ಅನುದಾನ ಕೊರತೆ: ಮಂಡ್ಯ ವಿವಿ ಅಭಿವೃದ್ಧಿಗೆ ಗ್ರಹಣ

| Published : Jan 10 2024, 01:46 AM IST

ಸಾರಾಂಶ

ಮಂಡ್ಯ ವಿಶ್ವವಿದ್ಯಾಲಯ ರಚನೆಯಾಗಿ ಐದು ವರ್ಷಗಳಾದರೂ ಇದುವರೆಗೂ ಸಂಪೂರ್ಣವಾಗಿ ಸಿಂಡಿಕೇಟ್ ರಚನೆಯಾಗಿಲ್ಲ. ೨೨ ಜನರಿರಬೇಕಾದ ಸಿಂಡಿಕೇಟ್‌ನಲ್ಲಿ ೧೪ ಜನರ ಹೆಸರು ಮಾತ್ರ ಅಂತಿಮಗೊಂಡಿದೆ. ಇನ್ನೂ ೮ ಜನರ ಆಯ್ಕೆ ಅಂತಿಮಗೊಳ್ಳಬೇಕಿದೆ.

ಎರಡು ವರ್ಷದಿಂದ ನಡೆಯದ ಘಟಿಕೋತ್ಸವ । ೧೫೦೦ ವಿದ್ಯಾರ್ಥಿಗಳಿಗೆ ಸಿಗದ ಪದವಿ ಪ್ರಮಾಣಪತ್ರ । ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ ಇಲ್ಲ

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯ ರಚನೆಯಾಗಿ ಐದು ವರ್ಷವಾಗಿದೆ. ನಿಗದಿತ ಸಮಯಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಪ್ರತಿ ವರ್ಷವೂ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದ್ದರೂ ವಿಶ್ವವಿದ್ಯಾಲಯದ ಅಗತ್ಯ ಕೆಲಸಗಳಿಗೆ ಹಣ ಮಾತ್ರ ಬಿಡುಗಡೆಯಾಗುತ್ತಲೇ ಇಲ್ಲ. ಎರಡು ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲು ಸಾಧ್ಯವಾಗಿಲ್ಲ. ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಲ್ಲ. ಮೂಲ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಹಣವನ್ನು ನೀಡಿಲ್ಲ. ಇವೆಲ್ಲಾ ಕಾರಣಗಳಿಂದ ಮಂಡ್ಯ ವಿಶ್ವವಿದ್ಯಾಲಯ ಪರಿಪೂರ್ಣ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಲು ಸಾಧ್ಯವಾಗಿಲ್ಲ.

ಮಂಡ್ಯ ವಿಶ್ವವಿದ್ಯಾಲಯ ರಚನೆಯಾಗಿ ಐದು ವರ್ಷಗಳಾದರೂ ಇದುವರೆಗೂ ಸಂಪೂರ್ಣವಾಗಿ ಸಿಂಡಿಕೇಟ್ ರಚನೆಯಾಗಿಲ್ಲ. ೨೨ ಜನರಿರಬೇಕಾದ ಸಿಂಡಿಕೇಟ್‌ನಲ್ಲಿ ೧೪ ಜನರ ಹೆಸರು ಮಾತ್ರ ಅಂತಿಮಗೊಂಡಿದೆ. ಇನ್ನೂ ೮ ಜನರ ಆಯ್ಕೆ ಅಂತಿಮಗೊಳ್ಳಬೇಕಿದೆ.

೪೪ ಕೋಟಿ ರು. ಬಿಡುಗಡೆ:

