ವಿಶ್ವವಿದ್ಯಾಲಯ ತೆರೆಯುವಲ್ಲಿ ದೂರದೃಷ್ಟಿ ಕೊರತೆ: ಸಚಿವ ಡಾ.ಎಂ.ಸಿ.ಸುಧಾಕರ್

| Published : Sep 14 2024, 01:51 AM IST

ವಿಶ್ವವಿದ್ಯಾಲಯ ತೆರೆಯುವಲ್ಲಿ ದೂರದೃಷ್ಟಿ ಕೊರತೆ: ಸಚಿವ ಡಾ.ಎಂ.ಸಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಿಂದ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಶುರುವಾಯಿತು. ಸಿದ್ದರಾಮಯ್ಯನವರ ಅವಧಿಯಲ್ಲಿ ನಾಲ್ಕು ವಿವಿಗಳಿಗೆ ಅನುಮತಿ ನೀಡಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರ ಏಳು ವಿವಿಗಳಿಗೆ ಅನುಮತಿ ನೀಡಿತು. ಇದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹೊರತುಪಡಿಸಿದಂತೆ ಉಳಿದೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಮಸ್ಯೆಗಳು, ಸೌಲಭ್ಯಗಳ ಕೊರತೆ, ಬೋಧಕರ ಕೊರತೆ ಇರುವುದಾಗಿ ಒಪ್ಪಿಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಗಳು ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯುವ ಸಮಯದಲ್ಲಿ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ಸಾಧಕ-ಬಾಧಕಗಳನ್ನು ಅರಿಯದೆ, ವೈಜ್ಞಾನಿಕ ವಿಧಾನವನ್ನು ಅನುಸರಿಸದಿರುವುದರಿಂದ ಸಾಕಷ್ಟು ಗೊಂದಲಗಳು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿವೆ. ಈ ವಿಷಯವಾಗಿ ಸರ್ಕಾರಗಳು ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಿಂದ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಶುರುವಾಯಿತು. ಸಿದ್ದರಾಮಯ್ಯನವರ ಅವಧಿಯಲ್ಲಿ ನಾಲ್ಕು ವಿವಿಗಳಿಗೆ ಅನುಮತಿ ನೀಡಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರ ಏಳು ವಿವಿಗಳಿಗೆ ಅನುಮತಿ ನೀಡಿತು. ಇದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹೊರತುಪಡಿಸಿದಂತೆ ಉಳಿದೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಮಸ್ಯೆಗಳು, ಸೌಲಭ್ಯಗಳ ಕೊರತೆ, ಬೋಧಕರ ಕೊರತೆ ಇರುವುದಾಗಿ ಒಪ್ಪಿಕೊಂಡರು. ಪ್ರಸ್ತುತ ೩೦ ಖಾಸಗಿ ವಿವಿಗಳು ರಾಜ್ಯದಲ್ಲಿವೆ ಎಂದು ವಿವರಿಸಿದರು.

ಹಿಂದೆ ವಿಶ್ವವಿದ್ಯಾಲಯಗಳಿಗಿದ್ದ ಗೌರ, ಸ್ಥಾನ-ಮಾನ ಈಗಿಲ್ಲ. ವಿಶ್ವವಿದ್ಯಾಲಯಗಳು ಹೆಚ್ಚಾದಷ್ಟು ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರಿಂದ ಅವುಗಳಿಗಿದ್ದ ಗೌರವ-ಘನತೆಯನ್ನು ಕುಂದಿದೆ. ಹಾಲಿ ಏಳು ವಿಶ್ವವಿದ್ಯಾಲಯಗಳ ಸಮಸ್ಯೆ ನಿವಾರಣೆಗೆ ೩೫೦ ಕೋಟಿ ರು. ಅಗತ್ಯವಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿಲ್ಲ. ಎಲ್ಲದಕ್ಕೂ ಸರ್ಕಾರವೇ ನೇರವಾಗಿ ಹಣಕಾಸಿನ ನೆರವು ನೀಡಬೇಕಿದೆ. ಯುಜಿಸಿ ಅನುದಾನದ ವಿಷಯದಲ್ಲಿ ಗೊಂದಲಗಳಿವೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ವಿಶ್ವವಿದ್ಯಾಲಯಗಳ ಸ್ಥಾಪನೆ ವೇಳೆ ದೂರದೃಷ್ಟಿ ಇರಬೇಕಿತ್ತು. ಹೊಸ ಕಟ್ಟಡಗಳನ್ನು ಕಟ್ಟುವಂತಿಲ್ಲ, ಸ್ಥಳ ಖರೀದಿ ಮಾಡುವಂತಿಲ್ಲ ಎಂಬ ನಿಯಮಾವಳಿಗಳು, ಬೇರೆ ವಿಶ್ವವಿದ್ಯಾಲಯವಾದ ಬಳಿಕ ಬೋಧಕರ ಸೇವಾವಧಿ ಶೂನ್ಯಗೊಳ್ಳಲಿದೆ ಎಂಬ ವಿಚಾರಗಳಿಂದ ಗೊಂದಲಗಳು ಸೃಷ್ಟಿಯಾಗಿ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದರು.

ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ. ಸಮಿತಿ ಇನ್ನೂ ಒಂದು ಸಭೆಯನ್ನೂ ನಡೆಸಿಲ್ಲ. ಅಮೆರಿಕಾ ಪ್ರವಾಸದಿಂದ ಶಿವಕುಮಾರ್ ವಾಪಸಾದ ಬಳಿಕ ಆ ವಿಷಯವಾಗಿ ಚರ್ಚಿಸಲಾಗುವುದು ಎಂದು ನುಡಿದರು.

ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹಾಜರಿದ್ದರು.