ಮಂಗಳೂರು: ಗಲ್ಫ್‌ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಮುಂದುವರಿದಿದ್ದು, ಭಾನುವಾರ ಇರಾನ್‌ನ ಎರಡು ಕ್ಷಿಪಣಿಯನ್ನು ಕುವೈಟ್‌ನ ರಕ್ಷಣಾ ವ್ಯವಸ್ಥೆ ಅರ್ಧದಲ್ಲೇ ಹೊಡೆದುರುಳಿಸಿದೆ. ಶನಿವಾರ ರಾತ್ರಿ ಕುವೈಟ್‌ನ ಟರ್ಮಿನಲ್‌-2 ವಿಮಾನ ನಿಲ್ದಾಣಕ್ಕೆ ಇರಾನ್‌ ಡ್ರೋನ್‌ ದಾಳಿ ನಡೆಸಿ ಹಾನಿ ಎಸಗಿದೆ. ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಿದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೀಗಾಗಿ ಆತಂಕದ ವಾತಾವರಣ ಇದ್ದರೂ ಭಾನುವಾರ ಕುವೈಟ್‌ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಕರಾವಳಿಗರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಶನಿವಾರ ರಾತ್ರಿ ಇರಾನ್‌ ನಡೆಸಿದ ಡ್ರೋನ್‌ ದಾಳಿಯಲ್ಲಿ ಕುವೈಟ್‌ ವಿಮಾನ ನಿಲ್ದಾಣದ ಟರ್ಮಿನಲ್‌-2 ತುಸು ಹಾನಿಗೆ ಒಳಗಾಗಿದೆ. ಆದರೆ ವಿಮಾನ ಹಾರಾಟ ಸಂಪೂರ್ಣ ರದ್ದುಪಡಿಸಿದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ.

ಭಾನುವಾರ ಬೆಳಗ್ಗೆ ಇರಾನ್‌ ಹಾರಿಸಿದ ಎರಡು ಕ್ಷಿಪಣಿಗಳನ್ನು ಕುವೈಟ್‌ ರಕ್ಷಣಾ ವ್ಯವಸ್ಥೆ ಆಗಸದಲ್ಲೇ ತುಂಡರಿಸಿತ್ತು. ಇದನ್ನು ಹೊರತುಪಡಿಸಿದರೆ ಕುವೈಟ್‌ ಸಹಜ ಸ್ಥಿತಿಯಲ್ಲಿ ಇದೆ. ಇರಾನ್ ದಾಳಿ ಹಿನ್ನೆಲೆಯಲ್ಲಿ ಕುವೈಟ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಾಲ್‌ಗಳು ತೆರೆದಿದ್ದರೂ ಓಡಾಡುವರ ಸಂಖ್ಯೆ ವಿರಳವಾಗಿದೆ. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿವೆ, ಖಾಸಗಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದ್ದು, ಬಹುತೇಕ ಮಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಕುವೈಟ್‌ನಲ್ಲಿರುವ ಕರಾವಳಿಯ ಮಂದಿ.

6 ತಿಂಗಳಿಗಾಗುವಷ್ಟು ಆಹಾರ ದಾಸ್ತಾನು: ಕುವೈಟ್‌ನಲ್ಲಿ ಸುಮಾರು 10.50 ಲಕ್ಷದಷ್ಟು ಭಾರತೀಯರಿದ್ದಾರೆ. ಎಲ್ಲ ಅನಿವಾಸಿ ಭಾರತೀಯರು, ಅದರಲ್ಲೂ ಕರಾವಳಿಯ ಕನ್ನಡಿಗರು ಎಲ್ಲರೂ ಕ್ಷೇಮವಾಗಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಿಮಾನ ಹಾರಾಟ ಬಂದ್‌ ಮಾಡಿರುವುದರಿಂದ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಕುವೈಟ್‌ ಸರ್ಕಾರ ನಾಗರಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಸುಮಾರು ಆರು ತಿಂಗಳಿಗೆ ಸಾಕಾಗುವಷ್ಟು ಆಹಾರ ವ್ಯವಸ್ಥೆಯನ್ನು ಸರ್ಕಾರ ದಾಸ್ತಾನಿರಿಸಿದೆ. ಹಾಗಾಗಿ ಕುವೈಟ್‌ನ ಪರಿಸ್ಥಿತಿ ಸಾಮಾನ್ಯವಾಗಿದ್ದು, ಯಾವುದೇ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎನ್ನುತ್ತಾರೆ ಕುವೈಟ್‌ನಲ್ಲಿರುವ ಕರಾವಳಿ ಮೂಲದ ಉದ್ಯಮಿ ರಾಜ್‌ ಭಂಡಾರಿ.


