ಸಂವಿಧಾನದಡಿ ಪ್ರತಿಯೊಬ್ಬ ಭಾರತೀಯನೂ ಸಾಕಾರ: ದಲಿತ ಮುಖಂಡ ವೆಂಕಟೇಶಪ್ಪ

| Published : Feb 15 2024, 01:30 AM IST

ಸಂವಿಧಾನದಡಿ ಪ್ರತಿಯೊಬ್ಬ ಭಾರತೀಯನೂ ಸಾಕಾರ: ದಲಿತ ಮುಖಂಡ ವೆಂಕಟೇಶಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಾಯಣ, ಮಹಾಭಾರತ ಕಾವ್ಯಗಳು ಅನಕ್ಷರಸ್ಥರು, ವಿದ್ಯಾವಂತರ ಮನಸ್ಸಿನಲ್ಲಿ ಅಳವಾಗಿ ಬೇರೂರಿರುವಂತೆ ಸಂವಿಧಾನದ ವಿಚಾರಧಾರೆಗಳೂ ಪ್ರಜೆಗಳ ಮನಸ್ಸಿನಲ್ಲಿ ಉಳಿಯಬೇಕು,

ಕನ್ನಡಪ್ರಭ ವಾರ್ತೆ ಮಾಲೂರು

ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ, ಅತೀ ಶ್ರೇಷ್ಠ ಸಂವಿಧಾನವಾಗಿದೆ, ಪ್ರತಿಯೊಬ್ಬ ಭಾರತೀಯನೂ ಸಂವಿಧಾನದಡಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿತು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ ಎಂದು ನಿವೃತ್ತ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ಹಾಗೂ ದಲಿತ ಮುಖಂಡ ವೆಂಕಟೇಶಪ್ಪ ಹೇಳಿದರು

ತಾಲೂಕಿನ ಚಿಕ್ಕ ತಿರುಪತಿ ಗ್ರಾಪಂ, ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ೭೫ನೇ ಗಣರಾಜ್ಯೋತ್ಸವದ ಹಿನ್ನೆಲೆ ಸಂವಿಧಾನ ಜಾಗೃತಿ ಜಾಥಾ ರಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಅವರು, ಸಂವಿಧಾನವು ಒಬ್ಬರ ಪರವಾಗಿಲ್ಲ, ಅದು ಎಲ್ಲಾ ವರ್ಗದ ಜನರ ಹಿತಾಸಕ್ತಿ ಕಾಪಾಡಿಕೊಂಡು ಬಂದಿದೆ. ನಾವು ಒಪ್ಪಿಕೊಂಡು ಸ್ವಾಗತಿಸಿದ್ದೇವೆ. ಜನರು ಸಂವಿಧಾನದ ಜಾಗೃತಿ ಪಡೆಯಲು ರಾಜ್ಯ ಸರ್ಕಾರ ರಥಯಾತ್ರೆ ಕೈಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಂವಿಧಾನದ ಬಗ್ಗೆ ಜನರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಸಿನಿಮಾ, ಧಾರಾವಾಹಿ, ನಾಟಕ, ಬಯಲಾಟ, ಸಣ್ಣಾಟ, ದೊಡ್ಡಾಟ, ಯಕ್ಷಗಾನಗಳ ಮೂಲಕ ಜಾಗೃತಿ ಮೂಡಿಸಬೇಕು, ಅಲ್ಲದೆ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಪಠ್ಯ ಸೇರಿಸಬೇಕು, ಕರಪತ್ರಗಳನ್ನು ಮುದ್ರಿಸಿ, ಗ್ರಾಪಂಗಳಲ್ಲಿ ಪ್ರಚಾರ ಮಾಡಬೇಕು ಎಂದರು.

