿಳಾ ಮತದಾರರು. 67 ಮಂದಿ ತೃತೀಯ ಲಿಂಗಿಗಳು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಏ.26ರಂದು ಚುನಾವಣೆ ನಡೆಯಲಿದ್ದು, ಸರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾ.28ರಂದು ಚುನಾವಣಾ ನೋಟಿಸ್ ಹೊರಡಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ. ಏ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಏ.5ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ. ಜೂ.4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ವಿವರ ನೀಡಿದರು.

17,96,826 ಮತದಾರರು:

ಮಾ.15ರವರೆಗೆ ಅನ್ವಯಿಸಿ ಜಿಲ್ಲೆಯಲ್ಲಿ ಒಟ್ಟು 17,96,826 ಮತದಾರರಿದ್ದಾರೆ. ಇದರಲ್ಲಿ 8,77,438 ಮಂದಿ ಪುರುಷರು, 9,19,321 ಮಹಿಳಾ ಮತದಾರರು. 67 ಮಂದಿ ತೃತೀಯ ಲಿಂಗಿಗಳು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

35,689 ಯುವ ಮತದಾರರು:

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 35,689 ಯುವ ಮತದಾರರು ನೋಂದಣಿ ಮಾಡಿಸಿದ್ದು, ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಮಾ.24ರ ಮೊದಲು ಅರ್ಜಿ ಸಲ್ಲಿಸಬೇಕು. ಹಿರಿಯ ಮತದಾರರ ಪೈಕಿ 85 ವರ್ಷ ಮೇಲ್ಪಟ್ಟವರು 13,159 ಮಂದಿ, 90 ವರ್ಷ ಮೇಲ್ಪಟ್ಟವರು 8,269, ಶತಾಯುಷಿಗಳು 459, ಒಟ್ಟು 21,887 ಮಂದಿ, ಅಂಗವಿಕಲ ಮತದಾರರು 14,195 ಇದ್ದಾರೆ. 85 ವರ್ಷ ಮೇಲ್ಪಟ್ಟವರಿಗೆ ಈ ಬಾರಿಯೂ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಹೇಳಿದರು.1876 ಮತಗಟ್ಟೆಗಳು:

ಜಿಲ್ಲೆಯಲ್ಲಿ ಒಟ್ಟು 1,876 ಮತಗಟ್ಟೆಗಳಿವೆ. ಬೆಳ್ತಂಗಡಿಯಲ್ಲಿ 241, ಮೂಡುಬಿದಿರೆ 219, ಮಂಗಳೂರು ನಗರ ಉತ್ತರ 254, ಮಂಗಳೂರು ನಗರ ದಕ್ಷಿಣ 249, ಮಂಗಳೂರು (ಉಳ್ಳಾಲ) 200, ಬಂಟ್ವಾಳ 249, ಪುತ್ತೂರು 221, ಸುಳ್ಯ 233.ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಽಕಾರಿ ಡಾ. ಆನಂದ್ ಕೆ. ಮಾತನಾಡಿ, 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.68.8ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಶೇ.78ರಷ್ಟು ಆಗಿದೆ. ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಸುಮಾರು 57 ಮತಗಟ್ಟೆಗಳಲ್ಲಿ ಅತ್ಯಂತ ಕಡಿಮೆ ಮತದಾನ ಆಗಿರುವುದನ್ನು ಗುರುತಿಸಲಾಗಿದೆ. ನಗರದ ಮತದಾರರನ್ನು ಮತಗಟ್ಟೆಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ ಸ್ವೀಪ್‌ನಿಂದ ವಿಶೇಷ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಸಹಾಯಕ ಚುನಾವಣಾಧಿಕಾರಿಗಳು ಇದ್ದರು.

ನೀತಿ ಸಂಹಿತೆ ಅನುಷ್ಠಾನಕ್ಕೆ ತಂಡ

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಯಾವುದೇ ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರ ಸಭೆಗಳನ್ನು ನಡೆಸಲು ಸಾರ್ವಜನಿಕರು ಮತ್ತು ರಾಜಕೀಯ ಪಕ್ಷದವರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯ ಅನುಮತಿ ಪಡೆದುಕೊಳ್ಳಬೇಕು. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೈಲೆನ್ಸ್ ಟೀಮ್, ವೀಡಿಯೊ ಸರ್ವೈಲೆನ್ಸ್ ಟೀಮ್ ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಲಿಖಿತವಾಗಿ ಅಥವಾ ದೂರವಾಣಿ ಮೂಲಕ ದೂರು ದಾಖಲಿಸಲು ಅವಕಾಶವಿದೆ. ದೂರುಗಳಿಗೆ ಟೋಲ್ ಫ್ರೀ ಸಂಖ್ಯೆ 1950 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

777 ಮಂದಿ ವಿರುದ್ಧ ಕ್ರಮ: ಕಮಿಷನರ್‌

ನಗರ ಪೊಲೀಸ್ ವ್ಯಾಪ್ತಿಯಲ್ಲಿ ಶಾಂತಿಯುತ ಚುನಾವಣೆಗೆ ಸಂಬಂಧಿಸಿ, ಶಾಂತಿಗೆ ಭಂಗ ಮಾಡುವವರ ಮೇಲೆ ಪ್ರತಿಬಂಧಕ ಕ್ರಮಗಳಿಗೆ ಇಲಾಖೆ ಮುಂದಾಗಿದ್ದು, ಈಗಾಗಲೇ ನಗರ ವ್ಯಾಪ್ತಿಯಲ್ಲಿ 777 ಮಂದಿಯ ವಿರುದ್ಧ ಕ್ರಮ ವಹಿಸಲಾಗಿದೆ. ಸಮಾಜದಲ್ಲಿ ತೊಂದರೆ ನೀಡುವವರನ್ನು ಗಡೀಪಾರು, ಗೂಂಡಾಕಾಯ್ದೆ ಮೂಲಕ ನಿಯಂತ್ರಿಸಲಾಗುತ್ತಿದೆ. ಶನಿವಾರ ಒಬ್ಬನನ್ನು ಗಡಿಪಾರು ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಿದ್ದು, ನಗರದಲ್ಲಿ ಇಂತಹ 1700 ಸಾವಿರ ಮಂದಿ ಶಸ್ತ್ರಾಸ್ತ್ರ ಪರವನಗಿದಾರರಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದರು.1058 ಮಂದಿ ವಿರುದ್ಧ ಪ್ರತಿಬಂಧಕ ಕ್ರಮ: ಎಸ್ಪಿ

ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಅಪರಾಧ ಹಿನ್ನೆಲೆಯಳ್ಳ 1058 ಮಂದಿಯ ವಿರುದ್ಧ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 57 ಮಂದಿಯ ಗಡೀಪಾರಿಗೆ ಪ್ರಸ್ತಾವನೆ ಮಾಡಲಾಗಿದೆ. ಗೂಂಡಾಕಾಯ್ದೆಯ ಬಗ್ಗೆಯ ಕ್ರಮ ನಡೆಯುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 9 ಸಾವಿರ ಶಸ್ತ್ರಾಸ್ತ್ರ ಪರವಾನಗಿದಾರರಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದರು.