ಬಳ್ಳಾರಿ: ಪ್ರಜ್ಞೆಯ ಕೊರತೆಯೇ ಜನರ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಗದಗ-ವಿಜಯಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.

ಮಾನವನಿಗೆ ಜ್ಞಾನ ಮತ್ತು ವಿವೇಕ ಎರಡೂ ಸಮನಾಗಿರಬೇಕು. ಜ್ಞಾನವಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸುವ ಪ್ರಜ್ಞೆ ಇಲ್ಲದಿದ್ದರೆ, ವ್ಯಕ್ತಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಜ್ಞಾವಂತಿಕೆಯಿಂದ ಮಾತ್ರ ಜೀವನ ಸುಗಮಗೊಳಿಸಲು ಸಾಧ್ಯ. ಇಂದು ಪ್ರಜ್ಞೆಯ ಕೊರತೆ ಹೆಚ್ಚಾಗುತ್ತಿರುವುದರಿಂದ ಅನೇಕ ಸಮಸ್ಯೆಗಳು ತಲೆದೋರುತ್ತಿವೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಹಾಗೂ ಗೌತಮ ಬುದ್ಧರು ತಮ್ಮ ಇಡೀ ಜೀವನವನ್ನು ಜನರಲ್ಲಿ ಜ್ಞಾನ ಮತ್ತು ಸತ್ಯದ ಅರಿವು ಮೂಡಿಸಲು ಸಮರ್ಪಿಸಿಕೊಂಡಿದ್ದರು. ಸ್ವಾಮಿ ವಿವೇಕಾನಂದರು ಯುವಜನತೆಗೆ ಆತ್ಮವಿಶ್ವಾಸ, ಧೈರ್ಯ ಹಾಗೂ ದೇಶಭಕ್ತಿ ಬೆಳೆಸುವ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂದು ಸಾರಿದರು.ಅವರ ಉಪದೇಶಗಳು ಇಂದಿಗೂ ಯುವಜನತೆಗೆ ಮಾರ್ಗದರ್ಶಕವಾಗಿವೆ. ಮತ್ತೊಂದೆಡೆ ಗೌತಮ ಬುದ್ಧರು ಅಹಿಂಸೆ, ದಯೆ ಮತ್ತು ಮಧ್ಯಮ ಮಾರ್ಗದ ಮೂಲಕ ಮಾನವ ಜೀವನದ ದುಃಖಗಳಿಗೆ ಪರಿಹಾರ ಸೂಚಿಸಿದರು.

ಈ ಮಹನೀಯರ ಬೋಧನೆಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಅಜ್ಞಾನವನ್ನು ದೂರ ಮಾಡಿ ಜ್ಞಾನ ಬೆಳಕು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.


ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯ, ಅಂಧಶ್ರದ್ಧೆ ಹಾಗೂ ಅಜ್ಞಾನಗಳ ವಿರುದ್ಧ ಸ್ವಾಮಿ ವಿವೇಕಾನಂದರು ನಿರಂತರ ಹೋರಾಟ ನಡೆಸಿ, ಜನರಲ್ಲಿ ಅರಿವಿನ ದೀವಿಗೆ ಹಚ್ಚಿದರು. ಧರ್ಮ ಮಾನವನ ಉದ್ಧಾರಕ್ಕಾಗಿ ಇರಬೇಕು ಹೊರತು ಅವನನ್ನು ಬಂಧಿಸುವ ಸಾಧನವಾಗಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದರು.

ಅಂಧಾನುಕರಣ, ಮೂಢನಂಬಿಕೆ ಮತ್ತು ಜಾತಿ ವೈಷಮ್ಯವನ್ನು ಅವರು ಕಟ್ಟುನಿಟ್ಟಾಗಿ ವಿರೋಧಿಸಿದ್ದರು. “ಸತ್ಯವೇ ಧರ್ಮದ ಮೂಲ” ಎಂಬ ತತ್ವವನ್ನು ಜನರಲ್ಲಿ ಬಿತ್ತರಿಸಲು ಅವರು ದೇಶದಾದ್ಯಂತ ಪ್ರವಾಸ ಮಾಡಿ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಿದರು. ಯುವಜನತೆಯನ್ನು ಚಿಂತನೆಗೆ ಪ್ರೇರೇಪಿಸುವಲ್ಲಿ ಅವರು ಮಹತ್ತರ ಪಾತ್ರವಹಿಸಿದರು. ಧರ್ಮವನ್ನು ಮಾನವೀಯತೆ ಮತ್ತು ಸೇವೆಯೊಂದಿಗೆ ಜೋಡಿಸಿದ ಅವರು, ಸಮಾಜದಲ್ಲಿ ಸಮಾನತೆ ಮತ್ತು ಸಹೋದರತ್ವ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎಂದು ಸ್ವಾಮಿ ನಿರ್ಭಯಾನಂದ ಶ್ರೀಗಳು ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜದ ಮುಖಂಡ ಜೀರ್ರ ಗುರುಮೂರ್ತಿ, ರಾಮದೂತ ಕಂಪ್ಯೂಟರ್ಸ್‌ನ ಕೆ.ಎಸ್. ಬಾಬು ಅವರು ಶ್ರೀರಾಮಕೃಷ್ಣ, ಶ್ರೀಶಾರದಾಮಾತೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಳಗಲ್ಲು ಹನುಮಂತ ಹಾಗೂ ಬೆಳಗಲ್ಲು ರೇಖಾ, ಶಾರದಾ ಹಾಗೂ ದಿನಕರ್ ಅವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಮುದ್ದಟನೂರು ಎಚ್‌. ತಿಪ್ಪೇಸ್ವಾಮಿ ಹಾರ್ಮೋನಿಯಂ ಹಾಗೂ ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ಲೆಕ್ಕ ಪರಿಶೋಧಕ ಎರಿಸ್ವಾಮಿ ಚಿಲಕರಾಯಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ವಿವೇಕಮಂಟಪದ ಸಂಯೋಜಕ ಪ್ರಭುದೇವ ಕಪ್ಪಗಲ್ಲು, ಲೆಕ್ಕಪರಿಶೋಧಕರಾದ ಸಿದ್ಧರಾಮೇಶ್ವರಗೌಡ ಕರೂರು, ಕೆ.ರಾಜಶೇಖರ, ಎಬಿವಿಪಿ ಮುಖಂಡರಾದ ನಾಗರಾಜ ಬಟಗೇರಾ, ಭರತ್ ತಳವಾರ ಮತ್ತಿತರರು ಉಪಸ್ಥಿತರಿದ್ದರು.