ಕಾರ್ಮಿಕರ ದಿನಾಚರಣೆ ಮೂಲಭೂತ ಹಕ್ಕುಗಳ ಹೋರಾಟದ ಫಲ: ಗುಣಶೇಖರ್‌

| Published : May 02 2024, 12:24 AM IST

ಕಾರ್ಮಿಕರ ದಿನಾಚರಣೆ ಮೂಲಭೂತ ಹಕ್ಕುಗಳ ಹೋರಾಟದ ಫಲ: ಗುಣಶೇಖರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಂಡವಾಳ ಶಾಹಿಗಳ ಕಪಿಮುಷ್ಠಿಯಿಂದ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಹಲವಾರು ವರ್ಷ ಗಳಿಂದ ಹೋರಾಡಿದ ಪರಿಣಾಮ ದುಡಿಯುವ ವರ್ಗದ ಕಾರ್ಮಿಕರಿಗೆ ಸೌಕರ್ಯಗಳು ಲಭ್ಯವಾಗುತ್ತಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರ್‌ ಹೇಳಿದರು.

- ರಾಷ್ಟ್ರೀಯ ಪಕ್ಷಗಳಿಂದ ಕಾರ್ಮಿಕರಿಗೆ ಶೋಷಣೆ, ಸಿಪಿಐ ಕಾರ್ಯಾಲಯದಲ್ಲಿ ಕಾರ್ಮಿಕರ ದಿನಾಚರಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಂಡವಾಳ ಶಾಹಿಗಳ ಕಪಿಮುಷ್ಠಿಯಿಂದ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಹಲವಾರು ವರ್ಷ ಗಳಿಂದ ಹೋರಾಡಿದ ಪರಿಣಾಮ ದುಡಿಯುವ ವರ್ಗದ ಕಾರ್ಮಿಕರಿಗೆ ಸೌಕರ್ಯಗಳು ಲಭ್ಯವಾಗುತ್ತಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರ್‌ ಹೇಳಿದರು.

ನಗರದ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಎಐಟಿಯುಸಿ, ಸಿಪಿಐ ಹಾಗೂ ಕಟ್ಟಡ ಕಾರ್ಮಿಕರ ಸಂಘದಿಂದ ಏರ್ಪಡಿಸಿದ್ದ 139ನೇ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 1886ರ ಹಿಂದೆ ಕಾರ್ಮಿಕರಿಗೆ ನಿಗಧಿತ ಸಮಯ ಹಾಗೂ ಮೂಲಹಕ್ಕುಗಳನ್ನು ಪಡೆಯಲು ಚಿಕಾಗೋದಲ್ಲಿ ಬಿಳಿ ಬಾವುಟ ಹಿಡಿದು ಹೋರಾಟ ರೂಪಿಸಿದ್ದರು. ಇದನ್ನು ವಿರೋಧಿಸಿ ಸಾಮ್ರಾಜ್ಯಶಾಹಿಗಳು ಕಾರ್ಮಿಕರ ನಡೆ ವಿರೋಧಿಸಿ ದಮನಕಾರಿ ಹಲ್ಲೆಗೊಳಿಸಿದ ಪರಿಣಾಮ ರಕ್ತಸಿಕ್ತ ಕಲೆಯಿಂದ ಕೆಂಬಾವುಟವಾಗಿ ಕಾರ್ಮಿಕರನ್ನು ಪ್ರತಿನಿಧಿಸುತ್ತಿದೆ ಎಂದು ಹೇಳಿದರು.

ಅಂದಿನ ಸಮಯದಲ್ಲಿ ಕಾರ್ಖಾನೆ ಸ್ಥಾಪಿಸುವ ವೇಳೆಯಲ್ಲಿ ಕಾರ್ಮಿಕರು ಪ್ರತಿನಿತ್ಯ 16 ಗಂಟೆಗಳ ಕಾಲ ಕೆಲಸ ನಿರ್ವಹಿಸ ಬೇಕಿತ್ತು. ನಿಗಧಿತ ವೇತನವಿಲ್ಲ, ಕೇವಲ ಕಾರ್ಖಾನೆಗಳ ಮಾಲೀಕರನ್ನು ಇನ್ನಷ್ಟು ಶ್ರೀ ಮಂತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ದುಡಿಯುವ ವರ್ಗ ಒಗ್ಗಟ್ಟಿನಿಂದ ಹಕ್ಕಿಗಾಗಿ ಹೋರಾಡಿದ ಪ್ರತಿಫಲ ವಿಶ್ವದಾದ್ಯಂತ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಕೆಲವು ದ್ವಂದ್ವ ನಿಲುವುಗಳಿಂದ ದೇಶದಲ್ಲಿ ಅನೇಕ ಕಾರ್ಖಾನೆಗಳು, ಸಣ್ಣ ಕೈಗಾರಿಕೋದ್ಯಮಗಳು ಕ್ಷೀಣಿಸಿದ ಪರಿಣಾಮ ಲಕ್ಷಗಟ್ಟಲೇ ಮಂದಿ ಕೂಲಿ ಕಾರ್ಮಿಕರು ದಿನನಿತ್ಯದ ಜೀವನಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ವಾಯಿತು. ಅಲ್ಲದೇ ಕೆಲಸ ಕಾರ್ಯಗಳಿಲ್ಲದೇ ಎಲ್ಲೆಂದರಲ್ಲೇ ಬದುಕು ಕಟ್ಟಿಕೊಳ್ಳಲು ಅಲೆದಾಡುವಂಥ ಪರಿಸ್ಥಿತಿ ಎದುರಾಯಿತು ಎಂದು ಹೇಳಿದರು.

