ಸಮನ್ವಯ ಕೊರತೆ: ಬೇಲೂರು-ಹಳೇಬೀಡು ಅಭಿವೃದ್ಧಿ ಕುಂಠಿತ

| Published : Sep 25 2024, 01:02 AM IST

ಸಮನ್ವಯ ಕೊರತೆ: ಬೇಲೂರು-ಹಳೇಬೀಡು ಅಭಿವೃದ್ಧಿ ಕುಂಠಿತ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು: ಮೂರು ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರಗಳಾದ ಬೇಲೂರು, ಹಳೇಬೀಡು ಅಭಿವೃದ್ಧಿಗೆ ತೊಡಕಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಕಿಡಿಕಾರಿದರು.

ಬೇಲೂರು: ಮೂರು ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರಗಳಾದ ಬೇಲೂರು, ಹಳೇಬೀಡು ಅಭಿವೃದ್ಧಿಗೆ ತೊಡಕಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಕಿಡಿಕಾರಿದರು.

ಚನ್ನಕೇಶವ ದೇವಸ್ಥಾನದ ಮುಂಭಾಗ ಭಾರತೀಯ ಪುರಾತತ್ವ ಇಲಾಖೆ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪಂಚಾಯತಿ, ಪುರಸಭೆ, ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಪ್ರವಾಸಿಗರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ವಚ್ಛ ಭಾರತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ದೇವಸ್ಥಾನದ ಸುತ್ತಮುತ್ತ ಅಭಿವೃದ್ಧಿ ಕಾರ್ಯಕ್ಕೆ ಮುಂದಾದರೆ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ ಇಲ್ಲ ಸಲ್ಲದ ಕಾರಣ ನೀಡಿ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತಿದ್ದಾರೆ. ಮುಜರಾಯಿ ಇಲಾಖೆ ಭಕ್ತಾದಿಗಳಿಗೆ ಸೌಕರ್ಯ ಕಲ್ಪಿಸಲು ಮುಂದಾದರೆ ಪ್ರವಾಸೋದ್ಯಮ ಇಲಾಖೆಯವರು ಅಡ್ಡಗಾಲು ಹಾಕುತ್ತಿದ್ದಾರೆ. ದೇಗುಲದ ಹಿಂಭಾಗದ ಹೈಟೆಕ್ ಶೌಚಾಲಯ, ವಸತಿ ಗೃಹ , ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಹೋದರೆ ಮುಜರಾಯಿ ಇಲಾಖೆ ಅಡ್ಡಿಪಡಿಸುತ್ತಿದೆ. ಈ ಮೂರು ಇಲಾಖೆಗಳ ಸಮನ್ವಯ ಕೊರತೆಯಿಂದ ಪ್ರವಾಸಿ ಕೇಂದ್ರ ಬೇಲೂರು ತಾಲೂಕು ಅಭಿವೃದ್ಧಿಯಿಂದ ಕುಂಠಿತವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಕುಂಠಿತದಿಂದ ಪ್ರವಾಸಿಗರು ಹಾಗೂ ಚೆನ್ನಕೇಶವ ದೇಗುಲದ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ. ಈ ಎಲ್ಲಾ ಇಲಾಖೆಗಳು ಒಂದೇ ಇಲಾಖೆ ಅಡಿಯಲ್ಲಿ ತರಬೇಕೆಂದು ಅಧಿವೇಶನದಲ್ಲಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷ ಎ‌.