ಹಟ್ಟಿ ಚಿನ್ನದ ಭೂಕುಸಿತಕ್ಕೆ ಕಾರ್ಮಿಕ ಬಲಿ

| Published : Jul 13 2024, 01:39 AM IST

ಸಾರಾಂಶ

ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನದ ಅದಿರು ಕಲ್ಲು ಬಿದ್ದು ಸಾವನಪ್ಪಿರ ಕಾರ್ಮಿಕ ಮೌನೇಶ.

ನಾಲ್ವರಿಗೆ ಗಾಯ । ಸ್ಥಳದಲ್ಲಿಯೇ ₹33 ಲಕ್ಷ ಪರಿಹಾರ, ಮಗನಿಗೆ ಉದ್ಯೋಗ, ಹೆಚ್ಚುವರಿ 5 ಲಕ್ಷದ ಭರವಸೆ

ಕನ್ನಡಪ್ರಭ ವಾರ್ತೆ ಲಿಂಗಸುಗೂರುತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯ ಭೂ ಕೆಳಮೈಯಲ್ಲಿ ಚಿನ್ನದ ಅದಿರಿನ ಕಲ್ಲು ಕುಸಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಶುಕ್ರವಾರ ಬೆಳಗಿನ ಜಾವ 3.30 ರ ಸುಮಾರಿಗೆ ಸಂಭವಿಸಿದೆ.

ಚಿನ್ನದ ಗಣಿಯ ಮಲ್ಲಪ್ಪ ಶಾಪ್ಟ್‌ನಲ್ಲಿ 2,800 ಲೆವಲ್‌ನಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅದಿರಿನ ಕಲ್ಲು ಕುಸಿದು ಬಿದ್ದ ಪರಿಣಾಮ ಕಾರ್ಮಿಕ ಮೌನೇಶ ಮೃತಪಟ್ಟಿದ್ದಾನೆ. ಸಹ ಕಾರ್ಮಿಕರು ಹರಸಾಹಸದಿಂದ ಮೃತ ದೇಹವನ್ನು ಹೊರತೆಗೆದಿದ್ದು, ಘಟನೆಯಲ್ಲಿ ಕಾರ್ಮಿಕರಾದ ಪರಶುರಾಮ್, ಬೂದೆಪ್ಪ, ಆನಂದ ಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಕಾರ್ಮಿಕರ ಜೊತೆಯಲ್ಲಿದ್ದ ಫೋರ್ಮೆನ್‌ಗೆ ತರಚಿದ ಗಾಯವಾಗಿದೆ.ಭೂಕೆಳ ಮೈ ಕಾರ್ಮಿಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಚಿನ್ನದ ಗಣಿ ಕಂಪನಿ ಗೇಟ್ ಮುಂದೆ ಜಮಾಯಿಸಿದ ಪರಿಣಾಮ ಪರಿಸ್ಥಿತಿ ವಿಕೋಪ ತಲುಪಿತ್ತು, ಚಿನ್ನದ ಗಣಿ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಘಟನಾ ಸ್ಥಳಕ್ಕೆ ಚಿನ್ನದ ಗಣಿ ಕಂಪನಿ ಕಾರ್ಯ ನಿರ್ವಾಹಕ, ನಿರ್ದೇಶಕ, ಪ್ರಧಾನ ವ್ಯವಸ್ಥಾಪಕ ಸೇರಿದಂತೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಕಾರ್ಮಿಕನ ಕುಟುಂಬಕ್ಕೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಘೋಷಣೆ ಮಾಡಬೇಕು, ಅಲ್ಲಿಯವರೆಗೂ ಶವ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದು ಕಾರ್ಮಿಕರು ಬಿಗಿಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಹಟ್ಟಿಚಿನ್ನದ ಗಣಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಪಿಪುಟ್ಟಮಾದಯ್ಯಯ, ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ, ಸಿಪಿಐಗಳಾದ ಹೊಸಕೇರಪ್ಪ, ಪುಂಡಲೀಕ ಪಟಾತರ್ ಸೇರಿ ಪೊಲೀಸ್‌ ಪೇದೆಗಳು ದಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಘಟನಾ ಸ್ಥಳಕ್ಕೆ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಜಿ.ಟಿ.ಪಾಟೀಲ್ ಆಗಮಿಸಿ, ಕಾರ್ಮಿಕ ಕುಟುಂಬಕ್ಕೆ 33 ಲಕ್ಷ ಪರಿಹಾರ ಹಾಗೂ ಕಾರ್ಮಿಕನ ಪುತ್ರ ಪುರುಷೋತ್ತಮನಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಿದರು. ಇದರ ಜೊತೆಗೆ ಚಿನ್ನದ ಗಣಿ ಕಂಪನಿಯಿಂದ ಪ್ರತ್ಯೇಕವಾಗಿ 5ಲಕ್ಷ ರು. ಪರಿಹಾರ ಒದಗಿಸಲಾಗುವುದು, ಕಂಪನಿಯಿಂದ ಕೊಡಲು ಸಾಧ್ಯವಾಗದೇ ಇದ್ದರೆ ವೈಯಕ್ತಿಕವಾಗಿ 5ಲಕ್ಷ ರು. ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಅಧ್ಯಕ್ಷರ ಭರವಸೆಯಿಂದಾಗಿ ಕಾರ್ಮಿಕರು ಶವ ಪರೀಕ್ಷೆ ಹಾಗೂ ಸಂಸ್ಕಾರಕ್ಕೆಆವಕಾಶ ನೀಡಿದರು.