ಸಾರಾಂಶ
ಗದಗ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೇವಲ ಆರ್ಥಿಕ ವ್ಯವಹಾರ, ಸಾಲ ವಸೂಲಿ ಮುಂತಾದ ದೈನಂದಿನ ವ್ಯವಹಾರಗಳನ್ನು ಮಾಡದೇ ಅದರ ಜತೆಗೆ ಸಮಾಜಮುಖಿ ಕಾರ್ಯಗಳಿಗೂ ಸದಾ ಸ್ಪಂದಿಸುತ್ತದೆ ಎಂದು ಬೆಟಗೇರಿ ಶಾಖೆಯ ಕೆವಿಜಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಮನೋಹರ ಢವಳಗಿ ಹೇಳಿದರು.
ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿ ದತ್ತು ಪಡೆದ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆವಿಜಿ ಬ್ಯಾಂಕ್ ವಿಶೇಷವಾಗಿ ಗ್ರಾಮೀಣ ಪ್ರಗತಿಗೆ ಆದ್ಯತೆ ನೀಡುವ ಉದ್ದೇಶ ಹೊಂದಿದ್ದರೂ ಪ್ರಸ್ತುತ ಎಲ್ಲ ನಗರ ಪಟ್ಟಣಗಳಲ್ಲಿಯೂ ತನ್ನದೇ ಆದ ಸೇವೆಯನ್ನು ಸಲ್ಲಿಸುವ ಮೂಲಕ ಸಾಕಷ್ಟು ವಿಶ್ವಾಸ ಗಳಿಸಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಇನ್ನಿತರ ಸಮಾಜಮುಖಿ ಕೆಲಸಗಳಿಗೆ ಸಹಾಯಹಸ್ತ ಚಾಚುವ ಮೂಲಕ ತನ್ನದೇ ಆದ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲವನ್ನು ವಿದ್ಯಾರ್ಜನೆಗಾಗಿ ಕೊಡುತ್ತಾ ಬಂದಿದೆ ಎಂದರು.ಡಾ. ಬಸವರಾಜ ಧಾರವಾಡ ಮಾತನಾಡಿ, ಬಸವರಾಜ ಹೊರಟ್ಟಿ ದಂಪತಿ ಹಾಗೂ ದಾನಿಗಳ ನೆರವಿನಿಂದ ಈ ಶಾಲೆ ತನ್ನದೇ ಆದ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಸುಂದರ ಕಲಿಕಾ ವಾತಾವರಣ ಈ ಶಾಲೆಯಲ್ಲಿ ನಿರ್ಮಾಣವಾಗಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಶಾಲೆಯ ಕೀರ್ತಿಯನ್ನು ಬೆಳಗಿಸುವ ಜತೆಗೆ ನೆರವು ನೀಡಿದ ಮಹನೀಯರ ಗೌರವ ಹೆಚ್ಚಿಸಿ ಎಂದರು.
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿನಿಯರಾದ ಭಾವನಾ ಕಟಗಿ, ಕವಿತಾ ತಾಳಿಕೋಟಿ, ಸುಧಾ ಹಾದಿಮನಿ ಅವರಿಗೆ ತಲಾ ₹೫ ಸಾವಿರ ಧನಸಹಾಯ ಪತ್ರ ನೀಡಲಾಯಿತು. ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಶಿಕಲಾ ಗುಳೆದವರ, ಸರ್ವ ಮಂಗಳ ಪತ್ತಾರ್, ಮಂಜುಳಾ ಸಾಂಬ್ರಾಣಿ, ಎಸ್.ಬಿ. ಗದ್ದನಗೇರಿ, ಜಿ.ಎನ್. ಅಳವಂಡಿ, ಶಂಕ್ರಮ್ಮ ಹನುಮಗೌಡರ, ಶಾರದಾ ಬಾಣದ, ಶೋಭಾ ಗಾಳಿ, ಎಸ್.ಯು. ಕುಷ್ಟಗಿ, ವಿ.ಬಿ. ಶಿವನಗೌಡರ, ನಾಗಪ್ಪ ಶಿರೋಳ, ರಮೇಶ ಬಸರಿ, ಪದ್ಮಾವತಿ ದಾಸರ, ಎಲ್.ಬಿ. ಮಾಳೋತ್ತರ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಸಂಜೀವನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.