ಸಾರಾಂಶ
- ನಾಗರಿಕ ಸಮಿತಿ, ನಿವಾಸಿಗಳ ಮನವೊಲಿಸಿ, ಹೋರಾಟ ಕೈಬಿಡಿಸುವಲ್ಲಿ ಸಮರ್ಥ ಯಶಸ್ವಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮೂಲಸೌಕರ್ಯ ಕಲ್ಪಿಸುವಂತೆ ನಿರಂತರ ಮಾಡಿದ್ದ ಮನವಿಗೆ ಯಾರೊಬ್ಬರೂ ಸ್ಪಂದಿಸದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವುದಾಗಿ ನಗರದ ಮಹಾಲಕ್ಷ್ಮೀ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಎಚ್ಚರಿಸಿದೆ.ನಗರದ ಉತ್ತರ ವಿಧಾನಸಭಾ ಕ್ಷೇತ್ರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ಭಾನುವಾರ ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಪಿ.ಪ್ರಕಾಶಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅನೇಕ ವರ್ಷದಿಂದಲೂ ಅಗತ್ಯ ಮೂಲ ಸೌಕರ್ಯಗಳನ್ನೇ ಕಲ್ಪಿಸಿಲ್ಲ ಎಂದರು.
ಬಡಾವಣೆಯಲ್ಲಿ ಸೌಲಭ್ಯ ಕೊರತೆಗಳ ಬಗ್ಗೆ ಎಲ್ಲ ಸಚಿವರು, ಶಾಸಕರು, ಜಿಲ್ಲಾಡಳಿತ, ದೂಡಾ, ಪಾಲಿಕೆ ಗಮನಕ್ಕೆ ತಂದಿದ್ದೇವೆ. ಲಿಖಿತ ಮನವಿ ಕೊಟ್ಟರೂ ಸ್ಪಂದಿಸಿಲ್ಲ. ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಹಿಷ್ಕರಿಸಲು ಒಮ್ಮತದಿಂದ ತೀರ್ಮಾನಿಸಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಚಂದ್ರಶೇಖರಪ್ಪ, ರವಿಕುಮಾರ ಎಸ್.ಕುಲಕರ್ಣಿ, ಸುರೇಶ, ಎಸ್.ಪ್ರಸಾದ, ಪಿ.ಬಿ.ಶಿವಕುಮಾರ, ಎನ್.ಎಚ್.ಮೌನೇಶ್ವರ ಇತರರು ಇದ್ದರು.
- - -ಬಾಕ್ಸ್ ಬಡಾವಣೆಗೆ ಸಮರ್ಥ ಶಾಮನೂರು ಭೇಟಿಮೂಲ ಸೌಕರ್ಯ ಕಲ್ಪಿಸುವಂತೆ ಮಹಾಲಕ್ಷ್ಮೀ ಲೇಔಟ್ ನಿವಾಸಿಗಳು ಲೋಕಸಭೆ ಚುನಾವಣೆಗೆ ಬಹಿಷ್ಕರಿಸುವ ಘೋಷಣೆ ಮಾಡಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಹಿರಿಯ ಪುತ್ರ ಸಮರ್ಥ ಎಂ. ಶಾಮನೂರು ಬಡಾವಣೆಗೆ ಭೇಟಿ ನೀಡಿದರು. ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ಸ್ಥಳೀಯ ನಿವಾಸಿಗಳ ಜೊತೆಗೆ ಚರ್ಚಿಸಿ, ಮತದಾನಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾದರು.
ಸಮರ್ಥ ಶಾಮನೂರು ಮಾತನಾಡಿ, ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು. ಅಂಬೇಡ್ಕರ್ ಜಯಂತಿ ದಿನದಂದೇ ಸಂವಿಧಾನದ ಪ್ರಥಮ ಹಕ್ಕು ಮತದಾನ ಬಹಿಷ್ಕರಿಸಿ, ಅವಮಾನಿಸುವುದು ಸರಿಯಲ್ಲ. ನಿಮ್ಮ ಕುಂದು ಕೊರತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಸಮಸ್ಯೆ ಪರಿಹರಿಸುವ ಕೆಲಸವನ್ನು ಸಚಿವರು ಶುರು ಮಾಡಿದ್ದಾರೆ. ಆತಂಕಪಡಬೇಕಿಲ್ಲ. ಖುಷಿಯಿಂದ ಮತಗಟ್ಟೆಗೆ ತೆರಳಿ, ಮತ ಚಲಾಯಿಸಿ ಎಂದು ಮನವಿ ಮಾಡಿದರು.ಕಡೆಗೆ ಸಮರ್ಥ ಮಾತಿಗೆ ಕಿವಿಗೊಟ್ಟ ಸಮಿತಿ ಪದಾಧಿಕಾರಿ, ನಿವಾಸಿಗಳು ಪ್ರತಿಭಟನೆ ಹಿಂಪಡೆದರು.
-14ಕೆಡಿವಿಜಿ5:ದಾವಣಗೆರೆ ಮಹಾಲಕ್ಷ್ಮಿ ಬಡಾವಣೆ ನಾಗರೀಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ನಿವಾಸಿಗಳನ್ನು ಭೇಟಿ ಮಾಡಿದ ಸಮರ್ಥ ಎಂ.ಶಾಮನೂರು ಮತದಾನಕ್ಕೆ ಸಹಕರಿಸುವಂತೆ ಮನವೊಲಿಸಿದರು.