೨೦೨೧ರಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಕೇಂದ್ರೀಯ ಪ್ರಾಯೋಜಿತ ಯೋಜನೆಯಾದ ರೂಸಾ ಅಭಿವೃದ್ಧಿ ಸಂಸ್ಥೆ ಮೂಲಕ ೪೪ ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಕಲಾಭವನ, ಆಡಳಿತ ಭವನ, ಗ್ರಂಥಾಲಯ, ವಾಣಿಜ್ಯ ಭವನ ಮೊದಲನೇ ಮತ್ತು ಎರಡನೇ ಬ್ಲಾಕ್‌ಗಳನ್ನು ನಿರ್ಮಿಸಲಾಗಿತ್ತು. ಈಗ ಈ ಕಟ್ಟಡಗಳಲ್ಲೇ ವಿಶ್ವವಿದ್ಯಾಲಯದ ತರಗತಿಗಳು ನಡೆಯುತ್ತಿವೆಯಾದರೂ ಬೋಧಕ-ಬೋಧಕೇತರ ಸಿಬ್ಬಂದಿ ನೇಮಕವಾಗದೆ ಅತಿಥಿ ಉಪನ್ಯಾಸಕರ ಆಶ್ರಯದಲ್ಲೇ ತರಗತಿಗಳು ನಡೆಯುತ್ತಿವೆ.

೭೫ ಕೋಟಿ ರು. ಅನುದಾನ ಬೇಕು:

ರೂಸಾ ಅನುದಾನದಲ್ಲಿ ಕಟ್ಟಡಗಳನ್ನು ಮಾತ್ರ ನಿರ್ಮಿಸಿದ್ದು, ೫ ಕೋಟಿ ರು. ವೆಚ್ಚದಲ್ಲಿ ಪ್ರವೇಶದ್ವಾರ, ಭದ್ರತಾ ಸಿಬ್ಬಂದಿ ಕೊಠಡಿಯನ್ನೊಳಗೊಂಡ ಕಮಾನು, ಕಾಂಪೌಂಡ್ ಗೋಡೆ, ಒಳಚರಂಡಿ ನಿರ್ಮಾಣ. ೬ ಕೋಟಿ ರು. ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಕ್ರೀಡಾ ಚಟುವಟಿಕೆಗೆ ಹೊರಾಂಗಣ ಕ್ರೀಡಾಂಗಣ, ೧ ಕೋಟಿ ರು. ವೆಚ್ಚದಲ್ಲಿ ವಾಹನಗಳ ಪಾರ್ಕಿಂಗ್ ಸ್ಥಳ, ೧೦ ಕೋಟಿ ರು. ವೆಚ್ಚದಲ್ಲಿ ಕುಲಪತಿ ನಿವಾಸ, ಸಿಬ್ಬಂದಿ ವಸತಿ ಗೃಹ, ವಿವಿದೋದ್ದೇಶದ ಒಳಾಂಗಣ ಆಡಿಟೋರಿಯಂಗೆ ೪೦ ಕೋಟಿ ರು. ಸೇರಿದಂತೆ ವಿಶ್ವವಿದ್ಯಾಲಯದ ಆವರಣದೊಳಗೆ ರಸ್ತೆ ನಿರ್ಮಾಣ, ಹಳೆಯ ಕಟ್ಟಡಗಳಿಗೆ ಬಣ್ಣ ಮಾಡಿಸುವುದು ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ೭೫ ಕೋಟಿ ರು. ಅನುದಾನದ ಅಗತ್ಯವಿದೆ. ಇದಲ್ಲದೆ ಸರ್ಕಾರಿ ಮಹಾವಿದ್ಯಾಲಯದಲ್ಲಿ ಯುಜಿಸಿ ಅನುದಾನದಿಂದ ೪೦ ಲಕ್ಷ ರು. ನೀಡಿ ೨೦೧೪-೧೫ನೇ ಸಾಲಿನಲ್ಲಿ ಆರಂಭಿಸಿರುವ ಒಳಾಂಗಣ ಆಡಿಟೋರಿಯಂ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರ ಈಗಿನ ಅಂದಾಜು ವೆಚ್ಚ ೩ ಕೋಟಿ ರು.ಗಳಾಗಿದ್ದು, ಇದನ್ನು ಪೂರ್ಣಗೊಳಿಸುವುದಕ್ಕೂ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಸಿಬ್ಬಂದಿ ಕೊರತೆ:

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಹಲವಾರು ಪ್ರಮುಖ ಹುದ್ದೆಗಳು ಖಾಲಿ ಉಳಿದಿವೆ. ಡೆಪ್ಯುಟಿ ರಿಜಿಸ್ಟ್ರಾರ್, ಅಸಿಸ್ಟೆಂಟ್ ರಿಜಿಸ್ಟ್ರಾರ್, ಸೂಪರಿಂಟೆಂಡೆಂಟ್, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರು, ಅಟೆಂಡರ್, ಡಿ-ಗ್ರೂಪ್ ನೌಕರರು, ವಾಚ್‌ಮನ್‌ಗಳು, ಸ್ವೀಪರ್ಸ್‌ಗಳ ಅಗತ್ಯವಿದೆ. ಸಿಬ್ಬಂದಿ ಕೊರತೆ ನಡುವೆ ವಿಶ್ವವಿದ್ಯಾಲಯ ಮುಂದುವರೆದಿದೆ.

ಹೊಸ ಕೋರ್ಸ್‌ಗಳಿಲ್ಲ:

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ ತರಗತಿಗಳು ಮಾತ್ರ ನಡೆಯುತ್ತಿವೆ. ಇದೊಂದು ರೀತಿಯಲ್ಲಿ ವಿಶ್ವವಿದ್ಯಾಲಯದ ಮಾದರಿಯಲ್ಲಿರದೆ ಪದವಿ ಕಾಲೇಜು ಮಟ್ಟದಲ್ಲೇ ಶಿಕ್ಷಣವನ್ನು ನೀಡಲಾಗುತ್ತಿದೆ. ಎಂಬಿಎ, ಎಂಸಿಎ ಸೇರಿದಂತೆ ಹೊಸ ಕೋರ್ಸ್‌ಗಳನ್ನು ಅಳವಡಿಸಲಾಗಿಲ್ಲ. ಇದಲ್ಲದೆ ಕೌಶಲ್ಯಾಧಾರಿತ, ಸಂಶೋಧನಾತ್ಮಕ ಹಾಗೂ ತಾಂತ್ರಿಕವಾಗಿಯೂ ಶಿಕ್ಷಣವನ್ನು ಕಲಿಯುವುದಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕಿದೆ. ಈ ಅವಕಾಶಗಳು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊರ ರಾಜ್ಯದ ಹಾಗೂ ವಿದೇಶ ವಿದ್ಯಾರ್ಥಿಗಳಿಗೂ ಸಂಶೋಧನೆಗೆ ನೆರವಾಗುವಂತೆ ಮಂಡ್ಯ ವಿಶ್ವವಿದ್ಯಾಲಯವನ್ನು ಉನ್ನತಮಟ್ಟಕ್ಕೇರಿಸಬೇಕಿದ್ದರೂ ಆ ನಿಟ್ಟಿನಲ್ಲಿ ಸರ್ಕಾರದಿಂದ ಗಂಭೀರ ಪ್ರಯತ್ನಗಳೇ ನಡೆಯುತ್ತಿಲ್ಲ.

ನಗರದಲ್ಲಿರುವ ಮಂಡ್ಯ ವಿಶ್ವವಿದ್ಯಾಲಯ ವಿಸ್ತೀರ್ಣ ೩೨ ಎಕರೆ ಇದ್ದು, ಹೊಸ ಕೋರ್ಸ್‌ಗಳ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಅದಕ್ಕಾಗಿ ತೂಬಿನಕೆರೆ ಬಳಿ ಇರುವ ೯೩ ಎಕರೆ ಪ್ರದೇಶದಲ್ಲಿ ಎಂಬಿಎ, ಎಂಸಿಎ ಸೇರಿದಂತೆ ಹೊಸ ಕೋರ್ಸ್‌ಗಳ ತರಗತಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಇವೆಲ್ಲಕ್ಕೂ ಸರ್ಕಾರದಿಂದ ಮಂಜೂರಾತಿ ಮತ್ತು ಅನುದಾನ ದೊರೆಯಬೇಕಿರುವುದು ಅತ್ಯಗತ್ಯವಾಗಿದೆ.

----ಬಾಕ್ಸ್....

