ಕುಕನೂರು: ಆರೋಗ್ಯದ ಕಡೆ ಕೂಲಿಕಾರರು ಹೆಚ್ಚು ಗಮನ ಹರಿಸಬೇಕು ಎಂದು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.
ತಾಲೂಕಿನ ಮಂಡಲಗೇರಿ ಗ್ರಾಪಂ ವ್ಯಾಪ್ತಿಯ ಭಟಪ್ಪನಹಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನ ಆಚರಿಸಿ ಮಾತನಾಡಿದ ಅವರು, ಕೂಲಿಕಾರರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಬಿಸಿಲು ಬಹಳಷ್ಟು ಇರುವುದರಿಂದ ಬೆಳಗ್ಗೆ ಬೇಗನೇ ಕೆಲಸಕ್ಕೆ ಬರಬೇಕು. ತಲೆಗೆ ಟೋಪಿ, ವಸ್ತ್ರ ಹಾಕಿರಬೇಕು. ಕೂಲಿಕಾರರು ತಮ್ಮ ಕುಟುಂಬದ ಸುರಕ್ಷತೆಗಾಗಿ ತಾವು ಪ್ರತಿಯೋಬ್ಬರು ಜೀವ ವಿಮೆ ಮಾಡಿಸಿಕೊಳ್ಳಬೇಕು. ಅವಶ್ಯಕತೆ ಇರುವವರು ಅಟಲ್ ಪೆನ್ಸೆನ್, ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ, ಪೆನ್ಸೆನ್ ಸ್ಕೀಮ್ ಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.ಪಿಡಿಒ ಸುರೇಶ್ ಕಾವಳೆ ಮಾತನಾಡಿ, ಕೂಲಿಕಾರರು ಕನಿಷ್ಟ ಅಳತೆಯ ಕೆಲಸ ನಿರ್ವಹಿಸಿದರೆ ₹ 370 ಸಿಗಲಿದ್ದು, ನರೇಗಾ ಯೋಜನೆಯಡಿ ಕೂಲಿಕಾರರು ಕೆಲಸ ಮಾಡಬೇಕು. ಕೂಲಿ ಹಣ ನೇರವಾಗಿ ಅವರ ಖಾತೆಗೆ ಜಮೆ ಆಗುವುದರಿಂದ ಕೂಲಿಕಾರರು ತಮ್ಮ ಖಾತೆಯನ್ನು ಸಕ್ರೀಯ ಮಾಡಬೇಕು. ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಹಾಜರಾತಿ ಯಶಸ್ವಿಯಾಗಲು ಇ ಕೆವೈಸಿ ಅವಶ್ಯ ಅದಕ್ಕಾಗಿ ಎಲ್ಲರೂ ಇ ಕೆವೈಸಿ ಮಾಡಬೇಕು, ಅಳತೆ ಪ್ರಕಾರ ಕೆಲಸ ನಿರ್ವಹಿಸಬೇಕು ಎಂದರು.
ಗ್ರಾಪಂ ಕಂಪ್ಯೂಟರ್ ಅಪರೇಟರ್ ಸಂತೋಷ ಬಂಡಾರಿ, ಕಾಯಕ ಬಂಧುಗಳು, ಭಟಪ್ಪನ ಹಳ್ಳಿ ಕೂಲಿಕಾರರಿದ್ದರು.