ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭಾ ಸಾಮರ್ಥ್ಯವಿದೆ. ಆದರೆ, ಸಾಧನಾ ಕ್ಷೇತ್ರದಲ್ಲಿ ಮುನ್ನುಗಲು ಬೇಕಾದ ಅತ್ಮ ವಿಶ್ವಾಸದ ಕೊರತೆ ಇದ್ದು, ವಿದ್ಯಾರ್ಥಿಗಳು ತಮ್ಮ ಹಿಂಜರಿಕೆ ಗುಣದಿಂದ ಹೊರಬರಬೇಕು ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ ಕರೆ ನೀಡಿದರು.ಪಟ್ಟಣದ ಕಲ್ಪತರು ವಿದ್ಯಾ ಸಂಸ್ಥೆ ಆವರಣದಲ್ಲಿ ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ, ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್ ಮತ್ತು ಕಲ್ಪತರು ಕಾಲೇಜು ಸಹಯೋಗದಲ್ಲಿ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಕರ್ನಾಟಕದಾದ್ಯಂತ 50 ಸಾವಿರಕ್ಕೂ ಅಧಿಕ ಮೋಟಿವೇಷನ್ ತರಗತಿಗಳನ್ನು ಮಾಡಿದ್ದೇನೆ. ಇದರಲ್ಲಿ ನಾನು ಕಂಡುಕೊಂಡ ಸತ್ಯ ಏನೆಂದರೆ ಹಳ್ಳಿಯ ಮಕ್ಕಳಲ್ಲಿ ಇರುವ ಹಿಂಜರಿಕೆಯ ಗುಣ. ಖಾಸಗಿ ಶಾಲೆಗಳಲ್ಲಿ ಕಲಿತವರ ಮುಂದೆ ನಾವು ನಿಲ್ಲಲು ಸಾಧ್ಯವಿಲ್ಲ ಎಂದರು.ನಾನು ಇಂಗ್ಲಿಷ್ ಕಲಿಕೆಯಲ್ಲಿ ಹಿಂದುಳಿದಿದ್ದೇನೆ ಎನ್ನುವ ಭಾವನೆ ಬಹುತೇಕರ ಮನದಲ್ಲಿದೆ. ಇದು ತೊಲಗಬೇಕು. ಕಲಿಕೆ ಹಂತದಲ್ಲಿಯೇ ಸಾಧನೆ ಕನಸು ಕಾಣಬೇಕು. ಧೈರ್ಯ ಮತ್ತು ಆತ್ಮ ವಿಶ್ವಾಸದ ಮೂಲಕ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಐಎಎಸ್, ಕೆಎಎಸ್‌ನಂತಹ ಸಿವಿಲ್ ಸರ್ವೀಸ್ ಸೇವೆಗೆ ಸೇರುವುದರಿಂದ ನೀವು ಸಮಾಜಕ್ಕೆ ಉತ್ತಮವಾದುದನ್ನು ಕೊಡಲು ಸಾಧ್ಯ. ಸಿವಿಲ್ ಸವೀಸ್ ಸೇವೆಯಲ್ಲಿ ಸ್ವರ್ಗದ ಸುಖವಿದೆ. ಶ್ರೀಸಾಮಾನ್ಯನ ಕಷ್ಟ ಸುಖಗಳಿಗೆ ಧ್ವನಿಯಾಗುವ ಶಕ್ತಿಯಿದೆ. ಗ್ರಾಮೀಣ ಮಕ್ಕಳಿಗೆ ರೈತ ಸಮುದಾಯದ ಕಷ್ಟ ಸುಖಗಳ ಅರಿವಿದೆ. ರೈತರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಿದರೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮಲ್ಲಿನ ಕೀಳರಿಮೆಯ ಗುಣದಿಂದ ಹೊರಬದಂದು ನನ್ನಿಂದ ಎಲ್ಲವೂ ಸಾಧ್ಯವಿದೆ ಎನ್ನುವ ಆತ್ಮವಿಶ್ವಾಸ ಹೊಂದಬೇಕು. ತಮ್ಮ ಮನೆ ಬಾಗಿಲಿನಲ್ಲಿಯೇ ಅಕ್ಕ ಸಂಸ್ಥೆಯಂತಹ ನಾಡಿನ ಶ್ರೇಷ್ಠ ತರಬೇತಿ ಸಂಸ್ಥೆಗಳು ನೀಡಲು ಮುಂದಾಗಿರುವ ತರಬೇತಿಯ ಲಾಭ ಪಡೆದು ಕಠಿಣ ಪರಿಶ್ರಮದಿಂದ ಸಾಧಕರಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು.
ಅಕ್ಕಾ ಐ.ಎ.ಎಸ್ ಅಕಾಡೆಮಿ ಸಂಪನ್ಮೂಲ ವ್ಯಕ್ತಿ ರಘು ಮಾತನಾಡಿದರು. ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ವಿಠಲಾಪುರ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಜೀನ ಕೌಶಲ್ಯ ತರಬೇತುದಾರ ಮಂಜುನಾಥ್, ಪ್ರಜ್ವಲ್ ಮಾತನಾಡಿದರು.