ವೀಸಾ ಎಕ್ಸಿಟ್‌ ಬಳಿಕ ರದ್ದಾದ ವಿಮಾನ: ಈ ನಡುವೆ ಕುವೈಟ್‌ನ ಟೆನ್ನಿಸ್ ಅಕಾಡೆಮಿ ವೀಕ್ಷಣೆಗೆ ತೆರಳಿದ್ದ ಬೆಂಗಳೂರಿನ ಟೆನ್ನಿಸ್‌ ಪ್ರೇಮಿ ಮಹಿಳೆಯೊಬ್ಬರು ದಿನಪೂರ್ತಿ ಕುಟೈವ್‌ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ವಿದ್ಯಮಾನ ನಡೆದಿದೆ.

ವಿಸಿಟಿಂಗ್‌ ವೀಸಾದಲ್ಲಿ ಬೆಂಗಳೂರಿನ ಮಹಿಳೆ ಕುವೈಟ್‌ಗೆ ತೆರಳಿದ್ದರು. ಅಲ್ಲಿ ಮೂರು ದಿನಗಳ ಭೇಟಿ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್‌ ಆಗಲು ಶನಿವಾರ ಬೆಳಗ್ಗೆ ಕುವೈಟ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬೆಳಗ್ಗೆ 7.30ರ ವಿಮಾನದಲ್ಲಿ ಕುವೈಟ್‌ನಿಂದ ಬೆಂಗಳೂರಿಗೆ ಹೊರಡಬೇಕಿತ್ತು. ಇದಕ್ಕಾಗಿ ಎಮಿಗ್ರೆಷನ್‌ ಎಲ್ಲ ಆಗಿ ಎಕ್ಸಿಟ್‌ ವೀಸಾ ಕೂಡ ಪೂರೈಸಿದ್ದರು. ಕೊನೆಕ್ಷಣದಲ್ಲಿ ವಿಮಾನ ಹಾರಾಟ ಅನಿರ್ದಿಷ್ಟ ಅವಧಿಗೆ ರದ್ದುಗೊಂಡಿತ್ತು. ವಿಸಿಟಿಂಗ್‌ ವೀಸಾವನ್ನು ಎಕ್ಸಿಟ್‌ ಮಾಡಿದ ಕಾರಣ ಅವರು ವಿಮಾನ ನಿಲ್ದಾಣದಿಂದ ಹೊರ ಬರಲಾರದೆ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಕುವೈಟ್‌ನಲ್ಲಿರುವ ಮಂಗಳೂರು ಮೂಲದ ಬ್ಯಾಂಕ್ ಅಧಿಕಾರಿಯೊಬ್ಬರು ಎಕ್ಸಿಟ್‌ ವೀಸಾ ರದ್ದುಪಡಿಸಿ ವಿಸಿಟಿಂಗ್‌ ವೀಸಾ ಮುಂದುವರಿಕೆಗೆ ನೆರವಾದರು. ಈ ಎಲ್ಲ ಪ್ರಕ್ರಿಯೆ ಮುಕ್ತಾಯಗೊಳ್ಳುವಾದ ರಾತ್ರಿ 8 ಗಂಟೆ ಕಳೆದಿತ್ತು. ಕೊನೆಗೂ ಆ ಮಹಿಳೆ ವಿಸಿಟಿಂಗ್‌ ವೀಸಾದಲ್ಲಿ ಕುವೈಟ್‌ನ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ.