ಬೋಧಕ-ಬೋಧಕೇತರ ಸಿಬ್ಬಂದಿ ಮಂಜೂರಾಗಿಲ್ಲ

ಮಂಡ್ಯ ವಿಶ್ವವಿದ್ಯಾಲಯಕ್ಕೆ ೧೭೭ ಬೋಧಕ ಹಾಗೂ ೫೪ ಬೋಧಕೇತರ ಹುದ್ದೆಗಳನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾತಿ ಮಾಡಿಸಿಕೊಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರೂ ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ. ಇಲ್ಲಿಯವರೆಗೆ ೯೩ ಹುದ್ದೆಗಳ ಸೃಜನೆಗಷ್ಟೇ ಅವಕಾಶ ಮಾಡಿದೆ. ಇದರ ನಡುವೆ ಈ ಹಿಂದೆ ವಿಶ್ವವಿದ್ಯಾಲಯ ಆರಂಭ ಕಾಲದಲ್ಲಿ ಕುಲಪತಿಯಾಗಿದ್ದ ಡಾ.ಮಹದೇವಪ್ರಸಾದ್ ೩೫ ಬೋಧಕ ಹಾಗೂ ೪೫ ಜನ ಬೋಧಕೇತರ ಸಿಬ್ಬಂದಿಯನ್ನು ಸರ್ಕಾರದ ಅನುಮತಿ ಪಡೆಯದೆ ನಿಯಮಬಾಹಿರವಾಗಿ ನೇಮಕ ಮಾಡಿಕೊಂಡಿದ್ದರು. ಆನಂತರದಲ್ಲಿ ಸರ್ಕಾರ ಆ ನೇಮಕಾತಿಯನ್ನು ರದ್ದುಗೊಳಿಸಿತ್ತು. ಅದರಲ್ಲಿ ೨೮ ಬೋಧಕ ಹಾಗೂ ೨೬ ಮಂದಿ ಬೋಧಕೇತರ ಸಿಬ್ಬಂದಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅದು ಇತ್ಯರ್ಥವಾಗುವವರೆಗೂ ಬೋಧಕ ಸಿಬ್ಬಂದಿ ನೇಮಕಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ ಎಂಬ ಆತಂಕ ಕಾಡುತ್ತಿದೆ.ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನೇಮಕವಾಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ೨೮ ಬೋಧಕ ಸಿಬ್ಬಂದಿಯನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದರೂ ಇದುವರೆಗೆ ಯಾವುದೇ ಕ್ರಮ ವಹಿಸಿಲ್ಲ.

-----------

ಕೋಟ್....

ಕಳೆದ ಎರಡು ವರ್ಷಗಳಿಂದ ಮಂಡ್ಯ ವಿಶ್ವವಿದ್ಯಾಲಯದ ೧೫೦೦ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಗಿಲ್ಲ. ಇದೀಗ ಸಿಂಡಿಕೇಟ್ ರಚನೆ ಪ್ರಗತಿಯಲ್ಲಿದೆ. ಆ ಪ್ರಕ್ರಿಯೆ ಮುಗಿದ ಕೂಡಲೇ ಎರಡೂ ವರ್ಷದ ಘಟಿಕೋತ್ಸವವನ್ನು ನಡೆಸಿ ಪದವಿ ಪ್ರದಾನ ಮಾಡಲಾಗುವುದು.

- ಡಾ.ಪುಟ್ಟರಾಜು, ಉಪಕುಲಪತಿ, ಮಂಡ್ಯ ವಿಶ್ವವಿದ್ಯಾಲಯ

---------

ಕೋಟ್....

ಮಂಡ್ಯ ವಿಶ್ವವಿದ್ಯಾಲಯದ ೨೨ ಜನರ ಸಿಂಡಿಕೇಟ್‌ಗೆ ೧೪ ಜನರನ್ನು ಸರ್ಕಾರ ಅಂತಿಮಗೊಳಿಸಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೭೫ ಕೋಟಿ ರು. ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬೋಧಕ-ಬೋಧಕೇತರ ಹುದ್ದೆಗಳಿಗೂ ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾತಿ ಮಾಡಿಸಿಕೊಡುವಂತೆ ಕೋರಿದ್ದೇವೆ.

- ಡಾ.ಚಂದ್ರಯ್ಯ, ಕುಲಸಚಿವ, ಮಂಡ್ಯ ವಿಶ್ವವಿದ್ಯಾಲಯ