ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕಾರ್ಮಿಕರ ಬೆವರಿನ ಸಂಸ್ಕೃತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದು ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಿತಿ ಸಹಯೋಗದೊಂದಿಗೆ ಪತ್ರಿಕರ್ತರ ಭವನದಲ್ಲಿ ಮಂಗಳವಾರ ನಡೆದ 139ನೇ ಮೇ ದಿನಾಚರಣೆ ಹಾಗೂ ಹಿರಿಯ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರೆಂದರೆ ಕೇವಲ ಕಟ್ಟಡ ಕಟ್ಟುವವರಷ್ಟೆ ಅಲ್ಲವೆಂದರು.
ದೇಶ ನಿರ್ಮಾಣದ ಪ್ರತಿ ಹಂತದಲ್ಲಿಯೂ ಕಾರ್ಮಿಕರ ಬೆವರಿನ ಪಾಲು ಇದೆ. ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆಯಿಲ್ಲದಂತಾಗಿದೆ. ಅಮೇರಿಕಾದ ಚಿಕಾಗೋದಲ್ಲಿ 1886ರಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ದೊಡ್ಡ ಚಳವಳಿ ನಡೆಸಿದಾಗ ಪೊಲೀಸರ ಗುಂಡಿಗೆ ಅನೇಕ ಕಾರ್ಮಿಕರು ಬಲಿಯಾದರು. ಅವರ ಸ್ಮರಣೆಗಾಗಿ ಪ್ರತಿ ವರ್ಷವೂ ಮೇ 1 ರಂದು ಕಾರ್ಮಿಕ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕೆಂಬುದು ಕಾರ್ಮಿಕರ ಬಹುದೊಡ್ಡ ಬೇಡಿಕೆ. 1889ರಲ್ಲಿ ಸಮಾಜವಾದಿ ಕಾಂಗ್ರೆಸ್ ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನು ಘೋಷಿಸಿತು ಎಂದರು.ಕಾರ್ಮಿಕರ ಬಲಿದಾನದಿಂದ ಸರ್ಕಾರ ಕಾರ್ಮಿಕರಿಗಾಗಿ ಕೆಲವು ಕಾನೂನುಗಳನ್ನು ಜಾರಿಗೆ ತಂದಿದೆ. ಕೋವಿಡ್ ಸಂದರ್ಭದಲ್ಲಿ ಹನ್ನೆರಡು ಕೋಟಿ ಕಾರ್ಮಿಕರು ಬೀದಿಗೆ ಬಿದ್ದರು. ಅದರಲ್ಲಿ 60 ಸಾವಿರ ಕಾರ್ಮಿಕರು ದೇಶದಲ್ಲಿ ಸಾವನ್ನಪ್ಪಿದ್ದಾರೆನ್ನುವುದು ಸರ್ಕಾರದ ಅಂಕಿ ಅಂಶಗಳಿಂದ ಗೊತ್ತಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕರಿ ಗಾಗಿಯೇ ಅನೇಕ ಕಾಯಿದೆಗಳನ್ನು ತಂದರು. ಈಗಿನ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಯಿಂದ ಎಲ್ಲಾ ವಲಯಗಳು ಖಾಸಗೀಕರಣಗೊಳ್ಳುತ್ತಿರುವುದು ಕಾರ್ಮಿಕರಿಗೆ ಬಹುದೊಡ್ಡ ಪೆಟ್ಟು ಬಿದ್ದಂತಾಗಿದೆ ಎಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಸಿ.ಕೆ.ಗೌಸ್‍ಪೀರ್ ಮಾತನಾಡಿ, ಮೇ 1ನ್ನು ಕಾರ್ಮಿಕ ದಿನಾಚರಣೆಯೆಂದು ಸರ್ಕಾರ ಘೋಷಿಸಿದ್ದರೂ ಅಂದು ಕಾರ್ಮಿಕರಿಗೆ ಮಾತ್ರ ರಜೆ ಇಲ್ಲ. ಎಂದಿನಂತೆ ಕೆಲಸ ಮಾಡಲೇಬೇಕು. ಮಹಿಳಾ ಕಟ್ಟಡ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಡೀ ಪ್ರಪಂಚಕ್ಕೆ ಮೇ 1ರಂದು ರಜೆಯಿದ್ದರೂ ಮಾಲೀಕರು ಗಳು ಮಾತ್ರ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ನಿಲ್ಲಬೇಕು. ಕಾರ್ಮಿಕರು ತಮ್ಮ ಮೇಲಾಗುತ್ತಿರುವ ದೌರ್ಜನ್ಯ, ದಬ್ಬಾಳಿಕೆ ವಿರುದ್ದ ಎಚ್ಚೆತ್ತುಕೊಳ್ಳದಿದ್ದರೆ ನಿರಂತರ ಶೋಷಣೆಗೆ ಒಳಗಾಗಬೇಕಾಗುತ್ತದೆಂದರು.ಕಾರ್ಮಿಕರು ಮೊದಲು ಲೇಬರ್ ಕಾರ್ಡ್‍ಗಳನ್ನು ಮಾಡಿಸಿಕೊಂಡು ಹಕ್ಕುಗಳನ್ನು ಪಡೆಯಬೇಕು. ಬೋಗಸ್ ಕಾರ್ಡ್‍ಗಳು ರದ್ದಾದಾಗ ನಿಜವಾದ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ನಿಂತಿದೆ. ಪಿಂಚಣಿ, ಆರೋಗ್ಯ ಸೇವೆ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಹೋರಾಟದಿಂದ ನ್ಯಾಯ ಪಡೆಯಲು ಸಾಧ್ಯ. ಹಾಗಾಗಿ ಜೂ.1ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ, ಗೌರವಾಧ್ಯಕ್ಷ ಅಬ್ದುಲ್ಲಾ, ಕರ್ನಾಟಕ ಜನಶಕ್ತಿಯ ಟಿ.ಶಫಿವುಲ್ಲಾ, ಸಣ್ಣಮ್ಮ, ಶ್ರೀಮತಿ ದ್ರಾಕ್ಷಾಯಣಮ್ಮ ವೇದಿಕೆಯಲ್ಲಿದ್ದರು.