ಪ್ರಿಯಾಂಕಾಗೆ ಅನುಭವ ಕೊರತೆ ಅಪ್ರಸ್ತುತ: ರಾಜು ಕಾಗೆ

| Published : Mar 30 2024, 12:51 AM IST

ಸಾರಾಂಶ

ರಾಜಕೀಯ ಕ್ಷೇತ್ರದಲ್ಲಿ ಅನುಭವ ಕಾಲಾನುಕ್ರಮವಾಗಿ ಬರುತ್ತದೆ. ಪ್ರಿಯಾಂಕಾ ಜಾರಕಿಹೊಳಿ ಅವರ ಮನೆಯಲ್ಲಿ ರಾಜಕೀಯ ನಾಯಕರು ಇರುವಾಗ ರಾಜಕೀಯ ಅನುಭವ ಕೊರತೆ ಕಾಣುವುದಿಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ರಾಜಕೀಯ ಕ್ಷೇತ್ರದಲ್ಲಿ ಅನುಭವ ಕಾಲಾನುಕ್ರಮವಾಗಿ ಬರುತ್ತದೆ. ಪ್ರಿಯಾಂಕಾ ಜಾರಕಿಹೊಳಿ ಅವರ ಮನೆಯಲ್ಲಿ ರಾಜಕೀಯ ನಾಯಕರು ಇರುವಾಗ ರಾಜಕೀಯ ಅನುಭವ ಕೊರತೆ ಕಾಣುವುದಿಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದರು.

ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಜಾರಕಿಹೊಳಿ ಅವರು ಅತಿ ಚಿಕ್ಕ ವಯಸ್ಸು ಅನುಭವದ ಕೊರತೆ ಇದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಸಣ್ಣ ವಯಸ್ಸು ದೊಡ್ಡ ವಯಸ್ಸು ಎಂಬ ಚರ್ಚೆ ಅಪ್ರಸ್ತುತ. ಪ್ರಿಯಾಂಕಾ ಅವರ ಕುಟುಂಬದಲ್ಲಿ ಹಲವಾರು ಜನ ರಾಜಕೀಯ ಕ್ಷೇತ್ರದಲ್ಲಿ ಇರುವುದರಿಂದ ಅನುಭವದ ಕೊರತೆ ಮತ್ತು ಚಿಕ್ಕ ವಯಸ್ಸು ಎಂದು ಹೇಳುವುದಕ್ಕೆ ಬರಲ್ಲ ಎಂದು ಸಮರ್ಥಿಸಿಕೊಂಡರು.

ಮೀನಿನ ಮರಿಗೆ ಈಜು ಕಲಿಸುವ ಅವಶ್ಯಕತೆಯಿಲ್ಲ. ಅದು ತಂತಾನೆ ಈಜುತ್ತದೆ. ಅದೇ ತೆರನಾಗಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ರಾಜಕಾರಣ ಕಲಿಸಬೇಕಿಲ್ಲ. ಅದು ಅವರ ರಕ್ತದಲ್ಲಿಯೇ ಇದೆ. ನಾವು ಕೂಡ ಮೊದಲಿಗೆ ರಾಜಕಾರಣಕ್ಕೆ ಬಂದಾಗ ನಮಗೂ ಮಾತನಾಡಲು ಬರುತ್ತಿರಲಿಲ್ಲ. ನಾವು ಕಾಲಾನುಕ್ರಮವಾಗಿ ಪ್ರಭುತ್ವ ಸಾಧಿಸಿದ್ದೇವೆ. ನಾವು ಹಿರಿಯರು ಆಗಿರುವುದರಿಂದ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತ ಅವರನ್ನು ಉತ್ತುಂಗ ಸ್ಥಾನಕ್ಕೆ ಕರೆದುಕೊಂಡು ಹೋಗಿ ದೇಶಸೇವೆ ಮಾಡುವಂತೆ ಮಾರ್ಗದರ್ಶನ ನೀಡುತ್ತೇವೆ. ಪ್ರಿಯಾಂಕಾ ಪದವಿಧರೆಯಾಗಿದ್ದು, ಇಂಗ್ಲಿಷ್‌, ಹಿಂದಿ ಭಾಷೆಯ ಮೇಲೆ ಪ್ರಭುತ್ವ ಹೊಂದಿದ್ದಾರೆ ಎಂದು ಹೇಳಿದರು.

ಪ್ರಿಯಾಂಕಾ ಜಾರಕಿಹೊಳಿಯರಿಗೆ ಮಾರ್ಗದರ್ಶಕರಾಗಿ ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ನಾನು, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ, ಸತೀಶ ಜಾರಕಿಕೊಳಿ, ಲಕ್ಷ್ಮೀ ಹೆಬ್ಬಾಳಕರ್‌ ಆದಿಯಾಗಿ ಮಾರ್ಗದರ್ಶನ ನೀಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಸಾರ್ವಜನಿಕರ ಸೇವೆಗೆ ಯುವಕರನ್ನು ತೊಡಗಿಸಿಕೊಳ್ಳುವಂತೆ ಜವಾಬ್ದಾರಿ ವಹಿಸುತ್ತೇವೆ ಎಂದು ಹೇಳಿದರು.

ಮಠಗಳಿಗೆ ಸಚಿವ ಸತೀಶ ಜಾರಕಿಹೊಳಿ ಭೇಟಿ

ಯಮಕನಮರಡಿ: ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹುಕ್ಕೇರಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಘೋಡಗೇರಿ ಗ್ರಾಮದ ಶ್ರೀ ಶಿವಾನಂದ ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಶ್ರೀ ಮಲ್ಲಯ್ಯ ಸ್ವಾಮೀಜಿಯನ್ನು ಸನ್ಮಾನಿಸಿದರು. ಹಿರಿಯ ಮುಖಂಡ ಬಸವರಾಜ ಮಟಗಾರ, ಮಾಜಿ ಸಚಿವ ಶಶಿಕಾಂತ ನಾಯಿಕ, ಅಶೋಕ ಅಂಕಲಗಿ, ಶ್ರೀಕಾಂತ ಹತನೂರಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ನಂತರ ಸಚಿವ ಸತೀಶ ಜಾರಕಿಹೊಳಿ ಘೋಡಗೇರಿಯ ವಿರಕ್ತಮಠಕ್ಕೆ ಭೇಟಿ ನೀಡಿ ಶ್ರೀ ಕಾಶಿನಾಥ ಸ್ವಾಮೀಜಿಯಿಂದ ಸತ್ಕಾರ ಸ್ವೀಕರಿಸಿದರು.