ಸಾರಾಂಶ
ರೈತ ಸಂಘಟನೆಯಿಂದ ಕೆವಿಜಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ
ಮುಳಗುಂದ: ಇಲ್ಲಿಯ ಕೆವಿಜಿ ಬ್ಯಾಂಕ್ ಶಾಖೆಯನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸ್ಥಳೀಯ ರೈತ ಸಂಘಟನೆಯಿಂದ ಕೆವಿಜಿ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘಟನೆ ಸದಸ್ಯ ಕಿರಣ ಕುಲಕರ್ಣಿ ಮಾತನಾಡಿ, ಪಟ್ಟಣದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆ ತೀರಾ ಇಕ್ಕಟ್ಟಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಬ್ಯಾಂಕ್‌ಗೆ ಬರುವ ಗ್ರಾಹಕರು ಸಮಸ್ಯೆ ಎದುರಿಸುವಂತಾಗಿದೆ. ಈ ಶಾಖೆಯಲ್ಲಿ ಮುಳಗುಂದ, ಬಸಾಪೂರ, ಶೀತಾಲಹರಿ, ಚಿಂಚಲಿ, ನೀಲಗುಂದ, ಕಲ್ಲೂರ ಗ್ರಾಮಗಳು ಸೇರಿದಂತೆ ಸುಮಾರು ೫ ಸಾವಿರಕ್ಕೂ ಹೆಚ್ಚು ಖಾತೆಗಳಿದ್ದು, ನಿತ್ಯ ೫ ನೂರಕ್ಕೂ ಹೆಚ್ಚು ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಸರ್ಕಾರದ ಯೋಜನೆಗಳಿಂದ ಬ್ಯಾಂಕ್ ಜನ ಜಂಗುಳಿಂದ ಕೂಡಿರುತ್ತದೆ.ಇಕ್ಕಟಾದ ಕಟ್ಟಡವಾಗಿದ್ದರಿಂದ ಸರದಿ ಸಾಲು ನಿಂತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ಮಹಿಳಾ ಗ್ರಾಹಕರು ಬರುತ್ತಿದ್ದು, ದಿನಗಟ್ಟಲೆ ಕಾಯುವ ಸ್ಥಿತಿ ಇದೆ. ಒಮ್ಮಲೆ ಗ್ರಾಹಕರು ಸಿಬ್ಬಂದಿ ಮುಂದೆ ಜಮಾಯಿಸುವುದರಿಂದ ಬ್ಯಾಂಕ್ ಸಿಬ್ಬಂದಿಗಳಿಗೂ ಸಮಸ್ಯೆ ಆಗುತ್ತಿದೆ ಎಂದರು.
ಬ್ಯಾಂಕ್ ಕಟ್ಟಡವು ಮೇಲಿನ ಮಹಡಿಯಲ್ಲಿರುವುದರಿಂದ ವೃದ್ಧರಿಗೆ ಹತ್ತಿ ಇಳಿಯುವದು ತೊಂದರೆ ಆಗುತ್ತಿದೆ, ಮೇಲಾಗಿ ಬ್ಯಾಂಕ್ ಮುಂದೆ ವಾಹನ ನಿಲುಗಡೆಗೆ ಸ್ಥಳ ಇಲ್ಲದೇ ಇರುವುದರಿಂದ ಬೈಕ್ ಇತರೆ ವಾಹನಗಳನ್ನ ರಸ್ತೆ ಮೇಲೆ ನಿಲ್ಲಿಸುವುದು ಅನಿವಾರ್ಯವಾಗಿದೆ, ಇದರಿಂದ ಟ್ರಾಫಿಕ್ ಸಮಸ್ಯೆ ಮತ್ತು ಅಕ್ಕಪಕ್ಕದ ಮನೆಯವರು ವಾಹನಗಳ ಮಾಲಿಕರೊಂದಿಗೆ ಜಗಳಗಳು ನಡೆಯುತ್ತಿವೆ. ನಿತ್ಯ ಗ್ರಾಹಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಅಲ್ಲದೆ ಕಳೆದ ವರ್ಷವಷ್ಟೆ ಈ ಸ್ಥಳಕ್ಕೆ ಬಂದಿದ್ದು, ತಾವುಗಳ ಸಮಸ್ಯೆ ಅರಿತು ಸ್ಥಳಾಂತರ ಮಾಡಬೇಕಿತ್ತು. ಆದರೆ ಇದಾವುದನ್ನು ಪರಿಗಣಿಸಿಲ್ಲ. ಇದರಿಂದ ತೊಂದರೆ ಆಗಿದೆ.ಶಾಖೆಯು ಇಲ್ಲಿನ ರೈತರಿಗೆ, ಉದ್ದಿಮೆಗಳಿಗೆ, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಸಾಲ ಸೌಲಭ್ಯ ಮತ್ತು ಉಳಿತಾಯದ ಯೋಜನೆಗಳು ಬ್ಯಾಂಕ್‌ನ ಉತ್ತಮ ಸಿಬ್ಬಂದಿಗಳಿಂದ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಮುಳಗುಂದ, ಚಿಂಚಲಿ, ನೀಲಗುಂದ, ಕಲ್ಲೂರ ಗ್ರಾಮಗಳ ಗ್ರಾಹಕರ ಹಿತವನ್ನ ಗಮನದಲ್ಲಿಟ್ಟುಕೊಂಡು, ವಾಹನ ನಿಲುಗಡೆ ಮತ್ತು ನೆಲ ಮಹಡಿ ಇರುವ ಸೂಕ್ತ ಸ್ಥಳದಲ್ಲಿನ ಕಟ್ಟಡಕ್ಕೆ ಬ್ಯಾಂಕ್ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಕೆವಿಜಿ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿ ಎಸ್.ಜಿ. ಹೊಂಬಳ ಮಾತನಾಡಿ, ಇಲ್ಲಿಯ ಬ್ಯಾಂಕ್ ಕಟ್ಟಡದಲ್ಲಿನ ಸಮಸ್ಯೆಯ ಅರಿವಿದೆ, ತಮ್ಮ ಬೇಡಿಕೆಯನ್ನು ಮೇಲಧಿಕರಿಗಳ ಗಮನಕ್ಕೆ ತಂದು ಶೀಘ್ರದಲ್ಲೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಕೆವಿಜಿ ಬ್ಯಾಂಕ್ ಗ್ರಾಮೀಣ ಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಗ್ರಾಹಕರ ಕುಂದು ಕೊರತಗೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ವ್ಯವಸ್ಥಾಪಕ ಶಿವಕುಮಾರ ಪಿ., ಶಾಖೆ ವ್ಯವಸ್ಥಾಪಕಿ ಶ್ರೀದೇವಿ ಕೋಡಿಹಳ್ಳಿ, ರೈತ ಸಂಘದ ಮುಖಂಡರಾದ ದೇವರಾಜ ಸಂಗನಪೇಟಿ, ಮಹಾಂತೇಶ ಗುಂಜಳ, ದೇವಪ್ಪ ಅಣ್ಣಿಗೇರಿ, ಮಹಮ್ಮದಲಿ ಶೇಖ, ಮುತ್ತಣ್ಣ ಪಲ್ಲೇದ, ಗುಡುಸಾಬ ಗಾಡಿ, ಮಂಜುನಾಥ ಕಬಾಡಿ ಸೇರಿದಂತೆ ಮೊದಲಾದವರು ಇದ್ದರು.