ಭಟ್ಕಳದಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತ ಏರಿಕೆ

| Published : Feb 15 2024, 01:30 AM IST

ಸಾರಾಂಶ

ದೇಶಾದ್ಯಂತ ವ್ಯಾಪಕವಾಗಿ ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ ಆಶಾಕಿರಣ ಎನ್ನುವಂತೆ ಭಟ್ಕಳದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಪ್ರಮಾಣ ೧೦೧೬ ಆಗಿದೆ.

ಕಾರವಾರ:

ದೇಶಾದ್ಯಂತ ವ್ಯಾಪಕವಾಗಿ ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ ಆಶಾಕಿರಣ ಎನ್ನುವಂತೆ ಭಟ್ಕಳದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಪ್ರಮಾಣ ೧೦೧೬ ಆಗಿದೆ.

ಭಟ್ಕಳ ತಾಲೂಕಿನಲ್ಲಿ ಏಪ್ರಿಲ್ ೨೦೨೩ರಿಂದ ಡಿಸೆಂಬರ್ ವರೆಗೆ ೯೮೬ ಗಂಡು ಮತ್ತು ೧೦೦೨ ಹೆಣ್ಣು ಮಕ್ಕಳು ಜನಿಸಿದ್ದು, ಲಿಂಗಾನುಪಾತದ ಪ್ರಮಾಣ ೧೦೧೬ ಆಗಿದೆ. ಅಲ್ಲದೇ ಕಳೆದ ಏಪ್ರಿಲ್ ೨೦೨೨ರಿಂದ ಮಾರ್ಚ್ ೨೦೨೩ರ ವರೆಗೆ ಒಟ್ಟೂ ೧೪೬೯ ಗಂಡು ಮತ್ತು ೧೪೭೧ ಹೆಣ್ಣು ಮಕ್ಕಳು ಸೇರಿದಂತೆ ೨೯೪೦ ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ ೧೦೦೧ ಆಗಿದೆ. ಯಲ್ಲಾಪುರ ತಾಲೂಕಿನಲ್ಲಿ ಲಿಂಗಾನುಪಾತದ ಪ್ರಮಾಣ ೧೦೦೦ ಇದ್ದು, ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್‌ ವರೆಗೆ ೧೯೭ ಹೆಣ್ಣು ಮತ್ತು ಗಂಡು ಮಕ್ಕಳು ಜನಿಸಿದ್ದಾರೆ. ಕುಮಟಾ ತಾಲೂಕು ೩ನೇ ಸ್ಥಾನದಲ್ಲಿದ್ದು ೯೫೫ ಗಂಡು ಮತ್ತು ೯೫೨ ಹೆಣ್ಣು ಮಕ್ಕಳು ಜನಿಸಿದ್ದು, ಲಿಂಗಾನುಪಾತದ ಪ್ರಮಾಣ ೯೯೭ ಆಗಿದೆ. ಜಿಲ್ಲೆಯಲ್ಲಿ ಅತೀ ಕಡಿಮೆ ಲಿಂಗಾನುಪಾತದ ಪ್ರಮಾಣ ಕಾರವಾರ ಮತ್ತು ಮುಂಡಗೋಡನಲ್ಲಿದ್ದು ಅಲ್ಲಿನ ಪ್ರಮಾಣ ೮೬೯ ಇದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ೨೦೧೮-೧೯ರಿಂದ ಅಂಕಿ-ಅಂಶಗಳನ್ನು ಪರಿಶೀಲಿಸಿದ್ದಲ್ಲಿ ಈ ಅವಧಿಯಲ್ಲಿ ಜನಿಸಿರುವ ಮಕ್ಕಳ ಲಿಂಗಾನುಪಾತದ ಪ್ರಮಾಣದಲ್ಲಿ ಏರಿಳಿತ ಕಂಡು ಬರುತ್ತದೆ. ೨೦೧೮-೧೯ರಲ್ಲಿ ಜಿಲ್ಲೆಯಲ್ಲಿ ೧೦,೨೬೧ ಗಂಡು ಮತ್ತು ೯,೯೫೬ ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ ೯೭೦, ೨೦೧೯-೨೦ನೇ ಸಾಲಿನಲ್ಲಿ ೧೦,೦೭೧ ಗಂಡು ಮತ್ತು ೯,೭೧೪ ಹೆಣ್ಣು ಮಕ್ಕಳು ಜನಿಸಿದ್ದು, ಲಿಂಗಾನುಪಾತದ ಪ್ರಮಾಣ ೯೬೫, ೨೦೨೦-೨೧ರಲ್ಲಿ ೯,೧೮೫ ಗಂಡು ಮತ್ತು ೮,೭೩೧ ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ ೯೫೧, ೨೦೨೧-೨೨ರಲ್ಲಿ ೯,೧೦೯ ಗಂಡು ಮತ್ತು ೮,೬೫೦ ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ ೯೫೦, ೨೦೨೨-೨೩ರಲ್ಲಿ ೯,೭೧೩ ಗಂಡು ಮತ್ತು ೯,೨೩೩ ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ ೯೫೧ ಆಗಿತ್ತು. ಆದರೆ ಭಟ್ಕಳ ತಾಲೂಕಿನಲ್ಲಿ ಈ ಪ್ರಮಾಣ ಅಧಿಕಗೊಂಡಿದ್ದು, ೨೦೧೮-೧೯ರಲ್ಲಿ ೯೩೮ ಇದ್ದದ್ದು, ೨೦೨೨-೨೩ರಲ್ಲಿ ೧೦೦೧ ಆಗುವ ಮೂಲಕ ಗಮನಾರ್ಹ ಏರಿಕೆ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗಿನ ಜಿಲ್ಲೆಯ ಲಿಂಗಾನುಪಾತದ ಪ್ರಮಾಣ ೯೬೭ ಆಗಿದ್ದು ಆಶಾದಾಯಕ ಬೆಳವಣಿಗೆಯಾಗಿದೆ.

