ಸಾರಾಂಶ
ಹಾವೇರಿ: ಜಿಲ್ಲೆಯ ಬಹುತೇಕ ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬಂದಿದೆ. ಅಂಗನವಾಡಿ ಕೇಂದ್ರಗಳ ನ್ಯೂನತೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ವರದಿ ತಯಾರಿಸಲಾಗಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಸಲಹಾ ಸಮಿತಿ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ಹಾಗೂ ಪೆನಲ್ ವಕೀಲರು ಜಿಲ್ಲೆಯ ೧೯೯೧ ಅಂಗನವಾಡಿಗಳ ಪೈಕಿ ೮೨೧ ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ, ನೀರು, ವಿದ್ಯುತ್, ಗಾಳಿ, ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಆಟದ ಮೈದಾನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ೬೩೬ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಹಾಗೂ ೧೫೭ ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದರು.ಸೌಲಭ್ಯಗಳ ಕೊರತೆ
ಹಾವೇರಿ ಸಮೀಪದ ಇಜಾರಿಲಕಮಾಪೂರ ಅಂಗವಾಡಿ ಕೇಂದ್ರ ಎ.ಡಬ್ಲೂಸಿ ನಂ.೧೮೫ರಲ್ಲಿ ವಿದ್ಯುತ್ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲ. ಬ್ಯಾಡಗಿ ತಾಲೂಕಿನ ಶಿಡೇನೂರ ಅಂಗನವಾಡಿ ಕೇಂದ್ರ-೧ರಲ್ಲಿ ನೀರಿನ ಸಂಪರ್ಕ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲ. ಹಾನಗಲ್ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ, ಗಂಡು ಮತ್ತು ಹಣ್ಣು ಮಕ್ಕಳ ಪ್ರತ್ಯೇಕ ಶೌಚಾಲಯ ಹಾಗೂ ಪಡಿತರ ಶೇಖರಣೆ ಪರಿಕರಗಳ ಕೊರತೆ ಕಂಡುಬಂದಿದೆ. ಸವಣೂರ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಪೌಷ್ಟಿಕ ಆಹಾರ, ಆಟದ ಮೈದಾನದ ಕೊರತೆ ಕಂಡು ಬಂದಿದೆ ಎಂದರು.ಹಾವೇರಿ ತಾಲೂಕಿನ ೨೯೯ ಅಂಗನವಾಡಿಗಳಲ್ಲಿ ಭೇಟಿ ನೀಡಲಾದ ೩೪ ಅಂಗನವಾಡಿಗಳ ಪೈಕಿ ಆರು, ರಾಣಿಬೆನ್ನೂರು ತಾಲೂಕಿನ ೩೭೯ ಅಂಗನವಾಡಿಗಳಲ್ಲಿ ಭೇಟಿ ನೀಡಲಾದ ೩೭೦, ಹಿರೇಕೆರೂರು ತಾಲೂಕಿನ ೩೬೫ ಅಂಗನವಾಡಿಗಳ ಪೈಕಿ ೧೭೫, ಬ್ಯಾಡಗಿ ತಾಲೂಕಿನ ೧೬೬ ಅಂಗನವಾಡಿಗಳಲ್ಲಿ ಭೇಟಿ ನೀಡಲಾದ ನಾಲ್ಕು ಅಂಗನವಾಡಿಗಳ ಪೈಕಿ ಮೂರು, ಹಾನಗಲ್ ತಾಲೂಕಿನ ೩೩೫ ಅಂಗನವಾಡಿಗಳ ಪೈಕಿ ೪೭, ಶಿಗ್ಗಾಂವಿ ತಾಲೂಕಿನ ೨೩೬ ಅಂಗನವಾಡಿಗಳ ಪೈಕಿ ೩೩, ಸವಣೂರ ತಾಲೂಕಿನ ೨೧೧ ಅಂಗನವಾಡಿಗಳ ಪೈಕಿ ೩೯ ಅಂಗನವಾಡಿಗಳು ಮೂಲ ಸೌಕರ್ಯಗಳನ್ನು ಹೊಂದಿರುತ್ತವೆ ಎಂದು ತಿಳಿಸಿದರು.
ಹಾವೇರಿ ತಾಲೂಕಿನ ಏಳು, ರಾಣಿಬೆನ್ನೂರ ತಾಲೂಕಿನ ೯, ಹಿರೇಕೆರೂರು ತಾಲೂಕಿನ ೬೭, ಬ್ಯಾಡಗಿ ತಾಲೂಕಿನ ಒಂದು, ಶಿಗ್ಗಾಂವಿ ತಾಲೂಕಿನ ೧೦, ಸವಣೂರ ತಾಲೂಕಿನ ೨೨ ಅಂಗನವಾಡಿಗಳು ಮೂಲ ಸೌಕರ್ಯಗಳಾದ ಕುಡಿಯುವ ನೀರು, ಫ್ಯಾನ್, ವಿದ್ಯುತ್ ಹಾಗೂ ಶೌಚಾಲಯ ವ್ಯವಸ್ಥೆ ಹೊಂದಿರುವುದಿಲ್ಲ ಎಂದು ತಿಳಿಸಿದರು.ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್. ಮುತಾಲಿಕದೇಸಾಯಿ ಉಪಸ್ಥಿತರಿದ್ದರು.