ಭ್ರೂಣ ಹತ್ಯೆ ಬಗ್ಗೆ ಜಾಗೃತಿ ಇಲ್ಲದಿರುವುದು ಬೇಸರದ ಸಂಗತಿ

| Published : Dec 19 2023, 01:45 AM IST

ಭ್ರೂಣ ಹತ್ಯೆ ಬಗ್ಗೆ ಜಾಗೃತಿ ಇಲ್ಲದಿರುವುದು ಬೇಸರದ ಸಂಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಆರತಿಗೊಂದು ಕೀರ್ತಿಗೊಂದು ಮಗು ಬೇಕು ಎನ್ನುವ ಕಾಲ ದೂರವಾಗಿದೆ. ಅತಿಯಾದ ಸಂಪತ್ತನ್ನು ಸಂಗ್ರಹಿಸುವ ಸ್ವಾರ್ಥ, ಸಂಪ್ರದಾಯ, ಕಂದಾಚಾರಗಳು ಯಾವ ದೇಶ, ಸಮಾಜದಲ್ಲಿ ಇರುತ್ತವೆಯೋ, ಆ ದೇಶ, ಸಮಾಜ ಬಹುತೇಕ ಅಂತ್ಯವಾಗುತ್ತದೆ ಎಂದು ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಆರತಿಗೊಂದು ಕೀರ್ತಿಗೊಂದು ಮಗು ಬೇಕು ಎನ್ನುವ ಕಾಲ ದೂರವಾಗಿದೆ. ಅತಿಯಾದ ಸಂಪತ್ತನ್ನು ಸಂಗ್ರಹಿಸುವ ಸ್ವಾರ್ಥ, ಸಂಪ್ರದಾಯ, ಕಂದಾಚಾರಗಳು ಯಾವ ದೇಶ, ಸಮಾಜದಲ್ಲಿ ಇರುತ್ತವೆಯೋ, ಆ ದೇಶ, ಸಮಾಜ ಬಹುತೇಕ ಅಂತ್ಯವಾಗುತ್ತದೆ ಎಂದು ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.

ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಸೋಮವಾರ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವೆಲ್ಲ ರಾಜಪರಂಪರೆಯಿಂದ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಪ್ರಜಾಪ್ರಭುತ್ವದಲ್ಲಿದ್ದರೂ ಸಹ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಜಾಗೃತಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಮನುಷ್ಯ ತನ್ನ ಅತಿಯಾದ ಸಂಪತ್ತನ್ನು ಗಂಡು ಮಕ್ಕಳಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೌಢ್ಯತೆಯ ಹಿನ್ನೆಲೆ ಈ ಹತ್ಯೆ ನಡೆಯುತ್ತಿರಬಹುದು. ಆ ಹಿನ್ನೆಲೆ ಇಂದು ಮಹಿಳೆ ಜಾಗೃತಳಾಗಿ ಭ್ರೂಣ ಹತ್ಯೆಯ ವಿರುದ್ಧ ಹೋರಾಡಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕ ಹಾಗೂ ಸಾಮಾಜಿಕ ಹೋರಾಟಗಾರ ಸಿ.ಎಂ. ಜಕ್ಕಲಿ ಮಾತನಾಡಿ, ಹೆಣ್ಣು ಶಿಶು ಹತ್ಯೆಯ ವಿರುದ್ಧ ಕೇಂದ್ರ ಸರ್ಕಾರ ಡಿಜಿಟಲ್ ಕೋಡ್ ಕಾಯ್ದೆ ಜಾರಿಗೆ ತರಬೇಕು ಎನ್ನುವ ಹಿನ್ನೆಲೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಸಮಾಜಕ್ಕೆ ಅಂಟಿದ ಕಳಂಕ. ಇದಕ್ಕೆ ಅನಕ್ಷರತೆ, ಬಡತನ ವರದಕ್ಷಿಣೆಯಂತಹ ಅನಿಷ್ಟ ಪದ್ದತಿ ಕಾರಣವಾಗಿವೆ. ಇಂದು ಎಲ್ಲರೂ ಜಾಗೃತರಾಗಿ ಇಂತಹ ಸಾಮಾಜಿಕ ಪಿಡುಗನ್ನು ತೊಡೆದು ಹಾಕಬೇಕಿದೆ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ ಸಾಲಿ ಮಾತನಾಡಿದರು. ಈ ಸಂದರ್ಭದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.

ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಜಾಗೃತಿ ಗೀತೆ ಹಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಗೇಟಿ ಮುಖ್ಯ ಅಥಿತಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ಮಾನ್ಪಡೆ ನಿರೂಪಿಸಿ, ಶಹಜಹಾನ ಮುದಕವಿ ವಂದಿಸಿದರು.