ಆರ್.ಅಶೋಕ್ ಮಾತನಾಡಿ, ಸ್ವಚ್ಛ ಭಾರತ ಅಡಿ ಇಂದು ಮೂರು ಇಲಾಖೆಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರವಾಸಿ ಕೇಂದ್ರ ಅಭಿವೃದ್ಧಿ ಪಡಿಸುವಲ್ಲಿ ಇಲ್ಲಿನ ಶಾಸಕರು ಮುಂದಾಗುತ್ತಿಲ್ಲ. ಕೇವಲ ನೆಪ ಮಾತ್ರಕ್ಕೆ ಬಂದು ಮಾತನಾಡುತ್ತಾರೆ ಎಂದ ಅವರು, ಕೇವಲ ಒಂದು ದಿನ ಮಾತ್ರ ಸ್ವಚ್ಛತೆಗೆ ಮುಂದಾದರೆ ಸಾಲದು. ಪುರಸಭೆ ಪ್ರತಿನಿತ್ಯ ಸ್ವಚ್ಛತೆ ಮಾಡುವುದರಲ್ಲಿ ಮುಂದಾಗಿದೆ ಎಂದರು.ವಿಶ್ವ ವಿಖ್ಯಾತಿ ಪಡೆದಿರುವ ಬೇಲೂರಿಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯವಿರುವ ಶೌಚಾಲಯ ಇಲ್ಲದೆ ಪರದಾಡುವ ಸ್ಥಿತಿ ಇದೆ. ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ನವರಂಗ ಮಂಟಪ ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಸ್ಥಿತಿಯಲ್ಲಿದೆ. ಹಗಲು ಭಕ್ತರು, ರಾತ್ರಿ ನಿರಾಶ್ರೀತರು ಮಂಟಪದಲ್ಲಿ ಆಶ್ರಯ ಪಡೆಯುತ್ತಾರೆ. ಒಂದು ವೇಳೆ ಅವಘಡ ಸಂಭವಿಸಿದರೆ ಈ ಮೂರು ಇಲಾಖೆ ಹಾಗೂ ಶಾಸಕರೇ ನೆರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಕೇಂದ್ರ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಗೌತಮ್, ರಾಜ್ಯ ಪುರಾತತ್ವ ಸಹಾಯಕ ನಿರ್ದೇಶಕ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಜಯ ಪ್ರಕಾಶ್, ಮಾರ್ಗದರ್ಶಿ ಸಂಘದ ಅಧ್ಯಕ್ಷ ರಾಮಚಂದ್ರ, ಪುರಸಭೆ ಮುಖ್ಯಾಧಿಕಾರಿ ಸುಜಯ್, ದೇವಸ್ಥಾನ ಕಾರ್ಯನಿರ್ವಾಧಿಕಾರಿ ಯೋಗೀಶ್, ಪುರಸಭೆ ಅಧಿಕಾರಿಗಳು, ದೇಗುಲ ಅಧಿಕಾರಿಗಳು ಸಿಬ್ಬಂದಿಗಳು, ಪುರಸಭೆ ನೌಕರರು, ಪೌರ ಕಾರ್ಮಿಕರು ಮತ್ತಿತರರಿದ್ದರು.ಪ್ರವಾಸೋದ್ಯಮ ಇಲಾಖೆ ಸ್ವಚ್ಛತೆಗೆ ಮುಂದಾಗಿದೆ. ನಮ್ಮ ಇಲಾಖೆಯಿಂದ ಯಾವುದಾದರೂ ಅಭಿವೃದ್ಧಿ ಕಾರ್ಯಕ್ಕೆ ಮುಂದಾದರೆ ಪುರಾತತ್ವ ಇಲಾಖೆ ಮತ್ತು ಮುಜರಾಯಿ ಇಲಾಖೆ ಕಾನೂನು ಇಲ್ಲ ಸಲ್ಲದ ನೆಪ ನೀಡಿ ಅಡ್ಡಿಪಡಿಸುತ್ತಾರೆ. ಶಾಸಕರು ಹೇಳಿದಂತೆ ಮೂರು ಇಲಾಖೆಗಳು ಪರಸ್ಪರ ಒಗ್ಗೂಡಿ ಕೆಲಸ ಮಾಡಿದರೆ ಹೆಚ್ಚಿನ ಸೌಲಭ್ಯ ಒದಗಿಸಬಹುದು.- ತಿಪ್ಪೇಸ್ವಾಮಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