ರಾಮಾಯಣ, ಮಹಾಭಾರತ ಕಾವ್ಯಗಳು ಅನಕ್ಷರಸ್ಥರು, ವಿದ್ಯಾವಂತರ ಮನಸ್ಸಿನಲ್ಲಿ ಅಳವಾಗಿ ಬೇರೂರಿರುವಂತೆ ಸಂವಿಧಾನದ ವಿಚಾರಧಾರೆಗಳೂ ಪ್ರಜೆಗಳ ಮನಸ್ಸಿನಲ್ಲಿ ಉಳಿಯಬೇಕು, ನವೆಂಬರ್ ೨೬ ೧೯೫೦ ರಂದು ಸಂವಿಧಾನ ಜಾರಿಗೆ ಬಂದ ಮೇಲೆ ಇಡೀ ದೇಶದಲ್ಲಿ ಆಡಳಿತ ವ್ಯವಸ್ಥೆ ಜಾರಿಗೆ ಬಂದಿತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಕಾನೂನುಗಳು ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಎಲ್ಲವೂ ಸಂವಿಧಾನದಲ್ಲಿ ಅಡಕವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲವರು ಸಂವಿಧಾನವನ್ನು ತಿದ್ದುಪಡಿ ಮಾತುಗಳನ್ನಾಡುತ್ತಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನವೇ ಈ ದೇಶದ ಅತ್ಯುನ್ನತ ಗ್ರಂಥವಾಗಿದೆ ಎಂದು ಹೇಳಿದರು.

ಸಂವಿಧಾನ ಜಾಗೃತಿ ರಥಕ್ಕೆ ಚಿಕ್ಕ ತಿರುಪತಿಯ ಗ್ರಾಪಂ ಬಳಿ ಅಧ್ಯಕ್ಷ ರಾಮ್ ಪ್ರಸಾದ್, ಉಪಾಧ್ಯಕ್ಷೆ ಪದ್ಮ ವೆಂಕಟೇಶ್ ಹಾಗೂ ಸದಸ್ಯರು ಅಂಬೇಡ್ಕರ್ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಸಂವಿಧಾನ ಜಾಗೃತಿ ರಥವು ವಿವಿಧ ಕಲಾತಂಡಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಂತರ ಮುಖ್ಯರಸ್ತೆಯ ಪ್ರಸನ್ನ ವೆಂಕಟರಮಣ ಸ್ವಾಮಿ ಗೋಪುರದ ಬಳಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿತು. ಕಾರ್ಯಕ್ರಮದಲ್ಲಿ ದೊಡ್ಡಮಲ್ಲೆ ರವಿ, ತಂಡದವರು ಅಂಬೇಡ್ಕರ್ ಗೀತೆಗಳನ್ನು ಹಾಡಿದರು.

ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು, ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪೊಲೀಸ್ ನಿರೀಕ್ಷಕ ವಸಂತ್, ಗ್ರಾಪಂ ಅಧ್ಯಕ್ಷ ರಾಮ್ ಪ್ರಸಾದ್, ಉಪಾಧ್ಯಕ್ಷೆ ಪದ್ಮ ವೆಂಕಟೇಶ್, ಕಂದಾಯ ಅಧಿಕಾರಿ ಶ್ರೀಪತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಗ್ರಾಪಂ ಪಿಡಿಒ ಅರಿಂದ್ರ ಗೋಪಾಲ್, ಗ್ರಾಪಂ ಸದಸ್ಯರಾದ ಎ.ಎಂ. ನಾರಾಯಣಪ್ಪ, ಜಿ.ವಿ. ಮಂಜುನಾಥ್, ಟಿ.ಸಿ. ಮಂಜುನಾಥ್, ರಾಘವೇಂದ್ರ, ಸತೀಶ್ ರೆಡ್ಡಿ, ಬಾಬು, ರಾಜಶೇಖರ್, ಪ್ರೇಮ್‌ಕುಮಾರ್, ಸುರೇಶ್, ರಾಧಾಮಣಿ, ಮುಖಂಡರಾದ ವೀರಭದ್ರಪ್ಪ, ಕೃಷ್ಣಾರೆಡ್ಡಿ, ಎ.ಕೆ. ವೆಂಕಟೇಶ್, ಗುರುನಾಥರೆಡ್ಡಿ, ವೆಂಕಟೇಶ್, ಕಾಂತರಾಜ್, ಕಿರಣ್, ಸುಧಾಕರ್, ಮಂಜು, ಆಕಾಶ್, ಗ್ರಾಮಲೆಕ್ಕಿಗ ರೂಪೇಂದ್ರ, ಗ್ರಾಪಂ ಕಾರ್ಯದರ್ಶಿ ಸ್ವರ್ಣಲತ, ಎಸ್‌ಡಿಎ ನಾಗರಾಜ್, ಕರವಸೂಲಿಗಾರ ಇನ್ನಿತರರು ಹಾಜರಿದ್ದರು.

.