ಗಂಗಾವತಿ ನಗರದ ಶ್ರೀ ಚೆನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಶ್ರೀ ಮಹಾಲಕ್ಷ್ಮೀ ಕಲಾ ಸಂಘದಿಂದ ಅಕ್ಕಮಹಾದೇವಿ ಮತ್ತು ಶಿರಿಗೇರಿಯ ಧಾತ್ರಿ ಸಂಸ್ಥೆಯ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ ನಡೆಯಿತು. ಮಹಿಳೆಯರೇ ಪಾತ್ರ ನಿರ್ವಹಿಸಿದ್ದು ವಿಶೇಷ.

ಗಂಗಾವತಿ: ಇತ್ತೀಚಿನ ದಿನಗಳಲ್ಲಿ ರಂಗಭೂಮಿಗೆ ಪ್ರೋತ್ಸಾಹದ ಕೊರತೆಯಾಗಿದೆ ಎಂದು ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅಧ್ಯಕ್ಷೆ ಮಾಲತಿ ಸುಧೀರ್ ಕಳವಳ ವ್ಯಕ್ತ ಪಡಿಸಿದರು.

ನಗರದ ಶ್ರೀ ಚೆನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಶ್ರೀ ಮಹಾಲಕ್ಷ್ಮೀ ಕಲಾ ಸಂಘ ಏರ್ಪಡಿಸಿದ್ದ ಅಕ್ಕಮಹಾದೇವಿ ಮತ್ತು ಶಿರಿಗೇರಿಯ ಧಾತ್ರಿ ಸಂಸ್ಥೆಯ ಸಂಸಾರದಲ್ಲಿ ಸನಿದಪ ನಾಟಕ ಉದ್ಘಾಟಿಸಿ ಅವರು ಮತನಾಡಿದರು. ತಾವು 30-40 ವರ್ಷಗಳ ಹಿಂದೆ ಈ ಭಾಗದಲ್ಲಿ ನಾಟಕಗಳನ್ನು ಪ್ರದರ್ಶಿಸುವಾಗ ಸಾಕಷ್ಟು ಕಲಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಮತ್ತು ಟಿವಿಗಳ ಹಾವಳಿಯಿಂದ ರಂಗಭೂಮಿಗೆ ಧಕ್ಕೆ ಬಂದಿದೆ ಎಂದರು. ತಾವು ಕಷ್ಟಕಾಲದಲ್ಲಿ ಗಂಗಾವತಿಯಲ್ಲಿ ನಾಟಕ ಕಂಪನಿ ಹಾಕಿದ್ದ ಸಂದರ್ಭದಲ್ಲಿ ಪುಣ್ಯಸ್ಥಳ ಕೈ ಹಿಡಿದು ಪ್ರೋತ್ಸಾಹಿಸಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಅಂಗೈಯಲ್ಲಿ ಮನೋರಂಜನೆ ಸಿಗುತ್ತಿದ್ದು, ರಂಗ ಮಂದಿರಕ್ಕೆ ತೆರಳಿ ನಾಟಕಗಳನ್ನು ವೀಕ್ಷಿಸುತ್ತಿರುವ ಸಂಖ್ಯೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರೆ ಪಾತ್ರಗಳನ್ನು ಆಯ್ಕೆ ಮಾಡಿ ಅಕ್ಕಮಹಾದೇವಿ ನಾಟಕ ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ನಗರ ಕಲೆ-ಸಂಸ್ಕೃತಿಯ ತವರೂರು ಎನಿಸಿಕೊಂಡಿದೆ. ಇಲ್ಲಿ ನಡೆಯುವ ನಾಟಕ ಸೇರಿದಂತೆ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.

ನಂದಿಪುರ ಡಾ. ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಕೇಸರಹಟ್ಟಿ ಮಾತನಾಡಿ, ನಾಟಕ ಪ್ರದರ್ಶನಕ್ಕೆ ಗಣ್ಯರ ಸಹಕಾರ ಕಾರಣ ಎಂದರು.

ನಾಟಕಕಾರ ಎಸ್.ವಿ. ಪಾಟೀಲ್ ಗುಂಡೂರು, ರೇವಣಸಿದ್ದಯ್ಯಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಶಂಕರಗೌಡ ಹೊಸಳ್ಳಿ, ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ಸರೋಜಾ ಮಲ್ಲಿಕಾರ್ಜುನ ನಾಗಪ್ಪ, ಜ್ಯೋತಿ ಜಾಜಪ್ಪ ನ್ಯಾಮಗೌಡರ್, ಅನ್ನಪೂರ್ಣಾಸಿಂಗ್, ಶೈಲಜಾ ಹಿರೇಮಠ, ಸುನೀತಾ ಶ್ಯಾವಿ, ಗೀತಾ ವಿಕ್ರಂ, ಶಿವಪ್ಪ ಗಾಳಿ, ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ನಾಗರಾಜ ಇಂಗಳಗಿ, ಗಿರಿಧರ ಜೂರಟಗಿ, ರಾಘವೇಂದ್ರ ದಂಡಿನ್, ಶ್ರವಣಕುಮಾರ ರಾಯ್ಕರ್ ಇದ್ದರು.