ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ. ಆದರೆ, ನಿರೀಕ್ಷೆಯಷ್ಟು ಅನುದಾನ ಸಿಗದೇ ಕಾಂಗ್ರೆಸ್ ಸರ್ಕಾರ ಕ್ಷೇತ್ರಕ್ಕೆ ನೀಡುತ್ತಿರುವ ಅಲ್ಪಸ್ವಲ್ಪ ಅನುದಾನದಲ್ಲೇ ಆದಷ್ಟು ಕೆಲಸ ಮಾಡುತ್ತಿರುವುದಾಗಿ ಶಾಸಕ ಎಚ್.ಟಿ.ಮಂಜು ಹೇಳಿದರು.

ಗಂಗೇನಹಳ್ಳಿಯಲ್ಲಿ 50 ಲಕ್ಷ ರು. ವೆಚ್ಚದ ರಸ್ತೆ ಮತ್ತು ಒಳ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ವಿಪಕ್ಷ ಶಾಸಕನಾಗಿರುವ ಕಾರಣ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ನೀಡುತ್ತಿರುವ ಅನುದಾನವನ್ನು ನನ್ನ ಕ್ಷೇತ್ರಕ್ಕೆ ಈ ಸರ್ಕಾರ ನೀಡುತ್ತಿಲ್ಲ. ಅನುದಾನದ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿರುವುದು ನನ್ನನ್ನು ಕಾಡುತ್ತಿದೆ ಎಂದರು.

2028ಕ್ಕೆ ಜೆಡಿಎಸ್-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಮತ್ತೊಮ್ಮೆ ತನ್ನನ್ನು ಶಾಸಕರಾಗಿ ಮಾಡಿದರೆ ತಾಲೂಕಿನ ಜನರ ಋಣ ತೀರಿಸಲು 2 ಸಾವಿರ ರು. ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದರು.ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಈ ಮಹಾನ್ ಚೇತನಗಳನ್ನು ಪೂಜಿಸುವ ಗ್ರಾಮ ಇದಾಗಿದೆ. ಈ ಮಹಾನೀಯರು ದಲಿತರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅಂಬೇಡ್ಕರ್‌ ಜನ್ಮ ದಿನವನ್ನು ಇಡೀ ವಿಶ್ವವೇ ವಿಶ್ವಜ್ಞಾನಿ ದಿನವನ್ನಾಗಿ ಆಚರಣೆ ಮಾಡುತ್ತಿದೆ ಎಂದರು.

ಗ್ರಾಮಸ್ಥರು ಗುಣಮಟ್ಟದ ಕಾಮಗಾರಿಗೆ ಕಾಳಜಿ, ಉಸ್ತುವಾರಿ ವಹಿಸಬೇಕು. ನಿಮ್ಮ ಸಮುದಾಯದ ಹಿತಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧನಿರುವೆ. ದಿನದ 24 ಗಂಟೆಗಳ ಕಾಲ ಸಿಗುವ ತಾಲೂಕಿನ ಏಕೈಕ ಶಾಸಕ ನಾನು. ಅಂಜಿಕೆ ಬಿಟ್ಟು ತಮ್ಮ ಸಮಸ್ಯೆ ತಿಳಿಸಿದರೆ ಸಲಹೆ ನೀಡಿ ಸ್ವೀಕರಿಸಿ ನಿವಾರಿಸುವುದಾಗಿ ಮನವಿ ಮಾಡಿದರು.


ಈ ವೇಳೆ ಮುಖಂಡರಾದ ಗಂಗೇನಹಳ್ಳಿ ಕೃಷ್ಣಯ್ಯ, ಸಂಜಯ್, ರಾಮು, ಮಧು, ತಾಲೂಕು ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಮೆಣಸ ಮಹಾದೇವೇಗೌಡ, ಕಿಕ್ಕೇರಿ ಹೋಬಳಿ ಜೆಡಿಎಸ್‌ ಅಧ್ಯಕ್ಷ ಕಾಯಿ ಮಂಜೇಗೌಡ, ಕೆ.ಜಿ.ಪುಟ್ಟರಾಜು, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶೇಖರ್, ಕೆ.ಆರ್.ಐ.ಡಿ.ಎಲ್‌ ಇಂಜಿನಿಯರ್‌ ಚೇತನ್‌ ಮತ್ತಿತರರಿದ್ದರು.