ಸಾರಾಂಶ
- ಹೊನ್ನಾಳಿ ತಾಲೂಕು ಶಿಕ್ಷಕರ ಸಂಘ ನೂತನ ಅಧ್ಯಕ್ಷ ಎಚ್.ಕೆ. ಚಂದ್ರಶೇಖರ್- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗುರು ಭವನದ ಮುಂಭಾಗದಲ್ಲಿ ಮೂರು ಮಳಿಗೆಗಳನ್ನು ಕಟ್ಟುವಷ್ಟು ಜಾಗವಿದ್ದು, ಮಳಿಗೆಗಳನ್ನು ನಿರ್ಮಿಸಲು ಶ್ರಮಿಸಲಾಗುವುದು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಎಚ್.ಕೆ. ಚಂದ್ರಶೇಖರ್ ಹೇಳಿದರು.ಶನಿವಾರ ಗುರು ಭವನದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ನಂತರ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಈ ಹಿಂದೆ ಗುರುಭವನ ನಿರ್ವಹಣೆ ಮಾಡಲು ಕಷ್ಟವಾಗಿದ್ದಾಗ ಸಂಘದಿಂದ ಮತ್ತು ನಾನು ವೈಯಕ್ತಿಕವಾಗಿ ಲಕ್ಷಾಂತರ ರು.ಗಳನ್ನು ಹಾಕಿ ಶಿಕ್ಷಕರ ಸಂಘ ಮತ್ತು ಶಿಕ್ಷಕರ ಸಹಕಾರದಿಂದ ಮಳಿಗೆ ನಿರ್ಮಿಸಿದ್ದೆವು. ಇಂದು ಅದರಿಂದ ಬರುವ ಬಾಡಿಗೆಯಿಂದ ಸ್ವಲ್ಪಮಟ್ಟಿನ ನಿರ್ವಹಣೆ ಸುಲಭವಾಗುತ್ತಿದೆ ಎಂದರು.
ಗುರು ಭವನದಲ್ಲಿ ಈ ಹಿಂದೆ ಸಾಕಷ್ಟು ಮದುವೆ ಕಾರ್ಯಕ್ರಮಗಳು, ಇತರೆ ಸಭೆ- ಸಮಾರಂಭಗಳು ನಡೆಯುತ್ತಿದ್ದವು. ಇದರಿಂದ ಬಾಡಿಗೆ ಹಣ ಬರುತ್ತಿತ್ತು. ಆದರೆ ಈಗ ಗುರು ಭವನದಲ್ಲಿ ಮದುವೆ ಸೇರಿದಂತೆ ಸಭೆ, ಸಮಾರಂಭಗಳು ಕಡಿಮೆಯಾಗಿವೆ. ಹೀಗಾಗಿ, ಭವನದ ಮುಂಭಾಗದಲ್ಲಿ ಮೂರು ಮಳಿಗೆಗಳನ್ನು ನಿರ್ಮಿಸಲು ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಕೆ.ಅರುಣ್ ಮಾತನಾಡಿ, ಶಿಕ್ಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ₹1.25 ಕೋಟಿ ಮೆಡಿಕಲ್ ಬಿಲ್ ಬಾಕಿ ಇದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ರಾಜ್ಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳನ್ನು, ಶಾಸಕರನ್ನು ಭೇಟಿ ಮಾಡಿ, ಮೆಡಿಕಲ್ ಬಿಲ್ ಕೊಡಿಸುವಂತೆ ಮನವಿ ಮಾಡಿದ್ದೇನೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.
ತಾಲೂಕು ಶಿಕ್ಷಕರ ಸಂಘದಲ್ಲಿ ಸದಸ್ಯರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಹೀಗಿದ್ದರೂ ಸಂಘಕ್ಕೆ ಇದೂವರೆಗೂ ಕಚೇರಿ ಕಟ್ಟಡವಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಅವರೇನಾದರೂ ಪ್ರಯತ್ನ ಮಾಡಿದರೆ ತಮ್ಮ ರಾಜ್ಯ ಸಂಘದಿಂದಲೂ ಅನುದಾನ ಕೊಡಿಸುವುದಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಸಹ ಕಾರ್ಯದರ್ಶಿ ಜಿ.ಗೀತಾ, ಸಮಾರಂಭ ಉದ್ಘಾಟಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ಮಾಜಿ ಅಧ್ಯಕ್ಷ ಬಿ.ಎಸ್. ರುದ್ರೇಶ್, ಶಿಕ್ಷಕ ರಾಮಪ್ಪ ಮಾತನಾಡಿದರು.
ಸಂಘದ ಪದಾಧಿಕಾರಿಗಳಾದ ಎಚ್.ಜಿ. ಪುರುಷೋತ್ತಮ್, ಗೊಲ್ಲರಹಳ್ಳಿ ತಿಮ್ಮಪ್ಪ, ಹೊನ್ನೇಶ್, ಕರಿಬಸವಯ್ಯ, ಸುರೇಶ್ ಗೆಜ್ಜುರಿ, ಗಂಡುಗಲಿ ಮಂಜಪ್ಪ, ರಾಜ್‌ಕುಮಾರ್, ನೀಲಮ್ಮ ಆಂಜನೇಯ ಇತರರು ಉಪಸ್ಥಿತರಿದ್ದರು.- - - -1ಎಚ್.ಎಲ್.ಐ2.ಜೆಪಿಜಿ:
ಹೊನ್ನಾಳಿ ಪಟ್ಟಣದ ಗುರು ಭವನದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಚ್.ಕೆ.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.