ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸಿಪಿಎಸ್ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.ನಗರದ ಸಿಪಿಎಸ್ ಶಾಲೆಯಲ್ಲಿ ಪರಿಸರ ಪ್ರೇಮಿ ತಂಡದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ನಗರದ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿವೆ. ಇದರ ನಡುವೆಯೂ ಕೂಡಾ ಸಿಪಿಎಸ್ ಶಾಲೆಯು 336 ಮಕ್ಕಳನ್ನು ಹೊಂದಿರುವ ಅತಿ ದೊಡ್ಡ ಶಾಲೆಯಾಗಿದೆ. ಈ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸಲು ಬದ್ಧವಾಗಿದೆ. ಪರಿಸರ ಪ್ರೇಮಿ ತಂಡದವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಗಳು ಇನ್ನೂ ಹೆಚ್ಚು ಆಗಬೇಕು. ಈ ಕಾರ್ಯದಲ್ಲಿ ನಾನು ಕೂಡಾ ಭಾಗಿಯಾಗಿರುವುದು ಖುಷಿ ತಂದಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಮಾತನಾಡಿ, ಪರಿಸರ ಪ್ರೇಮಿತಂಡವು ಕೇವಲ ಶಾಲೆಗಳಿಗೆ ಬಣ್ಣ ಹಚ್ಚುವ ಕೆಲಸ ಅಷ್ಟೇ ಅಲ್ಲ, ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿ ಮಾಡುತ್ತಿದೆ. ಈ ಕಾರ್ಯ ಇದೇ ರೀತಿಯಲ್ಲಿ ಮುಂದುವರೆಯಲಿ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಶಾಲೆಯಲ್ಲಿ ಅಭ್ಯಾಸ ಮಾಡಿದ ಮಕ್ಕಳು ಮುಂದೆ ಉನ್ನತವಾದ ಹುದ್ದೆ ಅಲಂಕರಿಸಿದಾಗ ತಾನು ಕಲಿತ ಶಾಲಾ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆ ನೀಡಬೇಕು. ಶಾಲಾ ವಾತಾವರಣದಲ್ಲಿ ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ತಿಳಿಸಬೇಕು ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಸರ್ಕಾರದ ಸಹಾಯವಿಲ್ಲದೇ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಜೊತೆಯಲ್ಲಿ ದಾನಿಗಳ ಸಹಾಯದಿಂದ ಸಿ.ಪಿ.ಎಸ್. ಶಾಲೆಯ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.ಈ ವೇಳೆ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಪರಿಸರ ಪ್ರೇಮಿತಂಡದ ಮಲ್ಲಿಕಾರ್ಜುನ ತೊದಲಬಾಗಿ, ನಗರಸಭೆಯ ಸದಸ್ಯ ರಾಜಶೇಖರ ಆಡೂರು, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ, ಶಾಲೆಯ ಮುಖ್ಯೋಪಾಧ್ಯಾಯ ಎಂ.ಡಿ. ಗುಲಾಮ ಹುಸೇನ ಮುಂತಾದವರಿದ್ದರು.
ಕಾರ್ಯಕ್ರಮವನ್ನು ಸಿ.ಆರ್.ಪಿ. ಹನುಮಂತಪ್ಪ ಕುರಿ ನಿರೂಪಿಸಿದರು.ಶಾಲೆಯ ಶಿಕ್ಷಕಿ ಶೀಲಾ ಬಂಡಿ ಪ್ರಾರ್ಥಿಸಿದರು. ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಗತಿಸಿ, ವಿರುಪಾಕ್ಷಪ್ಪ ಬಾಗೋಡಿ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))