ವಾಪಸ್‌ ತೆರಳಲು ದುಬಾರಿ ಟಿಕೆಟ್‌ ಬರೆ: ವಿಮಾನ ರದ್ದತಿಯಿಂದಾಗಿ ಕುವೈಟ್‌ಗೆ ತೆರಳು ಸಾಧ್ಯವಾಗದೆ ಎಂಜಿನಿಯರ್‌ವೊಬ್ಬರು ಮಂಗಳೂರಲ್ಲೇ ಬಾಕಿಯಾಗಿದ್ದಾರೆ. ಮಂಜೇಶ್ವರ ಮೋಹನದಾಸ್‌ ಕಾಮತ್‌ ಎಂಬವರು 10 ದಿನದ ರಜೆಯಲ್ಲಿ ಪತ್ನಿ ಹಾಗೂ ಮಕ್ಕಳ ಕುಟುಂಬ ಸಮೇತ ಮಂಗಳೂರಿಗೆ ಬಂದಿದ್ದರು. ನಿಗದಿಯಂತೆ ಶನಿವಾರ ಕುವೈಟ್‌ಗೆ ತೆರಳಬೇಕಿತ್ತು. ಅದಕ್ಕಾಗಿ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಹೊರಡಲು ಸಿದ್ಧವಾಗಿದ್ದರು. ಅಷ್ಟರಲ್ಲಿ ವಿಮಾನ ಸಂಸ್ಥೆಯಿಂದ ವಿಮಾನ ವಿಳಂಬದ ಬಗ್ಗೆ ಮೊಬೈಲ್‌ ಸಂದೇಶ ಬಂದಿತ್ತು. ಸ್ವಲ್ಪ ಹೊತ್ತಿನ ಬಳಿಕ ವಿಮಾನ ಸಂಚಾರ ರದ್ದುಗೊಂಡ ಮಾಹಿತಿ ಲಭಿಸಿತ್ತು. ಕುವೈಟ್‌ನಲ್ಲಿ ಯುದ್ಧದ ವಾತಾವರಣದಿಂದಾಗಿ ಅಲ್ಲಿನ ಶಾಲೆಗಳು ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುವುದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಅವರು.

ಪ್ರಸಕ್ತ ವಿಮಾನ ಸಂಚಾರ ರದ್ದುಗೊಂಡಿದ್ದು, ಬದಲಿಗೆ ಬೇರೊಂದು ದಿನಕ್ಕೆ ಟಿಕೆಟ್‌ ಬದಲಾಯಿಸುವಂತೆ ವಿಮಾನಯಾನ ಸಂಸ್ಥೆ ತಿಳಿಸಿದೆ. ಆದರೆ ಟಿಕೆಟ್‌ ಕಾಯ್ದಿರಿಸಿದ ಬಳಿಕ ಮತ್ತೆ ವಿಮಾನ ಸಂಚಾರ ರದ್ದುಗೊಂಡರೆ ದುಬಾರಿ ದರ ತೆತ್ತು ಟಿಕೆಟ್‌ ಖರೀದಿಸಬೇಕಾಗುತ್ತದೆ. ಈಗಾಗಲೇ ವಿಮಾನಯಾನ ಕಂಪನಿಗಳು ಕುವೈಟ್‌ಗೆ 23 ಸಾವಿರ ರು.ನಿಂದ 25 ಸಾವಿರ ರು. ವರೆಗೆ ವಿಪರೀತ ದರ ಏರಿಕೆ ಮಾಡಿವೆ. ಯುದ್ಧಾಂತಕ ನಡುವೆಯೇ ವಿಮಾನಯಾನ ಸಂಸ್ಥೆಗಳು ಬೇಕಾಬಿಟ್ಟಿ ಟಿಕೆಟ್‌ ದರ ಏರಿಕೆ ಮಾಡುವುದು ವಿಪರ್ಯಾಸ ಎನ್ನುತ್ತಾರೆ ಮೋಹನದಾಸ್‌ ಕಾಮತ್‌.