50 ವರ್ಷ ಬಳಿಕ ಕ್ಯಾತನಹಳ್ಳಿ ಠಾಣೆ ಮೇಲ್ದರ್ಜೆಗೆ: ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ

| Published : Jul 02 2025, 11:50 PM IST

ಸಾರಾಂಶ

ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಕ್ಯಾತನಹಳ್ಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೊಮ್ಮೆ ಚಿನಕುರಳಿ ಹೊರ ಆರಕ್ಷಕ ಠಾಣೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದ್ದಾಗ ಅದನ್ನು ಆಗ ಶಾಸಕರಾಗಿದ್ದ ಪುಟ್ಟರಾಜು ಅವರೇ ಮೇಲುಕೋಟೆಗೆ ಸ್ಥಳಾಂತರಗೊಳಿಸಿದ್ದನ್ನು ಮರೆತಂತೆ ಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕ್ಯಾತನಹಳ್ಳಿ ಗ್ರಾಮದಲ್ಲಿ 50 ವರ್ಷಗಳಿಂದ ಆರಕ್ಷಕ ಹೊರ ಠಾಣೆಯಾಗಿದ್ದನ್ನು ಈಗ ಮೇಲ್ದರ್ಜೆಗೇರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಕ್ಷೇತ್ರದ ಸುಮಾರು 18 ಹಳ್ಳಿಗಳು ಶ್ರೀರಂಗಪಟ್ಟಣ ಗ್ರಾಮಾಂತರ ಆರಕ್ಷಕ ಠಾಣೆಗೆ ಹಾಗೂ 16 ಹಳ್ಳಿಗಳು ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್ ಆರಕ್ಷಕ ಠಾಣೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಹಳ್ಳಿಗಳ ಜನರು ಪ್ರಕರಣಗಳಿಗೆ ಶ್ರೀರಂಗಪಟ್ಟಣ ತಾಲೂಕಿಗೆ ಹೋಗುತ್ತಿದ್ದಾರೆ. ಜನರು ಪ್ರತಿಯೊಂದು ದಾಖಲೆಗಳಿಗೂ ಪಾಂಡವಪುರಕ್ಕೆ ಅಲೆದಾಡಬೇಕಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜನರಿಗೆ ಇದರಿಂದ ಆಗುತ್ತಿದ್ದ ಅನಾನುಕೂಲವನ್ನು ತಪ್ಪಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕ್ಯಾತನಹಳ್ಳಿ ಗ್ರಾಮದ ಹೊರ ಆರಕ್ಷಕ ಠಾಣೆಯನ್ನು ಆರಕ್ಷಕ ಠಾಣೆಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಶಾಸಕರ ಮನವಿಯನ್ನು ಪುರಸ್ಕರಿಸಿದ ಸರ್ಕಾರ ಹೊರ ಆರಕ್ಷಕ ಠಾಣೆಯನ್ನು ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಆದರೆ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಕ್ಯಾತನಹಳ್ಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೊಮ್ಮೆ ಚಿನಕುರಳಿ ಹೊರ ಆರಕ್ಷಕ ಠಾಣೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದ್ದಾಗ ಅದನ್ನು ಆಗ ಶಾಸಕರಾಗಿದ್ದ ಪುಟ್ಟರಾಜು ಅವರೇ ಮೇಲುಕೋಟೆಗೆ ಸ್ಥಳಾಂತರಗೊಳಿಸಿದ್ದನ್ನು ಮರೆತಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಕ್ಯಾತನಹಳ್ಳಿ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿರುವುದರ ಹಿಂದೆ ಯಾವ ರಾಜಕೀಯ ದ್ವೇಷವೂ ಇಲ್ಲ. ದ್ವೇಷದ ರಾಜಕಾರಣವನ್ನು ನಾವು ಮಾಡುವುದೂ ಇಲ್ಲ. ಚಿನಕುರಳಿ ಪೊಲೀಸ್ ಹೊರ ಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಉನ್ನತೀಕರಿಸಿ ಹೊರಡಿಸಿದ್ದ ಆದೇಶವನ್ನು ತಿದ್ದುಪಡಿ ಮಾಡಿರುವುದು ಗೊಂದಲಗಳಿಗೆ ಕಾರಣವಾಗಿದೆ. ಈ ತಪ್ಪು ಯಾವ ಹಂತದಲ್ಲಿ ನಡೆದಿದೆ ಎನ್ನುವುದು ನಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಮಾತನಾಡಿ, ಚಿನಕುರಳಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆಗೆ ಸಂಬಂಧಿಸಿದಂತೆ ಪುಟ್ಟರಾಜು ಅವರು ಉಸ್ತುವಾರಿ ಸಚಿವರಾಗಿದ್ದಾಗಲೇ ಮಾಡಬಹುದಿತ್ತು. ಆದರೆ, ಈಗ ಕ್ಯಾತನಹಳ್ಳಿಗೆ ವರ್ಗಾವಣೆಯಾಗಿದೆ ಎಂದು ಇಲ್ಲ ಸಲ್ಲದ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಚಿನಕುರಳಿಗೆ ಪೊಲೀಸ್ ಠಾಣೆ ಅವಶ್ಯಕತೆ ಬಗ್ಗೆ ಹೋರಾಟಗಾರರು ಪ್ರಸ್ತಾಪಿಸಿದ್ದರು. ಅಂದು ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಸ್ವತಃ ಪುಟ್ಟರಾಜು ಅವರೇ ಮೇಲುಕೋಟೆಗೆ ವರ್ಗಾವಣೆ ಮಾಡಿಸಿದ್ದರು. ಕಾರಣ ಅಲ್ಲಿ ಗಣಿಗಾರಿಕೆಯಲ್ಲಿ ತೊಡಗಿದ್ದ ನಂಬರ್‌ಪ್ಲೆಟ್ ಇಲ್ಲದ ವಾಹನಗಳು ಸಂಚರಿಸುತ್ತಿವೆ. ಇದರಿಂದ ತೊಂದರೆಯಾಗುತ್ತದೆ ಎಂಬ ಭಾವನೆಯಿಂದ ಮೇಲುಕೋಟೆಗೆ ವರ್ಗಾವಣೆ ಮಾಡಿಸಿದ್ದಾರೆ. ಈಗ ಅನಗತ್ಯ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಟಿ.ಗೋವಿಂದೇಗೌಡ, ವಿಜಯಕುಮಾರ್, ಮಂಜುನಾಥ, ಶಂಕರಣ್ಣ, ರಘು, ಆನಂದ್ ಇತರರಿದ್ದರು.