ಸಾರಾಂಶ
- ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು । ದುಡಿಯುವ ವರ್ಗಕ್ಕೆ ಕನಿಷ್ಠ ವೇತನ ನೀಡಬೇಕು । ಚಿಕ್ಕಮಗಳೂರಿನಲ್ಲಿ ನಡೆದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ದುಡಿಯುವ ವರ್ಗಕ್ಕೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಮಿಕರು, ಆಜಾದ್ ಪಾರ್ಕ್ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ. ಅಮ್ಜದ್ , ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ದೇಶ ಇಂದು ನೂರಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ನೀರುದ್ಯೋಗ, ಬಡತನ, ಹಸಿವು ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಹೇಳಿದರು.
ಜನರ ನೋವು ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಸಮಸ್ಯೆಗಳನ್ನು ಪರಿಹರಿಸದೆ ನಿರಂತರ ಜನ ವಿರೋಧಿ ಧೋರಣೆ ಅನುಸರಿಸುವ ಮೂಲಕ ನೆಮ್ಮದಿ ಬದುಕಿಗೆ ಸಂಚಕಾರವಾಗಿವೆ. ದೇಶದ ಜನರ ಹಕ್ಕು ಬಾಧ್ಯತೆ ರಕ್ಷಿಸುವಂತಹ ಕಾನೂನುಗಳನ್ನು ರದ್ದುಪಡಿಸಿ ಕಾರ್ಮಿಕರ ಗುಲಾಮಗಿರಿಗೆ ತಳ್ಳುವ ಹಾಗೂ ಬಂಡವಾಳಶಾಹಿ ಕಾರ್ಪೋರೇಟ್‌ಗಳಿಗೆ ಅನುಕೂಲ ಮಾಡಿಕೊಡುವಂತಹ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.ಪ್ಲಾಂಟೇಷನ್ ಪ್ರದೇಶಗಳಲ್ಲಿ ಕಾಡಾನೆ ದಾಳಿ ಸೇರಿದಂತೆ ಕಾಡು ಪ್ರಾಣಿಗಳಿಂದ ಉಂಟಾಗುತ್ತಿರುವ ಕಾರ್ಮಿಕರ ಜೀವಹಾನಿ ತಡೆಯಲು ಸೂಕ್ತ ಕ್ರಮವಹಿಸುವ ಜೊತೆಗೆ ಪ್ರಾಣ ಹಾನಿಗೆ ಸರ್ಕಾರ ಕನಿಷ್ಠ ₹25 ಲಕ್ಷ ರೂ. ಪರಿಹಾರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.ನಿರಂತರವಾಗಿ ಬೆಲೆ ಏರಿಕೆಯಿಂದ ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಸೇರಿ ನಿತ್ಯ ಬಳಕೆ ಪದಾರ್ಥಗಳ ಬೆಲೆ ಇಳಿಸುವ ಮೂಲಕ ಬಡವರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು ಸಮಾಜದಲ್ಲಿ ಜೀವಿಸಲು ಅನುಕೂಲ ಮಾಡಿಕೊಡಬೇಕು ಎಂದರು.
ಪ್ಲಾಂಟೇಷನ್‌ಗಳಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರನ್ನು ಕಾನೂನು ಬದ್ಧವಾಗಿ ನೋಂದಣಿ ಮಾಡಿ ಅವರಿಗೆ ಅನ್ಯಾಯ ಬದ್ಧ ಹಕ್ಕು ಮತ್ತು ಸಾಮಾಜಿಕ ಭದ್ರತೆ ನೀಡುವಂತೆ ಸೂಚಿಸಬೇಕು. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಮತ್ತಿತರೆ ಕ್ಷೇತ್ರಗಳ ಮಹಿಳಾ ಕಾರ್ಮಿಕರಿಗೆ ಗೌರವಧನ ನೀಡುವ ಕನಿಷ್ಠ ವೇತನ ನಿಗದಿ ಪಡಿಸಿ ಭದ್ರತೆ ಒದಗಿಸಬೇಕು ಎಂದು ತಿಳಿಸಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಸಹ ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ನಿರ್ವಹಿಸಬೇಕು ಹಾಗೂ ದುಡಿಮೆ ಅವಧಿಯನ್ನು ಹೆಚ್ಚಳ ಮಾಡುವ ನೀತಿಯ ಭಾಗವಾಗಿ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ಅನುಗುಣ ವಾಗಿಯೇ ಸಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಸಿ.ಧರ್ಮರಾಜು, ಮುಖಂಡರಾದ ಎ.ಜಯಕುಮಾರ್, ಎ.ಪಿ.ಸೆಲ್ವಂ, ಜಿ.ರಮೇಶ್, ಗೋವಿಂದನ್, ವಿ.ಮಾಣಿಕ್ಯ, ರಾಮಚಂದ್ರ ಒಡೆಯರ್ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು. 9 ಕೆಸಿಕೆಎಂ 1ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