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ರೂಪಿಸಿದ್ದು, ಹೆಣ್ಣು ಮಕ್ಕಳನ್ನು ಹೆತ್ತವರನ್ನು ಮತ್ತು ವಿಶೇಷ ಸಾಧನೆ ಮಾಡಿದ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಅಭಿನಂದಿಸುವ ಕಾರ್ಯಕ್ರಮ, ಹೆಣ್ಣು ಮಗು ಜನಿಸಿದ ಪೋಷಕರನ್ನು ಆಸ್ಪತ್ರೆಯಲ್ಲಿಯೇ ಅಭಿನಂದಿಸುವ ಕಾರ್ಯಕ್ರಮಗಳು ಪ್ರಮುಖವಾಗಿದೆ. ಅಲ್ಲದೇ ಹೆಣ್ಣು ಭ್ರೂಣ ಹತ್ಯೆ ತಡೆಯುವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದನ್ನು ತಡೆಯುವ ಬಗ್ಗೆ ಮತ್ತು ಈ ಕುರಿತ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿರುವ ೭೧ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಅಕ್ರಮವಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆಯುವ ಕುರಿತಂತೆ ನಿರಂತರ ನಿಗಾ ಇರಿಸಿರುವ ಜತೆಗೆ, ಅವುಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲೂ ಅಕ್ರಮವಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಡೆಯದಂತೆ ವ್ಯಾಪಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಈ ವರೆಗೆ ಇಂತಹ ಯಾವುದೇ ಪ್ರಕರಣ ಕಂಡು ಬಂದಿಲ್ಲ. ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸಹ ಅನೇಕ ಕ್ರಮಕೈಗೊಳ್ಳಲಾಗಿದೆ. ಗರ್ಭೀಣಿಯರ ಯೋಗಕ್ಷೇಮ ವಿಚಾರಣೆಗೆ ವಿವಿಧ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಗರ್ಭಿಣಿ ಮತ್ತು ನವಜಾತು ಶಿಶುವಿನ ಸುರಕ್ಷತೆಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿನ ಲಿಂಗಾನುಪಾತದ ಪ್ರಮಾಣವನ್ನು ಗಮನಾರ್ಹ ರೀತಿಯಲ್ಲಿ ಸುಧಾರಿಸಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.