ಹಲವಾರು ದಶಕಗಳಿಂದ ದೇಶವನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳು ಕಾರ್ಮಿಕರನ್ನು ಶೋಷಣೆಗೆ ಒಳಪಡಿಸುತ್ತಿದ್ದವು. ಪ್ರಸ್ತುತ ಕೇಂದ್ರ ಸರ್ಕಾರದ ದಮನಕಾರಿ ನೀತಿಗಳಿಂದ ಕಾರ್ಮಿಕರು ನಿತ್ಯ ಜೀವನಕ್ಕಾಗಿ ಸಂಕಷ್ಟಪಡುವ ಸ್ಥಿತಿ ಬಂದಿದೆ. ಆದರೆ, ಕಮ್ಯೂನಿಸ್ಟ್ ಪಕ್ಷ ಕಾರ್ಮಿಕರ ಬೆಳವಣಿಗೆ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಡು ತ್ತಿದೆ ಎಂದು ತಿಳಿಸಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ಪ್ರಪಂಚದ ಹಲವಾರು ದೇಶಗಳಲ್ಲಿ ವಿವಿಧ ಧರ್ಮ, ಭಾಷೆಗಳಿದ್ದರೂ ತಾರತಮ್ಯವಿಲ್ಲದೇ ಒಂದಾಗಿ ಆಚರಿಸುವ ಹಬ್ಬವೆಂದರೆ ಕಾರ್ಮಿಕ ದಿನಾಚರಣೆ ಎಂದ ಅವರು, ದೇಶವನ್ನು ಕಟ್ಟುವಲ್ಲಿ ಕಾರ್ಮಿಕರ ಮಹತ್ತರ ಪಾತ್ರ ಬಹಳಷ್ಟಿದೆ ಎಂದರು.

ದೇಶದಲ್ಲಿ ದುಡಿದು ಸಂಪತ್ತನ್ನು ಸೃಷ್ಟಿಸುವವರು ಕೂಲಿ ಕಾರ್ಮಿಕರು, ರೈತರು ಹಾಗೂ ಕಟ್ಟಡ ಕಾರ್ಮಿಕರು. ಇವರಿಗೆ ಮೂಲಭೂತ ಹಕ್ಕುಗಳನ್ನು ಕೊಡಿಸುವುದೇ ಕಾರ್ಮಿಕ ದಿನಾಚರಣೆ ಮೂಲ ಧ್ಯೇಯ. ಕಾರ್ಮಿಕರ ಇತಿಹಾಸದಲ್ಲಿ ರಕ್ತಸಿಕ್ತ ವಾಗಿ ನಡೆದಂತಹ ಘಟನೆಗಳನ್ನು ಮರೆಯಬಾರದು. ಕಾರ್ಮಿಕರ ಹೋರಾಡಿದ ನೈಜ ಇತಿಹಾಸ ಪಸರಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ವಸಂತ್‍ಕುಮಾರ್ ಮಾತನಾಡಿ, ಕಾರ್ಮಿಕರ ಭವಿಷ್ಯ ಉಜ್ವಲಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜಕೀಯ ಅಥವಾ ಇನ್ನಿತರೆ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರುವಂತೆ ಕಾರ್ಮಿಕ ಕಾರ್ಯಕ್ರಮಗಳಿಗೆ ಬಿಡುವು ಮಾಡಿ ಆಗಮಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದ್ರೇಶ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ರಘು, ಮುಖಂಡರುಗಳಾದ ಎಸ್.ವಿಜಯ್‍ಕುಮಾರ್, ಜಯಕುಮಾರ್, ಮಂಜೇಗೌಡ, ಸಿ.ಮಂಜುನಾಥ್, ಜಾನಕಿ ಹಾಗೂ ಕಾರ್ಮಿಕರು ಇದ್ದರು.ಪೋಟೋ ಫೈಲ್ ನೇಮ್‌ 1 ಕೆಸಿಕೆಎಂ 1ಚಿಕ್ಕಮಗಳೂರಿನ ಸಿಪಿಐ ಕಾರ್ಯಾಲಯದಲ್ಲಿ ಬುಧವಾರ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಗುಣಶೇಖರ್ ಅವರು ಧ್ವಜಾರೋಹಣ ನೆರವೇರಿಸಿದರು. ರಾಧಾ ಸುಂದ್ರೇಶ್‌, ರೇಣುಕಾರಾಧ್ಯ, ಜಿ. ರಘು ಇದ್ದರು.