--- ಬಾಕ್ಸ್------ಕಾರ್ಮಿಕ ಮಂಡಳಿ ದುಂದು ವೆಚ್ಚಗಳ ಕಡಿವಾಣಕ್ಕೆ ಮನವಿಚಿಕ್ಕಮಗಳೂರು: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೌಲಭ್ಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿ ಕಾರ್ಮಿಕರು ಹತ್ತಾರು ಸಮಸ್ಯೆ ಎದುರಿಸುತ್ತಿದ್ದು ಶೈಕ್ಷಣಿಕ, ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ಸೇರಿ ವಿವಿಧ ಸೌಲಭ್ಯ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದರು.ದೈನಂದಿನ ದುಡಿಮೆ ಹಿನ್ನೆಲೆಯಲ್ಲಿ ಒಂದೂರಿನಿಂದ ಮತ್ತೊಂದು ಊರಿಗೆ ವಲಸೆ ಬರುವ ಕಟ್ಟಡ ಕಾರ್ಮಿಕರು ಉಳಿದು ಕೊಳ್ಳಲು ತಾತ್ಕಾಲಿಕ ವಸತಿ ಸಮುಚ್ಚಯ ನಿರ್ಮಿಸಲು ಕಲ್ಯಾಣ ಮಂಡಳಿ ಮುಂದಾಗಿದೆ. ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಬೇಕೆಂಬುದರಲ್ಲಿ ಸಹಮತವಿದೆ. ಆದರೆ, ಈ ವ್ಯವಸ್ಥೆ ಎಲ್ಲಾ ಕಾರ್ಮಿಕರಿಗೂ ಮಾಡಿಕೊಡಬೇಕು ಎಂದರು.ಕಾರ್ಮಿಕರ ಕಲ್ಯಾಣ ಮಂಡಳಿ ನೈಜವಾಗಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತಹ ಕಲ್ಯಾಣ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಆದ್ಯತೆ ನೀಡಿ ಪರಿಣಾಮಕಾರಿಯಾಗಿ ಜಾರಿಗೆ ನಿರ್ದೇಶನ ನೀಡಿ, ಪ್ರೊಕ್ಯೂರ್‌ಮೆಂಟ್ ಆಧಾರಿತ ಖರೀದಿ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ತಾಲೂಕು ಉಪಾಧ್ಯಕ್ಷರಾದ ಸಿ.ಸಿ.ಮಂಜೇಗೌಡ, ಕೆ.ಕುಪ್ಪನ್, ಸದಸ್ಯ ಚಂದ್ರಚಾರ್ ಉಪಸ್ಥಿತರಿದ್ದರು. 9 ಕೆಸಿಕೆಎಂ 2ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೌಲಭ್ಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.--ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಹೋರಾಟಚಿಕ್ಕಮಗಳೂರು: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಮಾಡುವ ಧೋರಣೆ ವಿರೋಧಿಸಿ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಜಾರಿ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಬುಧವಾರ ನಗರದ ಕೆನರಾ ಬ್ಯಾಂಕ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರ ಜನ, ಕಾರ್ಮಿಕ, ರೈತ ವಿರೋಧಿ ಧೋರಣೆ, ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತರುವುದನ್ನು ಖಂಡಿಸಿ ಇಂದು ರಾಷ್ಟ್ರವ್ಯಾಪಿ ನೌಕರರು ಸಾರ್ವತ್ರಿಕ ಮುಷ್ಕರವಾಗಿ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿಸಿದರು.ನೌಕರರ ಮುಖ್ಯ ಬೇಡಿಕೆಗಳಾದ ಸಾರ್ವಜನಿಕ ಬ್ಯಾಂಕ್‌ಗಳನ್ನು ಬಲಪಡಿಸುವುದು, ಬ್ಯಾಂಕ್ ಮತ್ತು ವಿಮಾ ಕಂಪನಿಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆತ, ರಾಷ್ಟ್ರೀಕೃತ ಬ್ಯಾಂಕ್ ಮತ್ತು ವಿಮಾ ಕಂಪನಿಗಳ ವಿಲೀನ ರದ್ದುಗೊಳಿಸ ಬೇಕು. ಹೆಚ್ಚಿನ ಉದ್ಯೋಗ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.ನೌಕರರ ಗುತ್ತಿಗೆ ಆಧಾರ ಹಾಗೂ ಹೊರಗುತ್ತಿಗೆ ನಿಲ್ಲಿಸಬೇಕು. ಎನ್.ಪಿ.ಸಿ. ವ್ಯವಸ್ಥೆ ವಜಾಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಗ್ರಾಹಕರ ಸುಲಿಗೆಗೆ ಕಾರಣವಾದ ಸರ್ವೀಸ್ ಚಾರ್ಚ್ ವ್ಯವಸ್ಥೆ ನಿಲ್ಲಿಸಬೇಕು. ಎಲ್‌ಐಸಿ ಕಂತುಗಳ ಮೇಲೆ ವಿಧಿಸುತ್ತಿರುವ ಜಿಎಸ್‌ಟಿ ಶುಲ್ಕ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಕೆ.ನಾಗರಾಜ್, ಸಂಘಟನಾ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ನೌಕರರಾದ ದಾನೇಂದ್ರ, ಪ್ರದೀಪ್‌ಕುಮಾರ್, ನಿವೃತ್ತ ನೌಕರ ಎಚ್.ಟಿ.ಹಾಲಪ್ಪ ಹಾಗೂ ಬ್ಯಾಂಕ್ ನೌಕರರು ಪಾಲ್ಗೊಂಡಿದ್ದರು.9 ಕೆಸಿಕೆಎಂ 3ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಜಾರಿಗೆ ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಬುಧವಾರ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.